ಮೈಸೂರಿನ ವಿದ್ಯಾರ್ಥಿ ಅಮೆರಿಕಾದಲ್ಲಿ ಗುಂಡೇಟಿಗೆ ಬಲಿ

ಮೈಸೂರಿನ ವಿದ್ಯಾರ್ಥಿ ಅಮೆರಿಕಾದಲ್ಲಿ ಗುಂಡೇಟಿಗೆ ಬಲಿ

LK   ¦    Nov 29, 2019 07:17:50 PM (IST)
ಮೈಸೂರಿನ ವಿದ್ಯಾರ್ಥಿ ಅಮೆರಿಕಾದಲ್ಲಿ ಗುಂಡೇಟಿಗೆ ಬಲಿ

ಮೈಸೂರು: ಅಪರಿಚಿತ ವ್ಯಕ್ತಿ ಹಾರಿಸಿದ ಗುಂಡಿಗೆ ಮೈಸೂರಿನ ವಿದ್ಯಾರ್ಥಿ ಬಲಿಯಾಗಿರುವ ಘಟನೆ ಅಮೇರಿಕಾದ ಸ್ಯಾನ್ ಬರ್ನಾಡಿಯೋದಲ್ಲಿ ನಡೆದಿದೆ.

ಮೈಸೂರಿನ ಕುವೆಂಪುನಗರದ ಪಿ ಅಂಡ್ ಎಫ್ ಬ್ಲಾಕ್  ಮನುಜ ಪಥ ರೋಡ್ ನಲ್ಲಿ ವಾಸವಿರುವ ಸುರೇಶ್ ಚಂದ್ ಅವರ ಪುತ್ರ ಅಭಿಷೇಕ್(25) ಎಂಬ ವಿದ್ಯಾರ್ಥಿಯೇ ಅಮೆರಿಕಾದಲ್ಲಿ ನಡೆದ ಗುಂಡಿನ ದಾಳಿಗೆ ಬಲಿಯಾದ ದುರ್ದೈವಿ.

ಅಭಿಷೇಕ್ ಈ ಹಿಂದೆ ಮೈಸೂರಿನ ವಿದ್ಯಾ ವಿಕಾಸ್ ಕಾಲೇಜಿನಲ್ಲಿ  ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮಾಡಿದ್ದು ಹೆಚ್ಚಿನ ವ್ಯಾಸಂಗಕ್ಕಾಗಿ ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೆ ಅಮೆರಿಕಾದ ಸ್ಯಾನ್ ಬರ್ನಾಡಿಯೋದಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾನಿಲಯಕ್ಕೆ ದಾಖಲಾಗಿ ಎಂಎಸ್ ವ್ಯಾಸಂಗ ಮಾಡುತ್ತಿದ್ದರು.

ವ್ಯಾಸಂಗದ ಅವಧಿಯ ಬಿಡುವಿನ ವೇಳೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ರೆಸಿಡೆಂಟ್‍ವೊಂದರಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದ್ದು, ಗುರುವಾರ ಅಭಿಷೇಕ್ ಅಪರಿಚಿತ ವ್ಯಕ್ತಿಯ ಗುಂಡೇಟಿಗೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೆÇಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹ ಆಸ್ಪತ್ರೆಗೆ ರವಾನಿಸಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಮೈಸೂರಿನಲ್ಲಿರುವ  ಅಭಿಷೇಕ್ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಮೃತ ಅಭಿಷೇಕ್ ಅಂತ್ಯಕ್ರಿಯೆಯನ್ನು ಅಮೆರಿಕಾದಲ್ಲೇ ಮಾಡಲು ಪೋಷಕರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.