ಪಿಜಿ ಹಾಸ್ಟೆಲ್‌ ಸೌಲಭ್ಯ ಸರಿಪಡಿಸಲು ವಿದ್ಯಾರ್ಥಿಗಳ ಧರಣಿ

ಪಿಜಿ ಹಾಸ್ಟೆಲ್‌ ಸೌಲಭ್ಯ ಸರಿಪಡಿಸಲು ವಿದ್ಯಾರ್ಥಿಗಳ ಧರಣಿ

MS   ¦    Jan 06, 2021 05:11:28 PM (IST)
ಪಿಜಿ ಹಾಸ್ಟೆಲ್‌ ಸೌಲಭ್ಯ ಸರಿಪಡಿಸಲು ವಿದ್ಯಾರ್ಥಿಗಳ ಧರಣಿ

ಮೈಸೂರು: ಇಲ್ಲಿನ ಮಾನಸ ಗಂಗೋತ್ರಿಯ ಪಿಜಿ ಹಾಸ್ಟೆಲ್ ಗಳಲ್ಲಿ ಸೂಕ್ತ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಇಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕಳೆದ ಕೆಲವು ತಿಂಗಳುಗಳಿಂದ ಕೋವಿಡ್ ಕಾರಣದಿಂದ ಮುಚ್ಚಿದ್ದ ವಸತಿ ನಿಲಯಗಳು ತರಗತಿಗಳು ಆರಂಭವಾಗುತ್ತಿದ್ದಂತೆ ತೆರೆದಿವೆ. ಆದರೆ ಒಂದು ವಾರದಿಂದ ಇಲ್ಲಿ ಕೋವಿಡ್ ಸಮಯದಲ್ಲಿ ಸರಿಯಾದ ಊಟ ದೊರೆಯುತ್ತಿಲ್ಲ. ಇಲ್ಲಿನ ಆಹಾರ ಸೇವಿಸಿ ನಾವು ಅನಾರೋಗ್ಯ ಪೀಡಿತರಾದಲ್ಲಿ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲದೇ ಸ್ನಾನಕ್ಕೆ ಬಿಸಿ ನೀರು ಬರುತ್ತಿಲ್ಲ. ವಸತಿ ನಿಲಯದಲ್ಲಿಯೂ ಹಲವು ಸಮಸ್ಯೆಗಳಿವೆ ಅವುಗಳನ್ನು ಕೂಡಲೇ ಪರಿಹರಿಸಿ ಎಂದು ಆಗ್ರಹಿಸಿದರು.

ಕೋವಿಡ್ ಸಂದರ್ಭದಲ್ಲಿ ಒಂದೇ ಕಡೆ ಎಲ್ಲಾ ವಿದ್ಯಾರ್ಥಿಗಳಿಗೆ ಊಟ ನೀಡಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರಿಯಾದ ವ್ಯವಸ್ಥೆ ಮಾಡಿಲ್ಲ. ಊಟಕ್ಕಾಗಿ ಗುಂಪುಗುಂಪಾಗಿ ಸೇರಿ ಊಟ ಪಡಯಬೇಕಾದ ಅನಿವಾರ್ಯತೆ ಎದುರಾಗಿದೆ. ಅಡುಗೆ ಕೋಣೆಯಲ್ಲಿ 500 ಜನ ಒಟ್ಟಿಗೆ ಕುಳಿತು ಊಟ ಮಾಡಬೇಕಾಗಿದೆ. ಜತೆಗೆ ಸರಿಯಾದ ನ್ಯೂಸ್ ಪೇಪರ್ ಬರುತ್ತಿಲ್ಲ. ಕಿಚನ್ ವ್ಯವಸ್ಥೆ ನಮಗೆ ಬೇಡ. ನಮಗ ಶುದ್ಧ ಕುಡಿಯವ ನೀರು ಪೂರೈಕೆ ಆಗಬೇಕು. ಸೋಲಾರ್ ವ್ಯವಸ್ಥೆ ಮಾಡಬೇಕು. ಹಾಗೆಯೇ ಸೂಕ್ತ ಗ್ರಂಥಾಲಯ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.


ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಮೈಸೂರು ವಿವಿ ರಿಜಿಸ್ಟರ್ ಆರ್. ಶಿವಪ್ಪ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಈ ವೇಳೆ ವಿದ್ಯಾರ್ಥಿಗಳು ರಿಜಿಸ್ಟರ್ ಶಿವಪ್ಪರನ್ನು ಸುತ್ತುವರೆದು ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಂತೆ ಒತ್ತಾಯಿಸಿದರು. ಸಮಸ್ಯೆ ಆಲಿಸಿದ ಕುಲಸಚಿವರು ಶೀಘ್ರದಲ್ಲೇ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.