ಕಮೀಷನರ್‌ ಕಚೇರಿ ಉದ್ಘಾಟನೆಗೆ ದೂರುದಾರರ ಆಕ್ಷೇಪ

ಕಮೀಷನರ್‌ ಕಚೇರಿ ಉದ್ಘಾಟನೆಗೆ ದೂರುದಾರರ ಆಕ್ಷೇಪ

CI   ¦    Nov 21, 2020 05:24:26 PM (IST)
ಕಮೀಷನರ್‌ ಕಚೇರಿ ಉದ್ಘಾಟನೆಗೆ ದೂರುದಾರರ ಆಕ್ಷೇಪ

ಮೈಸೂರು: ಸಾರ್ವಜನಿಕ ಪಾರ್ಕ್ ಜಾಗದಲ್ಲಿ ಯಾವುದೇ ಅನುಮತಿ ಪಡೆಯದೇ ನಿರ್ಮಾಣವಾಗಿರುವ ನೂತನ ನಗರ ಪೊಲೀಸ್​ ಕಮಿಷನರ್ ಕಚೇರಿ ನಿರ್ಮಾಣಕ್ಕೆ ಈ ಹಿಂದೆಯೇ ರಾಜ್ಯ ಹೈಕೋರ್ಟ್ ನಿಂದ ತಡೆಯಾಜ್ಞೆ ಇದ್ದರೂ ಮಂಗಳವಾರ ಸಿಎಂ ಯಡಿಯೂರಪ್ಪ ಅವರಿಂದ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದ್ದು ಸರಿಯಲ್ಲ ಎಂದು ದೂರುದಾರ ಅಶೋಕ್ ಕುಮಾರ್ ತಿಳಿಸಿದ್ದಾರೆ.

ನಗರದ ನಜರ್​ಬಾದ್​ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ನೂತನ ಪೊಲೀಸ್​ ಕಮಿಷನರ್ ಕಚೇರಿ ಪಾರ್ಕ್ ಗೆ ಸೇರಿದ ಜಾಗದಲ್ಲಿದ್ದು, ಯಾವುದೇ ಅನುಮತಿ ಪಡೆಯದೇ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ, ನಜರ್ ಬಾದ್ ನಿವಾಸಿ ಅಶೋಕ್ ಕುಮಾರ್ ಹೈಕೋರ್ಟ್​ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಈ ತಡೆಯಾಜ್ಞೆಯನ್ನೂ ಲೆಕ್ಕಿಸದೆ ಪೊಲೀಸ್ ಕಮಿಷನರ್ ಕಚೇರಿ ನಿರ್ಮಾಣವಾಗಿದೆ. ಇದನ್ನು ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲಿ ಉದ್ಘಾಟನೆ ಮಾಡಿಸಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆಗ ದೂರುದಾರ ಅಶೋಕ್ ಕುಮಾರ್ ಪ್ರತಿಕಾ ಹೇಳಿಕೆ ನೀಡಿದ್ದರು.

ಇದನ್ನು ಗಮನಿಸಿದ ಸಿದ್ದರಾಮಯ್ಯ ಕೋರ್ಟ್​ನ ತಡೆಯಾಜ್ಞೆಯ ಉಲ್ಲಂಘನೆ ಆಗುತ್ತದೆ ಎಂದು ಉದ್ಘಾಟನೆಗೆ ಬರಲಿಲ್ಲ. ಆದರೆ, ಮಂಗಳವಾರ 24 ನೇ ತಾರೀಖು ಸಂಜೆ ಸಿಎಂ ಯಡಿಯೂರಪ್ಪ ಈ ಕಟ್ಟಡ ಉದ್ಘಾಟನೆ ಮಾಡುತ್ತಾರೆ ಎಂದು ದಿನಾಂಕ ನಿಗದಿ ಮಾಡಲಾಗಿದೆ. ತಡೆಯಾಜ್ಞೆ ಇದ್ದರೂ ಯಡಿಯೂರಪ್ಪ ಈ ನೂತನ ಪೊಲೀಸ್ ಕಮಿಷನರ್ ಕಚೇರಿ ಉದ್ಘಾಟನೆಗೆ ಬರುತ್ತಿರುವುದು ಸರಿಯಲ್ಲ. ಇದು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಅಶೋಕ್​ ಕುಮಾರ್​ ಹೇಳಿದ್ದಾರೆ.