ಕೊರೋನಾ ತಡೆಗೆ ಮೈಸೂರಲ್ಲಿ ಮಾಡಿದ್ದಾದರೂ ಏನು?

ಕೊರೋನಾ ತಡೆಗೆ ಮೈಸೂರಲ್ಲಿ ಮಾಡಿದ್ದಾದರೂ ಏನು?

LK   ¦    Mar 25, 2020 03:12:38 PM (IST)
ಕೊರೋನಾ ತಡೆಗೆ ಮೈಸೂರಲ್ಲಿ ಮಾಡಿದ್ದಾದರೂ ಏನು?

ಮೈಸೂರು: ಕೊರೊನಾ ವೈರಾಣು ತಡೆಗಟ್ಟುವ ಸಂಬಂಧ ರಾಜ್ಯ ಸರ್ಕಾರದ ಆದೇಶದ ಅನ್ವಯ ಮೈಸೂರು ಜಿಲ್ಲೆಯಲ್ಲಿ ಹಲವು ರೀತಿಯ ಮುಂಜಾಗ್ರತಾ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡಿದ್ದು ಸಾರ್ವಜನಿಕರಿಗೆ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಲಾಗಿದೆ.

ಈಗಿನ ಪರಿಸ್ಥಿತಿಯಲ್ಲಿ ಮೈಸೂರಿನಲ್ಲಿ ಏನೇನು ಕ್ರಮ ಕೈಗೊಳ್ಳಲಾಗಿದೆ ಮತ್ತು ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಜಿಲ್ಲಾಧಿಕಾರಿಗಳಾದ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ಅಗತ್ಯ ವಿಷಯಗಳಲ್ಲಿ ಪರಿಣಿತಿ ಹೊಂದಿದ ಸ್ವಯಂಸೇವಕರನ್ನು ನೇಮಿಸಿಕೊಳ್ಳಲಾಗುವುದು. ಆಶಕ್ತಿ ಇರುವ ಕೌಶಲ್ಯಯುತ ಸ್ವಯಂಸೇವಕರು ಮೈಸೂರು ಜಿಲ್ಲಾಧಿಕಾರಿಗಳ ವೆಬ್‍ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.

ನಗರದಲ್ಲಿ ಹಲವು ಖಾಸಗಿ ಕ್ಲಿನಿಕ್‍ಗಳು ಮುಚ್ಚಿವೆ. ವೈದ್ಯರು ತಮ್ಮ ಖಾಸಗಿ ಕ್ಲಿನಿಕ್‍ಗಳನ್ನು ಈ ಸಂದರ್ಭದಲ್ಲಿ ಮುಚ್ಚದೆ ಎಂದಿನಂತೆ ನಡೆಸಬೇಕು. ಅದೇ ರೀತಿ ರೋಗಿಗಳು ತೀರ ಅಗತ್ಯವಿದ್ದಲ್ಲಿ ಮಾತ್ರ ಆಸ್ಪತ್ರೆಗೆ ತೆರಳಬೇಕು.

ಯಾವುದೇ ದಿನನಿತ್ಯ ಬಳಕೆಯ ಅತ್ಯಗತ್ಯ ವಸ್ತುಗಳ ಮಾರಾಟ ಮಾಡುವ ಮಳಿಗೆಗಳನ್ನು ನಿರ್ಬಂಧಿಸಿಲ್ಲ. ಎಲ್‍ಪಿಜಿ, ಇಂಧನ ಎಲ್ಲಾ ದಿನಗಳಲ್ಲಿ ಲಭ್ಯವಿರುತ್ತದೆ. ಆದ್ದರಿಂದ ಸಾರ್ವಜನಿಕರು ಅಗತ್ಯಕ್ಕಿಂತ ಹೆಚ್ಚು ಖರೀದಿಸಿ ಶೇಖರಿಸಿಟ್ಟುಕೊಳ್ಳಬೇಡಿ. ಇದರಿಂದ ಸಮಸ್ಯೆ ಹೆಚ್ಚಾಗುತ್ತದೆ.

ಕೆಲವು ಹೋಮ್ ಕ್ವಾರಂಟೈನ್‍ನಲ್ಲಿ ಇರುವವರು ಹೋಟೆಲ್, ಲಾಡ್ಜ್ ನಲ್ಲಿದ್ದು, ಅವರು ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳಗಳಲ್ಲಿ ವಾಸಿಸಬಾರದು. ತಮ್ಮ ಮನೆಯಲ್ಲೇ ಪ್ರತ್ಯೇಕವಾಗಿ ಇರಬೇಕು. ಹೋಮ್ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಗಳ ಮನೆಗೆ ಸ್ಟಿಕ್ಕರ್ ಹಾಕಲು ಸರ್ಕಾರ ಈಗಾಗಲೇ ಸೂಚಿಸಿದೆ. ಅದರಂತೆ ಅಂತಹ ವ್ಯಕ್ತಿಗಳು ವಾಸಿಸುವ ಮನೆಗಳಿಗೆ ಸ್ಟಿಕ್ಕರ್ ಹಾಕಲಾಗುತ್ತಿದೆ.

ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ಮನಗೆ ಒಬ್ಬರಂತೆ ಬಂದು ಆಹಾರ ವಸ್ತುಗಳಗಳನ್ನು ಖರೀದಿ ಮಾಡಬೇಕು. ದಿನಸಿ ಮಳಿಗೆ ಹಾಗೂ ಮಾರುಕಟ್ಟೆಗಳಲ್ಲಿ ಗುಂಪಾಗಿ ಸೇರಬಾರದು ಎಂದು ಸೂಚಿಸಲಾಗಿದೆ. ಬಹುಶಃ ಇದೆಲ್ಲವನ್ನು ಸಾರ್ವಜನಿಕರು ಅರಿತು ಪಾಲಿಸಿದರೆ ಕೊರೋನಾ ನಿಯಂತ್ರಣಕ್ಕೆ ಸಹಾಯವಾಗಲಿದೆ.