ಹೋಂ ಕ್ವಾರೆಂಟೈನ್ ಉಲ್ಲಂಘನೆ: ಮೈಸೂರಲ್ಲಿ ವ್ಯಕ್ತಿ ವಿರುದ್ಧ ಕೇಸ್

ಹೋಂ ಕ್ವಾರೆಂಟೈನ್ ಉಲ್ಲಂಘನೆ: ಮೈಸೂರಲ್ಲಿ ವ್ಯಕ್ತಿ ವಿರುದ್ಧ ಕೇಸ್

LK   ¦    Mar 25, 2020 02:15:03 PM (IST)
ಹೋಂ ಕ್ವಾರೆಂಟೈನ್ ಉಲ್ಲಂಘನೆ: ಮೈಸೂರಲ್ಲಿ ವ್ಯಕ್ತಿ ವಿರುದ್ಧ ಕೇಸ್

ಮೈಸೂರು: ಆಸ್ಟ್ರೇಲಿಯಾದಿಂದ ಬಂದಿದ್ದ ನಗರದ ನಿವಾಸಿಯೊಬ್ಬ ಹೋಮ್ ಕ್ವಾರೆಂಟೈನ್ ಆದೇಶ ಉಲ್ಲಂಘಿಸಿ ನಗರದಲ್ಲಿ ಅಡ್ಡಾಡಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಗರದ ವಿ.ವಿ. ಮೊಹಲ್ಲಾದ ನಿವಾಸಿಯಾಗಿದ್ದು, ಮಾರ್ಚ್ 22ರಂದು ಆಸ್ಟ್ರೇಲಿಯಾದಿಂದ ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದು, ಕೊರೋನಾ ವೈರಾಣು ಭಾದಿತ ದೇಶದಿಂದ ಬಂದವನಾಗಿದ್ದರಿಂದ ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನ್ ಪರೀಕ್ಷೆ ನಡೆಸಿ ಏ.6 ರವರೆಗೆ ಅಂದರೆ 14 ದಿವಸಗಳ ಕಾಲ ಹೋಂ ಕ್ವಾರೆಂಟೈನ್‍ಗೆ ಸೂಚಿಸಿ ಮೈಸೂರಿನ ಆತನ ಮನೆಯಲ್ಲಿಯೇ ಹೋಂ ಕ್ವಾರೆಂಟೈನ್‍ಗೆ ಒಳಪಡಿಸಲಾಗಿತ್ತು.

ಈತನಿಗೆ ಕೊರೋನಾದ ಬಗ್ಗೆ ಚೆನ್ನಾಗಿ ಅರಿತಿದ್ದರೂ ಕೂಡ ಹೋಂ ಕ್ವಾರಂಟೈನ್‍ನಲ್ಲಿದ್ದು ಚಿಕಿತ್ಸೆ ಪಡೆಯಬೇಕಾಗಿತ್ತು. ಅಲ್ಲದೆ, ಮನೆಯಿಂದ ಹೊರಗೆ ಬಾರದೆ ಆದೇಶ ಪಾಲಿಸಬೇಕಾಗಿತ್ತು. ಇದ್ಯಾವುದನ್ನು ಮಾಡದೆ ಮನೆಯಿಂದ ಹೊರಗೆ ಬಂದು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ದಾನೆ. ಆತನ ಕೈನಲ್ಲಿದ್ದ ಸೀಲ್‍ನ್ನು ನೋಡಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು,  ತಾನು ಕೊರೋನಾ ಸೋಂಕು ಪೀಡಿದ ದೇಶದಿಂದ ಬಂದಿರುವುದು ಅರಿವಿದ್ದರೂ ಜತೆಗೆ ಸಾರ್ವಜನಿಕವಾಗಿ ಓಡಾಡಿದರೇ ವೈರಾಣುವಿನ ಸೋಂಕು ಇತರರಿಗೂ ಹರಡಬಹುದೆಂಬ ತಿಳುವಳಿಕೆಯಿದ್ದರೂ  ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡಿ ಸಾರ್ವಜನಿಕರೊಂದಿಗೆ ಬೆರೆತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ  ಆದೇಶವನ್ನು ಉಲ್ಲಂಘನೆ ಮಾಡಿದ್ದರಿಂದ ಆತನ ವಿರುದ್ದ ಕಲಂ 188, 269, 271 ಐ.ಪಿ.ಸಿ ರೀತ್ಯಾ ನಗರದ ವಿ.ವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.