ಕಾಡಾನೆ ದಾಳಿಗೆ ಮನೆ ನಾಶ

ಕಾಡಾನೆ ದಾಳಿಗೆ ಮನೆ ನಾಶ

CI   ¦    Jan 14, 2021 10:58:54 AM (IST)
ಕಾಡಾನೆ ದಾಳಿಗೆ ಮನೆ ನಾಶ

ಮೈಸೂರು: ಇಲ್ಲಿಗೆ ಸಮೀಪದ ಗುಂಡ್ಲು ಪೇಟೆ ತಾಲ್ಲೂಕಿನ ಬೇಗೂರು ಹೊಸಪುರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಹೊಸಪುರ ಗ್ರಾಮದ ಮಹದೇವಚಾರಿ ಎಂಬವರ ಜಮೀನಿನಲ್ಲಿದ್ದ ಮನೆಯನ್ನು ತಿವಿದು ನಾಶ ಪಡಿಸಿದ ಘಟನೆ ನಡೆದಿದೆ.

ಸಮೀಪದ ಓಂಕಾರ ಅರಣ್ಯ ವಲಯದಿಂದ ಆಹಾರ ಅರಸಿ ಬಂದಿರುವ ಆನೆಗಳು 4 ಎಕರೆಯಲ್ಲಿ ಬೆಳೆದಿದ್ದ ರಾಗಿ ಬೆಳೆಯನ್ನು ಕಟಾವು ಮಾಡಿ ಜಮೀನಿನ ಮನೆಯಲ್ಲೇ ಸಂಗ್ರಹಿಸಿದ್ದರು. ಕಾಡಾನೆಗಳು ಸಾಮಾನ್ಯವಾಗಿ ಮನೆಯನ್ನು ನಾಶ ಪಡಿಸುವುದಿಲ್ಲವಾದರೂ ಮನೆಯಲ್ಲಿದ್ದ ರಾಗಿ ಬೆಳೆಯನ್ನು ತಿನ್ನಲು ನಾಶ ಪಡಿಸಿವೆ ಎನ್ನಲಾಗಿದೆ.

ಸೋಮವಾರ ರಾತ್ರಿ ಏಕಾಏಕಿ ಜಮೀನಿಗೆ ಲಗ್ಗೆ ಇಟ್ಟ ಆನೆಗಳು ರಾಗಿ ತಿಂದು ನಾಶಪಡಿಸಿದ್ದಲ್ಲದೆ, ಮನೆಯನ್ನೂ ತಿವಿದು ಧ್ವಂಸಗೊಳಿಸಿವೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಸ್ಥಳಕ್ಕೆ ಬಾರದೆ ಬೇಜವಾಬ್ದಾರಿ ತೋರಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಆನೆ ಕಂದಕದಲ್ಲಿ ತುಂಬಿರುವ ಹೂಳನ್ನು ತೆಗೆಸಿದರೆ ಆನೆಗಳು ನಾಡಿನತ್ತ ಬರುವುದಿಲ್ಲ. ಇದೇ ರೀತಿ ಮುಂದಿನ ದಿನಗಳಲ್ಲಿ ಆನೆಗಳ ಹಾವಳಿ ಹೆಚ್ಚಾದರೆ ಅರಣ್ಯ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ರೈತರು ಎಚ್ಚರಿಸಿದರು.

ಈ ಕುರಿತು ಮಾತನಾಡಿದ ಓಂಕಾರ್‌ ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ್‌ ʻರಾಗಿ ಹುಲ್ಲಿನ ವಾಸನೆಗೆ ಆನೆಗಳು ಜಮೀನಿನ ಕಡೆಗೆ ಲಗ್ಗೆ ಇಡುತ್ತಿವೆ. ಈಗಾಗಲೇ ಘಟನೆ ಸ್ಥಳಕ್ಕೆ ಸಿಬ್ಬಂದಿ ಜೊತೆಗೂಡಿ ಭೇಟಿ ನೀಡಿ ಪರಿಶೀಲಿಸಲಾಗಿದೆ. ಅನೆ ದಾಳಿಯಿಂದ ನಷ್ಟವಾದ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಹುರುಳಿ ಕೂಯ್ಲಿನ ಸಮಯದಲ್ಲಿ ಆನೆಗಳ ಹಿಂಡು ಹೆಚ್ಚಾಗಿ ಬರುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.