ನಂಜನಗೂಡು: ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿ ನಂಜನಗೂಡಿನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ಕಡ್ಲೆಪುರಿ ಸುರಿದು ದಿಡೀರ್ ಪ್ರತಿಭಟನೆ ನಡೆಸಿದರು.
ನಂಜನಗೂಡು ನಗರದ ಹಳೆ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕರ ಕಚೇರಿಯ ಮುಂದೆ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ರೈತರು ಜಮಾಯಿಸಿ ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಹಳೆ ಕಟ್ಟಡದಲ್ಲಿ ಕಚೇರಿ ನಡೆಸಲಾಗುತ್ತಿದ್ದು ಆದರೆ ಸಾರ್ವಜನಿಕರ ಕಡತಗಳಿಗೆ ಯಾವುದೇ ಭದ್ರತೆ ಇಲ್ಲ. ಮಳೆ ಬಂದರೆ ಕಟ್ಟಡ ಸೋರುತ್ತದೆ. ಸಾರ್ವಜನಿಕರು ಮತ್ತು ರೈತರ ಕೆಲಸಗಳನ್ನು ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಲಂಚ ಕೊಟ್ಟರಷ್ಟೇ ಇಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ರೈತರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ.
ಹಳೆ ತಾಲೂಕು ಕಚೇರಿಯಿಂದ ನೂತನ ತಾಲೂಕು ಕಚೇರಿಗೆ ಸುಮಾರು 2 ಕಿಲೋಮೀಟರ್ ತನಕ ವೃದ್ಧರು ಹಾಗೂ ಪಿಂಚಣಿದಾರರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಚೇರಿಯನ್ನು ಸ್ಥಳಾಂತರ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದರು ತಾಲೂಕು ಆಡಳಿತ ಮಾತ್ರ ಕ್ರಮ ಕೈಗೊಂಡಿಲ್ಲ.
ಕೂಡಲೇ ಈ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜಸ್ವ ನಿರೀಕ್ಷಕರ ಕಚೇರಿಯನ್ನು ನೂತನ ತಾಲ್ಲೂಕು ಕಚೇರಿಗೆ ಸ್ಥಳಾಂತರ ಮಾಡಬೇಕು. ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕ ಹರೀಶ್ ಕುಮಾರ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿಯ ಮುಂದೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ತಾಲ್ಲೂಕು ಅಧ್ಯಕ್ಷ ಸತೀಶ್, ಸಂಘಟನೆಯ ಮಹದೇವನಾಯಕ, ಶಿವಣ್ಣ, ಸಣ್ಣಶೆಟ್ಟಿ , ವೆಂಕಟೇಗೌಡ, ಮಾದೇಗೌಡ, ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದರು.