ಕೇಂದ್ರದಿಂದ ಹಂತಹಂತವಾಗಿ ನೆರೆ ಪರಿಹಾರ ಬಿಡುಗಡೆ: ಶೋಭಾಕಂದ್ಲಾಜೆ

ಕೇಂದ್ರದಿಂದ ಹಂತಹಂತವಾಗಿ ನೆರೆ ಪರಿಹಾರ ಬಿಡುಗಡೆ: ಶೋಭಾಕಂದ್ಲಾಜೆ

Lk   ¦    Oct 07, 2019 04:20:20 PM (IST)
ಕೇಂದ್ರದಿಂದ ಹಂತಹಂತವಾಗಿ ನೆರೆ ಪರಿಹಾರ ಬಿಡುಗಡೆ: ಶೋಭಾಕಂದ್ಲಾಜೆ

ಮೈಸೂರು: ಕೇಂದ್ರ ಸರ್ಕಾರ ಹಂತ ಹಂತವಾಗಿ ಪರಿಹಾರದ ಹಣ ಬಿಡುಗಡೆ ಮಾಡಲಿದ್ದು, ಈ ಬಗ್ಗೆ ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮೈಸೂರಿಗೆ ಭೇಟಿ ನೀಡಿ ಪ್ರತಿವರ್ಷದಂತೆ ಗಜಪಡೆ ಮಾವುತರು ಹಾಗೂ ಕಾವಾಡಿಗಳ ಕುಟುಂಬಕ್ಕೆ ಉಪಹಾರದ ವ್ಯವಸ್ಥೆ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು ನೆರೆ ಪರಿಹಾರಕ್ಕೆ ಕಡಿಮೆ ಹಣ ನೀಡಿದ್ದಾರೆ ಎಂಬ ಟೀಕೆಗೆ ಉತ್ತರ ಕೊಡುವುದಿಲ್ಲ. ಟೀಕೆಯನ್ನು ಯಾರು ಬೇಕಾದರೂ ಮಾಡಬಹುದು. ಆದರೆ ಅದಕ್ಕೆ ಕೆಲಸ ಮಾಡುವು ಮೂಲಕ ತೋರಿಸುವ ಪ್ರಯತ್ನ ಮಾಡುತ್ತೇವೆ. ಸಂತ್ರಸ್ತರಿಗೆ ಮನೆ ಸೇರಿದಂತೆ ರಸ್ತೆ ಸೇತುವೆ ಮೊದಲಾದ ಮೂಲಭೂತ ಸೌಲಭ್ಯಗಳನ್ನು ಅಗತ್ಯವಾಗಿ ಮಾಡಿಕೊಡಬೇಕಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಿದ್ದು, ಎಲ್ಲರಿಗೂ ಮನೆ ಕಟ್ಟಿಕೊಡಲಾಗುತ್ತದೆ ಆದ್ದರಿಂದ ಯಾರೂ ಆತಂಕ ಪಡಬೇಕಾಗಿಲ್ಲ ಎಂದರು.

ಪ್ರತಿ ವರ್ಷದಂತೆ ಈ ಬಾರಿಯೂ ನಾನು ನನ್ನ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದು ಅದರಂತೆ ದಸರಾ ಗಜಪಡೆಯ ಮಾವುತರು, ಕಾವಡಿಗಳು ಮತ್ತು ಅವರ ಕುಟುಂಬಕ್ಕೆ ಉಪಹಾರದ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರಲ್ಲದೆ, ಈ ಬಾರಿ ಯಶಸ್ವಿಯಾಗಿ ದಸರಾ ನಡೆಸಲಾಗುತ್ತಿದೆ. ಯಡಿಯೂರಪ್ಪ ಅವರು ಸಿಎಂ ಆದಾಗ ಮಾವುತರನ್ನು ಸರ್ಕಾರಿ ನೌಕರರಾಗಿ ನೇಮಕ ಮಾಡಿದ್ದು ಇದೀಗ ಅವರು ಬಡ್ತಿಯ ಕುರಿತು ಮನವಿ ನೀಡಿದ್ದಾರೆ. ಈ ಮನವಿಯ ಬಗ್ಗೆ ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತರುವುದಾಗಿ ಹೇಳಿದರಲ್ಲದೆ ಈ ಸಂಬಂಧ ಅವರಿಗೆ ಬೇಕಾಗಿರುವ ಅಗತ್ಯ ಸೌಲಭ್ಯ ಮಾಡಿಕೊಡುವ ಕೆಲಸ ಮಾಡುವುದಾಗಿ ತಿಳಿಸಿದರು.

ಇದೇ ವೇಳೆ ಮಾವುತರು, ಕಾವಾಡಿಗಳ ಕುಟುಂಬಕ್ಕೆ ಮಸಾಲೆ ದೋಸೆ, ಪೊಂಗಲ್, ಇಡ್ಲಿ, ವಡೆ, ಹಾಲುಬಾಯಿ, ಖಾರಾಬಾತ್ ಬಡಿಸಲಾಯಿತು. ಜತೆಗೆ ಮಹಿಳೆಯರಿಗೆ ಸೀರೆ ವಿತರಿಸಲಾಯಿತು.