ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

LK   ¦    Mar 31, 2021 09:45:42 AM (IST)
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಮೈಸೂರು: ಮಾದಕ ವಸ್ತು ಆಫೀಮನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 257 ಗ್ರಾಂ ಮಾದಕ ಪದಾರ್ಥವನ್ನು ವಶಪಡಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಮೂಲತಃ ರಾಜಸ್ತಾನದ ನಿವಾಸಿ ಮೈಸೂರಿನ ಆಲನಹಳ್ಳಿಯ ನೇತಾಜಿ ನಗರದಲ್ಲಿ ವಾಸವಿದ್ದ ಸುಮೇರರಾಮ್ ಅಲಿಯಾಸ್ ಸುಮೇರ್ ಬಂಧಿತ ಆರೋಪಿ. ಈತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ನಡುವೆ ಈತ ಮೈಸೂರು ನಗರದ ಬನ್ನಿಮಂಟಪದ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಲಾಯಲ್ ವಲ್ರ್ಡ್ ಎದುರು ಇರುವ ದಿ ಡಾನ್ ಹೋಟೆಲ್ ಹತ್ತಿರ ಮಾದಕ ವಸ್ತು ಅಫೀಮನ್ನು ಮಾರಾಟ ಮಾಡುತ್ತಿರುವ ಕುರಿತಂತೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿತ್ತು.

ಮೈಸೂರು ನಗರದ ಡಿಸಿಪಿ ಡಾ. ಎ.ಎನ್.ಪ್ರಕಾಶ್‍ಗೌಡರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ. ಪ್ರಭಾರ ಎ.ಸಿ.ಪಿ. ಎಂ.ಶಿವಶಂಕರರವರ ಉಸ್ತುವಾರಿಯಲ್ಲಿ ಸಿ.ಸಿ.ಬಿ.ಯ ಪೊಲೀಸ್ ಇನ್ಸ್‍ಪೆಕ್ಟರ್ ಶಶಿಕುಮಾರ್.ವಿ.ಎಸ್. ಜಿ.ಶೇಖರ್, ಆರ್.ಜಗದೀಶ್, ಎ.ಎಸ್.ಐ.ಚಂದ್ರೇಗೌಡ, ಎಲ್.ಸುಭಾಷ್‍ಚಂದ್ರ, ಸಿಬ್ಬಂದಿ ಎಂ.ಆರ್.ಗಣೇಶ್, ರಾಮಸ್ವಾಮಿ, ಎ.ಎಲ್.ಯುವರಾಜ್, ಡಿ.ಶ್ರೀನಿವಾಸಪ್ರಸಾದ್, ಲಕ್ಷ್ಮೀಕಾಂತ, ಸಲೀಂಪಾಷ, ಆನಂದ.ವಿ. ಅನಿಲ್, ಪ್ರಕಾಶ್, ಕೆ.ಮಹೇಶ, ನರಸಿಂಹ, ಮೋಹನಾರಾಧ್ಯ,. ಮಾರುತಿ ಪವನ್, ಕು. ಭವಾನಿ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಸುಮೇರರಾಮ್‍ನನ್ನು ಬಂಧಿಸಿದೆ.

ಬಂಧಿತ ಸುಮೇರರಾಮ್‍ನಿಂದ 10ಸಾವಿರ ಬೆಲೆ ಬಾಳುವ 257 ಗ್ರಾಂ ಮಾದಕ ವಸ್ತು, ಒಂದು ಮೊಬೈಲ್ ಫೋನ್ ಹಾಗೂ ಮಾದಕ ವಸ್ತುವನ್ನು ಮಾರಾಟ ಮಾಡಿ ಸಂಪಾದನೆ ಮಾಡಿದ್ದ 2,100-ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.