ಶಿವನಸಮುದ್ರದಲ್ಲಿ ಕಾವೇರಿಯ ಭೋರ್ಗರೆತ

ಶಿವನಸಮುದ್ರದಲ್ಲಿ ಕಾವೇರಿಯ ಭೋರ್ಗರೆತ

LK   ¦    Aug 08, 2020 05:53:28 PM (IST)
ಶಿವನಸಮುದ್ರದಲ್ಲಿ ಕಾವೇರಿಯ ಭೋರ್ಗರೆತ

ಮೈಸೂರು: ಕೆ.ಆರ್.ಎಸ್. ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಕ್ಕೆ ಬಿಡುತ್ತಿರುವುದರಿಂದ ತಗ್ಗುಪ್ರದೇಶದಲ್ಲಿ ಪ್ರವಾಹವುಂಟಾಗಿದ್ದರೂ ಶಿವನಸಮುದ್ರದ ಭರಚುಕ್ಕಿ ಮತ್ತು ಗಗನಚುಕ್ಕಿಯಲ್ಲಿ ಭೋರ್ಗರೆದು ಧುಮುಕುತ್ತಿದ್ದು ಸುಂದರ ರುದ್ರರಮಣೀಯ ದೃಶ್ಯ ಸೃಷ್ಟಿಯಾಗಿದೆ.

 

ಬೇಸಿಗೆಯಲ್ಲಿ ನೀರಿಲ್ಲದೆ ಅದೃಶ್ಯವಾಗಿದ್ದ ಜಲಧಾರೆಗಳು ಇದೀಗ ಮೈದುಂಬಿ ಧುಮ್ಮಿಕ್ಕುತ್ತಿರುವುದರಿಂದ ಆ ದೃಶ್ಯವನ್ನು ನೋಡಲು ಎರಡು ಕಣ್ಣುಗಳೇ ಸಾಲದಾಗಿದೆ. ಇದೀಗ ಶಿವನಸಮುದ್ರಕ್ಕೆ ತೆರಳಿದವರಿಗೆ ಗಗನಚುಕ್ಕಿ, ಭರಚುಕ್ಕಿಗಳ ಭೋರ್ಗರೆತ... ಅದರಿಂದ ಹಾರಿ ಬರುವ ಮಂಜಿನ ಸಿಂಚನ... ತಣ್ಣನೆ ಬೀಸುವ ತಂಗಾಳಿ... ಕಣ್ಣು ಹಾಯಿಸಿದೆಡೆಲ್ಲೆಲ್ಲಾ ಹಸಿರು ಹಚ್ಚಡದ ನಿಸರ್ಗ ಕಣ್ಣಿಗೆ ರಾಚುತ್ತಿದೆ.

 

ಇದೀಗ ಹರಿದು ಬರುತ್ತಿರುವ ಕಾವೇರಿ ನದಿ ಶಿವನಸಮುದ್ರ ತಲುಪುತ್ತಿದ್ದಂತೆಯೇ ಗಗನದೆತ್ತರದಿಂದ ಧುಮುಕಿ ಗಗನಚುಕ್ಕಿಯಾಗಿ, ಬಳಿಕ ಭರದಿಂದ ಹರಿದು ಭರಚುಕ್ಕಿಯಾಗಿ ಗಮನಸೆಳೆಯುತ್ತಾಳೆ. ನಿಸರ್ಗದ ನಡುವೆ ಹೆಬ್ಬಂಡೆಗಳ ಮೇಲೆ ಹಾಲ್ನೊರೆಯಾಗಿ ಧುಮುಕುತ್ತಾ ವೀಕ್ಷಕರ ಮನಕ್ಕೆ ಲಗ್ಗೆಯಿಡುವ ಈ ಜಲಧಾರೆಗಳು ಶಿವನಸಮುದ್ರದ ಮುಕುಟ ಮಣಿಗಳಾಗಿವೆ.

 

ಶಿವನಸಮುದ್ರದಲ್ಲಿ ಕಾವೇರಿ ನದಿ ಸುಮಾರು ನಾನೂರ ಹತ್ತೊಂಬತ್ತು ಅಡಿ ಎತ್ತರದಿಂದ ಕಂದಕಕ್ಕೆ ಧುಮುಕುವುದು ನೋಡುಗರಿಗೆ ವಿಸ್ಮಯ ಮೂಡಿಸುತ್ತಿದೆ.

 

ಶಿವನಸಮುದ್ರದಲ್ಲಿರುವ ಎರಡು ಜಲಧಾರೆಗಳು ಕೆಲವೇ ಕೆಲವು ಕಿಲೋಮೀಟರ್ ದೂರದ ಅಂತರದಲ್ಲಿದ್ದರೂ ಇವು ಬೇರೆ, ಬೇರೆ ಜಿಲ್ಲೆಗಳಿಗೆ ಸೇರಿವೆ. ಭರಚುಕ್ಕಿ ಚಾಮರಾಜನಗರಕ್ಕೆ ಸೇರಿದರೆ, ಗಗನಚುಕ್ಕಿ ಮಂಡ್ಯ ಜಿಲ್ಲೆಗೆ ಸೇರಿದೆ. ಈ ಜಲಧಾರೆಗಳು ನಯನಮನೋಹರವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ವಿದ್ಯುತ್ ಉತ್ಪಾದನಾ ಘಟಕವನ್ನು ನೋಡಲು ಮುಗಿ ಬೀಳುತ್ತಾರೆ. ಹೀಗಾಗಿ ಈ ವಿದ್ಯುತ್ ಉತ್ಪಾದನಾ ಘಟಕಗಳನ್ನು ವೀಕ್ಷಿಸಲೆಂದೇ ಟ್ರಾಲಿಗಳನ್ನು ನಿರ್ಮಿಸಲಾಗಿದೆ. ಬಿಟೀಷರು ಶಿವನಸಮುದ್ರ ವಿದ್ಯುತ್ ಉತ್ಪಾದನಾ ಘಟಕವನ್ನು ಬ್ಲಫ್ ಎಂಬ ಹೆಸರಿನಿಂದ ಕರೆಯುತ್ತಿದ್ದರು.

 

ಶಿವನಸಮುದ್ರಕ್ಕೆ ಬೆಂಗಳೂರಿನಿಂದ ಬರುವುದಾದರೆ ರಾಮನಗರ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ ಮೂಲಕ ಹಾಗೂ ಮೈಸೂರಿನಿಂದ ಬನ್ನೂರು, ಮಳವಳ್ಳಿ ಅಥವಾ ಚಾಮರಾಜನಗರ, ಕೊಳ್ಳೆಗಾಲ ಮೂಲಕವೂ ಬರಬಹುದು. ಶಿವನಸಮುದ್ರಕ್ಕೆ ತೆರಳಿದರೆ ಸುತ್ತಮುತ್ತಲಿರುವ ತಲಕಾಡು, ಸೋಮನಾಥಪುರ ಮುಂತಾದ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ ಬರಬಹುದಾಗಿದೆ.