ರೈತರ ಬದುಕನ್ನು ಹಸನಾಗಿಸಿದ ಮುಂಗಾರು ಮಳೆ

ರೈತರ ಬದುಕನ್ನು ಹಸನಾಗಿಸಿದ ಮುಂಗಾರು ಮಳೆ

LK   ¦    Aug 01, 2020 07:31:22 PM (IST)
ರೈತರ ಬದುಕನ್ನು ಹಸನಾಗಿಸಿದ ಮುಂಗಾರು ಮಳೆ

ಮೈಸೂರು:  ಈ ಬಾರಿಯ ಮುಂಗಾರು ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಧಾರಾಕಾರವಾಗಿಯೂ ಸುರಿಯದೆ ಸಾಧಾರಣವಾಗಿ ಸುರಿಯುತ್ತಿದ್ದ ಮಳೆಯಲ್ಲಿಯೆ ಕೃಷಿ ಚಟುವಟಿಕೆ ಆರಂಭಿಸಿದ ರೈತರು ಈಗಾಗಲೇ ಜೋಳ, ಶುಂಠಿ, ತಂಬಾಕಿನಂತಹ ವಾಣಿಜ್ಯ ಬೆಳೆ ಮಾತ್ರವಲ್ಲದೆ ಇತರೆ ಆಹಾರಬೆಳೆ ಮತ್ತು ತರಕಾರಿಗಳನ್ನು ಬೆಳೆದಿದ್ದು ಎಲ್ಲವೂ ಸರಿಹೋದರೆ ರೈತರ ಬದುಕು ಹಸನಾಗುವುದರಲ್ಲಿ ಎರಡು ಮಾತಿಲ್ಲ.

ಕಳೆದ ವರ್ಷ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಕೃಷಿ ನಾಶವಾಗಿ ರೈತರು ನಷ್ಟ ಅನುಭವಿಸಿದ್ದರು. ಹಲವು ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಆದರೆ ಈ ಬಾರಿ ಮಳೆ ಅಬ್ಬರವಿಲ್ಲದೆ ಸುರಿದಿದ್ದರಿಂದ ರೈತರಿಗೆ ಕೃಷಿ ಮಾಡಲು ಅನುಕೂಲವಾಗಿತ್ತು. ಹೀಗಾಗಿ  ಮುಂಗಾರು ಹಂಗಾಮಿನ ಆರಂಭದಲ್ಲಿಯೇ ರೈತರು ಜಮೀನಿನತ್ತ ಮುಖ ಮಾಡಿದ್ದರಲ್ಲದೆ, ತಂಬಾಕು, ಶುಂಠಿ, ಮುಸುಕಿನ ಜೋಳವನ್ನು ಬೆಳೆದಿದ್ದರು. ಇದೀಗ  ಎಲ್ಲ ಬೆಳೆಗಳು ಉತ್ತಮ ಬೆಳವಣಿಗೆ ಹಂತದಲ್ಲಿವೆ.  ಆದರೆ ಕಳೆದೆರಡು ವಾರಗಳಿಂದ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದರು. ಹೀಗಾದರೆ ಹೇಗಪ್ಪಾ?  ಮಾಡಿದ ಬೆಳೆ ನೀರಿಲ್ಲದೆ ಒಣಗಿ ಹೋಗುತ್ತದೆಯಲ್ಲ ಎಂಬ ಭಯದಲ್ಲಿದ್ದರು.

ಇದೀಗ  ಕಳೆದ ಮೂರ್ನಾಲ್ಕು  ದಿನಗಳಿಂದ ಬೀಳುತ್ತಿರುವ ಸೋನೆ ಮಳೆಯು ರೈತ ಹಾಗೂ ಕೃಷಿ ಕಾರ್ಮಿಕರಲ್ಲಿ ಸಂತಸವನ್ನುಂಟು ಮಾಡಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮತ್ತು ಹುಣಸೂರು ತಾಲೂಕಿನ  ಅದರಲ್ಲೂ ನಾಗರಹೋಳೆ ರಾಷ್ಟ್ರೀಯ ಉದ್ಯಾನವನಕ್ಕೆ  ಹೊಂದಿಕೊಂಡಂತಿರುವ ಗ್ರಾಮಗಳ ಪೈಕಿ ಬಹುತೇಕ ರೈತರು ವಾಣಿಜ್ಯ ಬೆಳೆಯತ್ತ ಆಸಕ್ತಿ ತೋರಿ ತಂಬಾಕು, ಶುಂಠಿ, ಮುಸುಕಿನ ಜೋಳ, ಬಾಳೆ ಸೇರಿದಂತೆ ಹಲವು  ರೀತಿಯ  ಬೆಳೆಗಳನ್ನು ಬೆಳೆದಿದ್ದರು. ಈಗ  ಅವು ಬೆಳವಣಿಗೆ ಹಂತದಲ್ಲಿದ್ದು   ಅವುಗಳ ಪೋಷಣೆಯಲ್ಲಿ ರೈತರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗ ಎಲ್ಲೆಡೆಯೂ ಜಮೀನುಗಳಲ್ಲಿ ಕೃಷಿ ಚಟುವಟಿಕಯಲ್ಲಿ ತೊಡಗಿಸಿಕೊಂಡಿರುವ ರೈತರು  ಕೃಷಿ ಕಾರ್ಮಿಕರೇ ಕಂಡು ಬರುತ್ತಿದ್ದಾರೆ.  ಕೃಷಿ ಚಟುವಟಿಕೆ ಗರಿಗೆದರಿದ ಕಾರಣ ಕೂಲಿ ಕಾರ್ಮಿಕರಿಗೂ ಕೆಲಸ ಸಿಗುತ್ತಿದೆ.

ಈಗ ಗ್ರಾಮೀಣ ಪ್ರದೇಶಗಳಲ್ಲಿ ಓಡಾಡಿದರೆ  ಎಲ್ಲೆಡೆಯೂ ಬೆಳೆದು ನಿಂತ ಮುಸುಕಿನ ಜೋಳದ ಬೆಳೆ ಕಂಡು ಬರುತ್ತಿದೆ. ಮೇ-ಜೂನ್‍ನಲ್ಲಿ ಹನಗೋಡು ವ್ಯಾಪ್ತಿಯ ರೈತರು ಮುಸುಕಿನ ಜೋಳ ಬಿತ್ತನೆ ಮಾಡಿದ್ದು ಪ್ರಾರಂಭ ಹಂತದಲ್ಲಿ ಮಳೆಯಾಗದೆ ಆಗೊಮ್ಮೆ-ಈಗೊಮ್ಮೆ ಬಿರುಗಾಳಿ ಸಿಡಿಲು ಭರಿತ ಸಣ್ಣ ಪ್ರಮಾಣದ ಮಳೆಯಾಗಿ ರೈತರನ್ನು ಆತಂಕಕ್ಕೀಡು ಮಾಡಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಬಿಡುವಿಲ್ಲದೆ ಬೀಳುತ್ತಿರುವ ಸೋನೆ ಮಳೆಯಿಂದ ಸೊರಗಿ ಹೋಗಿದ್ದ ಜೋಳದ ಬೆಳೆ ಸೇರಿದಂತೆ ತಂಬಾಕು ಹಾಗೂ ಶುಂಠಿ ಬೆಳೆಯು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದು, ಜೀವ ಕಳೆ ಬಂದಿದೆ ಇದರಿಂದ  ರೈತರು ಖುಷಿಯಲ್ಲಿದ್ದಾರೆ.

ಇನ್ನೊಂದೆಡೆ  ಕಾಡಂಚಿನ ಗ್ರಾಮಗಳು ಸೇರಿದಂತೆ  ಪಿರಿಯಾಪಟ್ಟಣ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕನ್ನು ಮೇ ತಿಂಗಳ ಮೊದಲ ಒಂದೆರಡು ವಾರಗಳಲ್ಲಿ ನಾಟಿ ಮಾಡಿದ್ದು, ತಂಬಾಕು ಎಲೆಗಳು ಹುಲುಸಾಗಿ ಬೆಳೆದಿದ್ದು  ಕಟಾವಿಗೆ ಬಂದಿದೆ. ಈಗಾಗಲೇ ರೈತರು ಹರ್ಷದಿಂದ ತಂಬಾಕು ಎಲೆಗಳನ್ನು ಹದಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅಷ್ಟೇ ಅಲ್ಲದೆ  ಉತ್ತಮದ ದರದ ನಿರೀಕ್ಷೆಯಲ್ಲಿದ್ದಾರೆ.