News Kannada
Monday, February 26 2024
ಮೈಸೂರು

ಮೈಸೂರು: ಶೀಘ್ರದಲ್ಲೇ ಬಾಂಬೆ ಫೈಲ್ಸ್ ಬಿಡುಗಡೆ ಎಂದ ಎಚ್.ವಿಶ್ವನಾಥ್

Bombay Files will be released soon, says H. Vishwanath
Photo Credit : By Author

ಮೈಸೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಧೋರಣೆ ವಿರುದ್ಧ ಸಿಡಿದೆದ್ದು ನನ್ನನ್ನೂ ಒಳಗೊಂಡಂತೆ ಶಾಸಕರು ಮುಂಬೈಗೆ ಹೋಗಿದ್ದ ದಿನಗಳನ್ನು ಚಿತ್ರಿಸುವ ಬಾಂಬೆ ಫೈಲ್ಸ್ ಪುಸ್ತಕವನ್ನು ಇದೇ ವರ್ಷ ಬಿಡುಗಡೆ ಮಾಡಲಿದ್ದೇನೆ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು.

ನಗರ ಪಾಲಿಕೆ ಕಟ್ಟಡದಲ್ಲಿ ನಡೆದ ತಮ್ಮ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಸ್ತಕಕ್ಕೆ ಬಾಂಬೆ ಡೇಸ್ ಎಂದು ಹೆಸರಿಡಲು ನಿರ್ಧರಿಸಿದ್ದೆ. ಕಾಶ್ಮೀರ್ ಫೈಲ್ಸ್ ಚಲನಚಿತ್ರ ಬಂದ ಬಳಿಕ ಬಾಂಬೆ ಫೈಲ್ಸ್ ಎಂದು ಬದಲಿಸಿದ್ದೇನೆ. ಅದರಲ್ಲಿ ಬಾಂಬ್ ಇರುವುದಿಲ್ಲ. ವಾಸ್ತವಾಂಶಗಳನ್ನು ಒಳಗೊಂಡಿರಲಿದೆ ಎಂದರು.

ರಾಜಕಾರಣದ ದೊಡ್ಡ ಚರಿತ್ರೆ ಅದು. ಅದೆಲ್ಲವೂ ದಾಖಲಾಗಬೇಕು. ನಾವೆಲ್ಲರೂ ಹಣಕ್ಕಾಗಿ ಬಿಜೆಪಿ ಸೇರಿದೆವು ಎಂದೆಲ್ಲಾ ಮಾತುಗಳಿವೆ. ಅದೆಲ್ಲವೂ ಸುಳ್ಳು. ವಾಸ್ತವಾಂಶಗಳನ್ನು ಪುಸ್ತಕದಲ್ಲಿ ದಾಖಲಿಸಲಿದ್ದೇನೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಸರ್ಕಾರದ ಅಸ್ಥಿರತೆ ಬಗ್ಗೆ ಪ್ರತಿಕ್ರಿಯಿಸಿ, ಹಿಂದೆ ಕರ್ನಾಟಕದಲ್ಲಿ ಸಂಚಲನ ಮೂಡಿಸಿದ್ದ ಬೆಳವಣಿಗೆಗಳು ಈಗ ಮಹಾರಾಷ್ಟ್ರದಲ್ಲಿ ಆಗುತ್ತಿದೆ. ಅಲ್ಲಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡವಳಿಕೆಯೇ ಇದಕ್ಕೆ ಕಾರಣ. ಮುಖ್ಯಮಂತ್ರಿಯಾದವರು ಸರ್ವಾಧಿಕಾರಿಯಾದರೆ ಹೀಗಾಗುತ್ತದೆ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಶಾಸಕರು ಸಿಡಿದೇಳುತ್ತಾರೆ. ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗೂ ಹೀಗೆಯೇ ಆಗಿತ್ತು. ಸ್ವಾಭಿಮಾನ ಉಳಿಸಿಕೊಳ್ಳಲು ನಾವು ಪಕ್ಷ ತೊರೆದೆವು. ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ದರ್ಪ, ದೌರ್ಜನ್ಯದಿಂದ ಇಲ್ಲಿನ ಶಾಸಕರು ತಿರುಗಿ ಬಿದ್ದಿದ್ದರು. ನೆರೆಯ ಮಹಾರಾಷ್ಟ್ರದಲ್ಲೂ ಅದೇ ರೀತಿ ಕ್ಷಿಪ್ರಕ್ರಾಂತಿ ಆಗುತ್ತಿದೆ ಎಂದರು.

ಶಾಸಕಾಂಗ ಪಕ್ಷದ ನಾಯಕರು ಸರಿಯಾಗಿ ಇರದಿದ್ದರೆ ಹೀಗೆಲ್ಲಾ ಆಗುತ್ತದೆ. ಶಾಸಕರ ಸ್ವಾಭಿಮಾನವನ್ನು ಕೆಣಕಬಾರದು. ಕೆಣಕಿದರೆ ಕ್ಷಿಪ್ರಕ್ರಾಂತಿ ಆಗೇ ಆಗುತ್ತದೆ. ನಾವೂ ಅದನ್ನೆ ಮಾಡಿದ್ದೆವು ಎಂದು ತಿಳಿಸಿದರು.

ಅಗ್ನಿಪಥ ಯೋಜನೆಯನ್ನು ಕಾಂಗ್ರೆಸ್‌ನವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಎಲ್ಲದಕ್ಕೂ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಲಿಂಕ್ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ತುರ್ತು ಪರಿಸ್ಥಿತಿ ಸಮರ್ಥಿಸಿಕೊಂಡ ಅವರು, ತುರ್ತು ಪರಿಸ್ಥಿತಿ ಸಮಯ ಕರ್ನಾಟಕದಲ್ಲಿ ಅಭಿವೃದ್ಧಿಯ ಯುಗವಾಗಿತ್ತು. ಆ ಸಂದರ್ಭವನ್ನು ಆಗಿನ ಮುಖ್ಯಮಂತ್ರಿ ದೇವರಾಜ ಅರಸು ರಾಜ್ಯದ ಅಭಿವೃದ್ಧಿಗೆ ಬಳಸಿಕೊಂಡರು. ಕೆಟ್ಟ ಕಾನೂನನ್ನು ಒಳ್ಳೆಯ ರೀತಿ ಬಳಸಿಕೊಂಡರು. ಇದರಿಂದ ರಾಜ್ಯಕ್ಕೆ ಒಳ್ಳೆಯದೇ ಆಯಿತು ಎಂದು ಪ್ರತಿಕ್ರಿಯಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು