ಡಿ. 16, 17ರಂದು ಕಾರಂಜಿಕೆರೆಯಲ್ಲಿ ಉತ್ಸವ...

ಡಿ. 16, 17ರಂದು ಕಾರಂಜಿಕೆರೆಯಲ್ಲಿ ಉತ್ಸವ...

LK   ¦    Nov 28, 2019 01:36:36 PM (IST)
ಡಿ. 16, 17ರಂದು ಕಾರಂಜಿಕೆರೆಯಲ್ಲಿ ಉತ್ಸವ...

ಮೈಸೂರು: ಮೈಸೂರಿನ ಕಾರಂಜಿಕೆರೆಯಲ್ಲಿ ಡಿಸೆಂಬರ್ 16 ಮತ್ತು 17ರಂದು ಕೆರೆ ಉತ್ಸವ ಆಚರಿಸಲು ಮೈಸೂರು ಮೃಗಾಲಯವು ಮುಂದಾಗಿದೆ. ಎರಡು ದಿನಗಳ ಕಾಲ ನಡೆಯುವ ಉತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗುತ್ತಿದ್ದು, ಉಪನ್ಯಾಸ, ಸಸ್ಯಸಂಕುಲ, ಚಿಟ್ಟೆವನಗಳ ಮಹತ್ವ, ಪಕ್ಷಿಗಳ ಪರಿಚಯ, ಕೆರೆ ಸಂರಕ್ಷಿಸುವ ಕುರಿತಂತೆ ಮಾಹಿತಿ ನೀಡಲಾಗುತ್ತದೆ.

ಮೊದಲಿಗೆ ಹೋಲಿಸಿದರೆ ಇತ್ತೀಚೆಗೆ ನಗರೀಕರಣದ ಭರದಲ್ಲಿ ಹಲವು ಕೆರೆಗಳು ಅಸ್ತಿತ್ವ ಕಳೆದುಕೊಂಡು ಬಡಾವಣೆ, ಉದ್ಯಾನವನಗಳಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಈ ಕೆರೆಗಳ ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೂ ಅಂತರ್ಜಲ ಕಾಪಾಡುವ ವ್ಯವಸ್ಥೆ ಮಾಡಬೇಕಾಗಿದೆ. ಹೀಗಾಗಿ ಪ್ರಥಮ ಬಾರಿಗೆ ಕಾರಂಜಿ ಕೆರೆ ಉತ್ಸವ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ವಿನೂತನ ಪ್ರಯತ್ನ ಮಾಡಲಾಗುತ್ತಿದೆ.

ಕಳೆದ ಬೇಸಿಗೆಯಲ್ಲಿ ಕಾರಂಜಿಕೆರೆ ಸಂಪೂರ್ಣ ಬತ್ತಿ ಹೋಗಿತ್ತು. ಆದರೆ ಕೆರೆಯಲ್ಲಿದ್ದ ಹೂಳನ್ನು ತೆಗೆಯಲಾಗಿದ್ದು, ಈ ಬಾರಿ ಉತ್ತಮ ಮಳೆಯಾದ ಕಾರಣ ಕಾರಂಜಿ ಕೆರೆಗೆ ಜೀವಕಳೆ ಬಂದಿದ್ದು, ಹಲವು ಜಲಚರಗಳು ಆಶ್ರಯ ಪಡೆದಿವೆ. ಜತೆಗೆ ಪ್ರವಾಸಿಗರಿಗೆ ದೋಣಿ ವಿಹಾರಕ್ಕೂ ಅವಕಾಶ ಸಿಕ್ಕಿದೆ. ಜತೆಗೆ ಕೆರೆಯಲ್ಲಿ ಹೆಸರಿಗೆ ತಕ್ಕಂತೆ ಕಾರಂಜಿ ನಿರ್ಮಾಣ ಮಾಡಿ ಆಕರ್ಷಿಸಲಾಗುತ್ತಿದೆ.

ಈ ಕೆರೆ 1976ರಲ್ಲಿ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಬಂತು. ಸುಮಾರು 90 ಎಕರೆಗಿಂತಲೂ ಹೆಚ್ಚಿನ ವಿಸ್ತಾರ ಹೊಂದಿರುವ ಕೆರೆಯಲ್ಲಿ ಚಿಟ್ಟೆ ಪಾರ್ಕ್ ಸ್ಥಾಪನೆ ಮಾಡಲಾಯಿತು. ಬಳಿಕ ಕೆರೆಗೆ “ಕಾರಂಜಿ ಪ್ರಕೃತಿ ಉದ್ಯಾನವನ”ಎಂಬ ಹೆಸರನ್ನಿಟ್ಟು 2004 ಜನವರಿ 25ರಂದು ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಯಿತು. ಅಲ್ಲಿಂದ ಇಲ್ಲಿಯ ತನಕ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತಾ ಸೆಳೆಯುತ್ತಾ ಬಂದಿದೆ.

ಇದೀಗ ಪ್ರಥಮ ಬಾರಿಗೆ ಕೆರೆ ಉತ್ಸವ ನಡೆಯುತ್ತಿರುವುದು ಇನ್ನಷ್ಟು ಖ್ಯಾತಿಗೆ ಕಾರಣವಾಗಿದೆ.