ಕಟ್ಟೆಮಳವಾಡಿಯಲ್ಲಿ ಲಕ್ಷ್ಮಣತೀರ್ಥ ನದಿ ವೈಭವ

ಕಟ್ಟೆಮಳವಾಡಿಯಲ್ಲಿ ಲಕ್ಷ್ಮಣತೀರ್ಥ ನದಿ ವೈಭವ

LK   ¦    Aug 07, 2020 01:30:37 PM (IST)
ಕಟ್ಟೆಮಳವಾಡಿಯಲ್ಲಿ ಲಕ್ಷ್ಮಣತೀರ್ಥ ನದಿ ವೈಭವ

ಮೈಸೂರು: ಕೊಡಗಿನಲ್ಲಿ ಮಳೆ ಅಬ್ಬರಿಸುತ್ತಿರುವ ಚೇತರಿಕೆ ಕಂಡಿರುವ ಕಾರಣ ಲಕ್ಷ್ಮಣ ತೀರ್ಥ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು ಹುಣಸೂರು ತಾಲೂಕಿನ ಕಟ್ಟೆಮಳವಾಡಿಯಲ್ಲಿರುವ ಅಣೆಕಟ್ಟೆ ತುಂಬಿದ್ದು ಜಲವೈಭವ ಆರಂಭವಾಗಿದೆ.

 

ದಕ್ಷಿಣ ಕೊಡಗಿನ ಕುಟ್ಟ ಭಾಗ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಹಲವೆಡೆ ಬೀಳುತ್ತಿರುವ ಮಳೆಗೆ ಲಕ್ಷ್ಮಣತೀರ್ಥ ನದಿಯಲ್ಲಿ ಪ್ರವಾಹ ಏರ್ಪಟ್ಟಿದೆ. ಕೊಡಗಿನ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದೆ. ನೀರು ಬೃಹತ್ ಪ್ರಮಾಣದಲ್ಲಿ ಹರಿದು ಬರುತ್ತಿರುವುದರಿಂದಾಗಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಹಾಗೂ ಹುಣಸೂರು ತಾಲೂಕಿನ ಕೊಡಗಿಗೆ ಹೊಂದಿಕೊಂಡಂತಿರುವ ಪ್ರದೇಶಗಳ ಕೆಲವು ಗ್ರಾಮಗಳು ಜಲಾವೃತಗೊಂಡಿವೆ.

 

ಈ ಮಧ್ಯೆ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಅಣೆಕಟ್ಟೆ ಭರ್ತಿಯಾಗಿದೆ. ಇದರಿಂದ ಹೆಚ್ಚಾದ ನೀರು ಅಣೆಕಟ್ಟೆ ಮೇಲೆ ಹರಿದು ಹೋಗುತ್ತಿದೆ. ಲಕ್ಷ್ಮಣತೀರ್ಥ ನದಿಯಲ್ಲಿ ನಿಂತಿದ್ದ ಹಳೆ ನೀರು ಹುಣಸೂರು ಪಟ್ಟಣದ ಕೊಳಚೆ ನೀರು ತುಂಬಿ ಗಬ್ಬೆದ್ದು ನಾರುತ್ತಿತ್ತು ಇದೀಗ ಪ್ರವಾಹದಿಂದ ನೀರು ಕೊಚ್ಚಿ ಹರಿಯುತ್ತಿರುವುದರಿಂದ ನದಿಯಲ್ಲಿ ಕೊಳಚೆ ಹರಿದು ಹೋಗಿದೆ. ಇದರಿಂದ ಸ್ವಚ್ಛವಾಗಿದೆ.

 

ಇನ್ನೊಂದೆಡೆ ನದಿಯ ನೀರು ಜಮೀನುಗಳಿಗೆ ನುಗ್ಗಿದ ಪರಿಣಾಮ ನೂರಾರು ಎಕರೆ ಪ್ರದೇಶಗಳಲ್ಲಿ ಬೆಳೆದಿದ್ದ ಶುಂಠಿ ಮತ್ತು ಮುಸುಕಿನ ಜೋಳವೂ ನೀರಿನಿಂದ ನಾಶವಾಗುತ್ತಿದ್ದು ರೈತರು ಶುಂಠಿಯನ್ನು ನೀರಿನಿಂದಲೇ ಕಿತ್ತು ತರುತ್ತಿರುವ ದೃಶ್ಯವೂ ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುತ್ತಿದೆ.