ರೈತರ ಹೋರಾಟದಲ್ಲಿ ರಾಜಕೀಯವಿಲ್ಲ: ಸಿದ್ದರಾಮಯ್ಯ

ರೈತರ ಹೋರಾಟದಲ್ಲಿ ರಾಜಕೀಯವಿಲ್ಲ: ಸಿದ್ದರಾಮಯ್ಯ

LK   ¦    Jan 13, 2021 10:45:12 AM (IST)
ರೈತರ ಹೋರಾಟದಲ್ಲಿ ರಾಜಕೀಯವಿಲ್ಲ: ಸಿದ್ದರಾಮಯ್ಯ

ಮೈಸೂರು: ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಯಾವುದೇ ರಾಜಕೀಯವಿಲ್ಲ ರೈತರ ಪರವಾಗಿ ನಿಲ್ಲುವುದು ಕಾಂಗ್ರೆಸ್ ಪಕ್ಷದ ಧೃಡ ನಿರ್ಧಾರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದ್ದಾರೆ.

ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮ ಪಂಚಾಯಿತಿಯ ನೂತನ ಸದಸ್ಯರು, ಸಿದ್ದರಾಮಯ್ಯನವರ ನಿವಾಸದಲ್ಲಿ ಭೇಟಿ ಮಾಡಿ ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯನವರು ಕಳೆದ ಒಂದು ತಿಂಗಳಿನಿಂದ ರೈತರ ನಡೆಸುತ್ತಿರುವ ಹೋರಾಟಕ್ಕೆ ಹಲವಾರು ಜನಪರ ಸಂಘಟನೆಗಳು ಪ್ರಗತಿಪರರು ಚಿಂತಕರು ಬೆಂಬಲ ಸೂಚಿಸಿ ರೈತರ ಪರ ನಿಂತಿದ್ದಾರೆ. ಆದರೆ ಬಿಜೆಪಿ ನಾಯಕರು  ಮಾತ್ರ ರೈತರ ಹೋರಾಟಕ್ಕೆ ಮನ್ನಣೆ ನೀಡದೆ ಈ ಹೋರಾಟದ ಹಿಂದೆ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಇದೆ ಎಂದು ಹೇಳುವ ಮೂಲಕ ರೈತರಲ್ಲಿ ಸಾರ್ವಜನಿಕರಲ್ಲಿ ಗೊಂದಲದ ವಾತಾವರಣ ನಿರ್ಮಿಸಲು ಮುಂದಾಗಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ಕಾಯ್ದೆ ಭೂ ಸುಧಾರಣೆ ಕಾಯ್ದೆ ಎಪಿಎಂಸಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ರೈತರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಸಂಪೂರ್ಣ ಬೆಂಬಲವಿದ್ದು ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸಹ ರೈತರ ಪರವಾಗಿ ನಿಂತಿರುವುದು ರೈತರಿಗೆ ಸಿಕ್ಕ ಮೊದಲ ಜಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

 ನೂತನವಾಗಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಶ್ರಮಿಸಬೇಕು ಹಾಗೂ ಮುಂದಿನ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯತಿ ಚುನಾವಣೆ ಗಳಿಗೆ ಈಗಿನಿಂದಲೇ ಸಜ್ಜಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಾಂಡವಪುರ ಗ್ರಾಮ ಪಂಚಾಯಿತಿಯ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಬಿ.ಶಿವಣ್ಣ ಶ್ರೀಕಂಠಸ್ವಾಮಿ, ಕೆ.ರಾಜು, ಎನ್.ಚಂದ್ರು, ಮಾದಪ್ಪ ಮಧು ಪಾಟೀಲ ಮುಖಂಡರಾದ ದಕ್ಷಿಣಾಮೂರ್ತಿ ಶಿವರಾಜು ತಾಲೂಕು ಸಿದ್ದರಾಮಯ್ಯ ಅಭಿಮಾನಿ ಬಳಗದ ಅಧ್ಯಕ್ಷ ಅಣ್ಣಯ್ಯ ಡೈರಿ ಅಧ್ಯಕ್ಷ ಬಿ.ಪುಟ್ಟಯ್ಯ ಸೇರಿದಂತೆ ಹಲವರು ಇದ್ದರು.