ಗುಂಡ್ಲುಪೇಟೆ: ದಿನಸಿ ಪದಾರ್ಥ ನೀಡುವುದಾಗಿ ನಂಬಿಸಿ ಜನರ ಬಳಿ ಲಕ್ಷಾಂತರ ರೂ ಹಣ ವಸೂಲಿ ಮಾಡಿ ವಂಚಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದ್ದು ಚಾಮರಾಜನಗರದ ಜಿಎಂಎಸ್ ಎಂಬ ಸಂಸ್ಥೆಯನ್ನ ನಂಬಿ ಕಂತಿನ ರೂಪದಲ್ಲಿ ಹಣಕಟ್ಟಿದ್ದ ಹೊನ್ನಶೆಟ್ಟರಹುಂಡಿ ಗ್ರಾಮದ ಜನರು ವಂಚುಬಾಕರ ವಿರುದ್ಧ ಪಟ್ಟಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪ್ರತಿ ತಿಂಗಳಂತೆ ಏಳು ತಿಂಗಳುಗಳವರೆಗೆ ನಮಗೆ 500 ರೂ ಹಣ ಪಾವತಿ ಮಾಡುವ ಮೂಲಕ ಶೇರ್ ಪಾರ್ಟ್ನರ್ ಆದ್ರೆ ನಿಮಗೆ ಏಳು ತಿಂಗಳ ನಂತರ ಕಡಿಮೆ ಬೆಲೆಯಲ್ಲಿ ದಿನಸಿ ಪದಾರ್ಥಗಳನ್ನ ನೇರವಾಗಿ ನಿಮ್ಮ ಮನೆಬಾಗಿಲಿಗೆ ತಲುಪಿಸುತ್ತೇವೆ ಮತ್ತು ನಮ್ಮ ಸಂಸ್ಥೆಯಲ್ಲಿ ನೋಂದಣಿ ಆದವ್ರಿಗೆ ಅನೇಕ ಸೌಲಭ್ಯವನ್ನು ನೀಡಲಾಗುತ್ತೆ ಏಳು ತಿಂಗಳ ಬಳಿಕ ಉಚಿತ ಡೋರ್ ಡಿಲಿವರಿ , ಪ್ರತಿ ತಿಂಗಳು ಲಕ್ಕಿಡಿಪ್, ಸಂಸ್ಥೆಯೊಂದಿಗೆ ಆರು ತಿಂಗಳ ವ್ಯವಹಾರದ ಬಳಿಕ 50 % ಸಾಲ ಸೌಲಭ್ಯ, ನೋಂದಣಿಯಾದ ಕುಟುಂಬದ ಸಮಾರಂಭಗಳಿಗೆ ಡಿಸ್ಕೌಂಟ್ ಮಾಡಿಕೊಡಲಾಗುತ್ತದೆ ಎಂಬ ಸುಳ್ಳು ಭರವಸೆಗಳನ್ನ ನೀಡಿ ಗ್ರಾಮಾಂತರ ಪ್ರದೇಶದಲ್ಲಿ ಲಕ್ಷಾಂತರ ರೂ ಹಣವನ್ನ ಹೊತ್ತೋಯ್ದಿದ್ದು ತಮಗೆ ಮೋಸ ಮಾಡಿರುವ ಅರಿವಾದ ಬಳಿಕ ಹಣ ಕಳೆದುಕೊಂಡ ಮಹಿಳೆಯರು ಗುಂಡ್ಲುಪೇಟೆ ಪೊಲೀಸರ ಮೊರೆ ಹೋಗಿದ್ದಾರೆ.
ಹೆಚ್ಚೇಚ್ಚಾಗಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿರುವ ಬೋಗಸ್ ಜಿಎಂಎಸ್ ಮಾರ್ಕೆಟಿಂಗ್ ವ್ಯವಸ್ಥಾಪಕ ಈಗ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾನೆ. ಕೂಲಿ ನಾಲಿ ಮಾಡಿ ಹಣ ಹೊಂದಿಸಿ ದಿನಸಿ ಆಸೆಗೆ ಮೊರೆಹೋದ ಮಹಿಳೆಯರು ಈಗ ಕೈಕೈ ಹಿಸುಕಿಕೊಳ್ಳುವಂತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ಬಂದಿಸಿದ ಪೊಲೀಸರು ಪ್ರಮುಖ ಆರೋಪಿಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕೆಲಸದ ಆಸೆಗೆ ಬೋಗಸ್ ಕಂಪನಿಗಳ ಬೆನ್ನುಬಿದ್ದ ಯುವಕರು ಮಾತ್ರ ಬಲಿಪಶುಗಳಾಗುತ್ತಿದ್ದು ಇಂಥ ವಂಚಕರ ಜಾಲಕ್ಕೆ ದಾಸರಾಗದೆ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಿದೆ.