ಜ.17ರಿಂದ ಮೈಸೂರಲ್ಲಿ ಪಲ್ಸ್ ಪೊಲಿಯೋ ಕಾರ್ಯಕ್ರಮ

ಜ.17ರಿಂದ ಮೈಸೂರಲ್ಲಿ ಪಲ್ಸ್ ಪೊಲಿಯೋ ಕಾರ್ಯಕ್ರಮ

LK   ¦    Jan 09, 2021 10:03:20 AM (IST)
ಜ.17ರಿಂದ ಮೈಸೂರಲ್ಲಿ ಪಲ್ಸ್ ಪೊಲಿಯೋ ಕಾರ್ಯಕ್ರಮ

ಮೈಸೂರು: 2021ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮವು ಜನವರಿ 17ರಿಂದ 22 ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಪಲ್ಸ್ ಪೊಲಿಯೊ ಆಂದೋಲನ ನಡೆಸುವ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಪಲ್ಸ್ ಪೋಲಿಯೋ ಆಂದೋಲನವು ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆಯಲು ಎಲ್ಲಾ ಇಲಾಖೆಗಳ, ಸಂಘ ಸಂಸ್ಥೆಗಳ, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಾಧ್ಯಮ ಮಿತ್ರರು ಸಹಕರಿಸುವಂತೆ ಮನವಿ ಮಾಡಿದರು.

ಕೋವಿಡ್19 ಮುಂಜಾಗ್ರತಾ ಕ್ರಮಗಳು: ಈ ಬಾರಿ ಪಲ್ಸ್ ಪೋಲಿಯೋ ಆಂದೋಲನದ ಸಂದರ್ಭ ಕೋವಿಡ್ 19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಕೋವಿಡ್-19 ರೋಗಲಕ್ಷಣಗಳಿಂದ (ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇತ್ಯಾದಿಗಳು) ಬಳಲುತ್ತಿರುವ ತಂಡದ ಸದಸ್ಯರನ್ನು ನಿಯೋಜಿಸುವಂತಿಲ್ಲ. ಸಾಕಷ್ಟು ವ್ಯಾಕ್ಸಿನೇಟರ್ ಮತ್ತು ಮೇಲ್ವಿಚಾರಕರನ್ನು ಗುರುತಿಸಬೇಕು. ಸೋಂಕಿತವಲ್ಲದ ಪ್ರದೇಶಗಳಲ್ಲಿ ಸೋಂಕಿನ ಅಪಾಯವನ್ನು ತಡೆಗಟ್ಟುವಾಗ ಉತ್ತಮ ಸಮುದಾಯ ಸ್ವೀಕಾರಕ್ಕಾಗಿ ಸ್ಥಳೀಯ ವ್ಯಾಕ್ಸಿನೇಟರ್‍ ಗಳಿಗೆ ಆದ್ಯತೆ ನೀಡಬೇಕು.

ಮಾರ್ಕರ್ ಪೆನ್, ಸೀಮೆಸುಣ್ಣ, ಟ್ಯಾಲಿಶೀಟ್ ಮತ್ತು ರಿಪೋರ್ಟಿಂಗ್ ಮಾದರಿಗಳಂತಹ ಸಾಮಾನ್ಯ ಲಾಜಿಸ್ಟಿಕ್ ಜೊತೆಗೆ ವೈದ್ಯಕೀಯ ಮಾಸ್ಕ್, ಕೈಗವಸುಗಳು, ಹ್ಯಾಂಡ್ ಸ್ಯಾನಿಟೈಸರ್‍ಗಳು ಮತ್ತು ಕೈತೊಳೆಯಲು ಸಾಬೂನು ಮುಂತಾದ ಲಾಜಿಸ್ಟಿಕ್ಸ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರುವ ಬೂತ್ ಅನ್ನು (200 ಕ್ಕೂ ಹೆಚ್ಚು ಮಕ್ಕಳು) ವಿಭಜಿಸಬೇಕು. ಸಾಧ್ಯವಾದ ಬೂತ್‍ಗಳಲ್ಲಿ ಕೈ ತೊಳೆಯುವ ಸೌಲಭ್ಯವನ್ನು ಸ್ಥಾಪಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಕೋವಿಡ್ ನಿಯಮಗಳನ್ನು ಸಭೆಗೆ ವಿವರಿಸಿದರು.

ಜ.17ರಂದು ಬೆಳಿಗ್ಗೆ 8ರಿಂದ ಪಲ್ಸ್ ಪೋಲಿಯೋ ಲಸಿಕೆ ನೀಡುವಂತಹ ಶಾಲಾ, ಕಾಲೇಜಿಗಳ ಕೊಠಡಿಗಳನ್ನು ತೆರೆದಿಡಬೇಕು. ಎಲ್.ಕೆ.ಜಿ. ಪ್ಲೇಮ್ ಹೋಮ್ ಸೇರಿದಂತೆ ಐದು ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳುವ ಶೈಕ್ಷಣಿಕ ಕೇಂದ್ರಗಳ ಮುಖೇನ ಪಲ್ಸ್ ಪೋಲಿಯೋದಲ್ಲಿ ಭಾಗಿಯಾಗುವಂತೆ ಪೋಷಕರನ್ನು ಪ್ರೇರೇಪಿಸುವಂತೆ ಡಿಡಿಪಿಐ, ಬಿಇಓಗಳು ಸುತ್ತೋಲೆ ಹೊರಡಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಪಲ್ಸ್ ಪೋಲಿಯೋ ವೇಳೆ ಹಾಜರಿರುವಂತೆ ಮನವಿ ಮಾಡಬೇಕು. ಇದಕ್ಕೂ ಮುನ್ನ ಆಯಾ ಭಾಗದಲ್ಲಿ ತೆರೆದಿರುವ ಲಸಿಕಾ ಕೇಂದ್ರಗಳ ಬಗ್ಗೆ ಕರಪತ್ರ ಮುದ್ರಿಸಿ ಪ್ರಚುರಪಡಿಸಬೇಕೆಂದು ಸಲಹೆ ನೀಡಿದರು.