ಮೈಸೂರಿನಲ್ಲಿ ಪ್ರಮುಖ ವ್ಯಾಪಾರ ಕೇಂದ್ರಗಳು ಬಂದ್

ಮೈಸೂರಿನಲ್ಲಿ ಪ್ರಮುಖ ವ್ಯಾಪಾರ ಕೇಂದ್ರಗಳು ಬಂದ್

LK   ¦    Jun 25, 2020 12:29:47 PM (IST)
ಮೈಸೂರಿನಲ್ಲಿ ಪ್ರಮುಖ ವ್ಯಾಪಾರ ಕೇಂದ್ರಗಳು ಬಂದ್

ಮೈಸೂರು: ರಾಜಧಾನಿ ಬೆಂಗಳೂರಿಗೆ ಹತ್ತಿರವಿರುವ ಕಾರಣದಿಂದ ಅಲ್ಲದೆ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚಾರ ಮಾಡುವವರಿಂದಾಗಿ ಮೈಸೂರು ನಗರದಲ್ಲಿ ಮುಂದಿನ ದಿನಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ.

ಈಗಾಗಲೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 198ಕ್ಕೇರಿದ್ದು, ಇದರಲ್ಲಿ 122 ಮಂದಿ ಗುಣಮುಖವಾಗಿದ್ದು, 76 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತಂತೆ ವಿವರಗಳನ್ನು ನೋಡುವುದಾದರೆ ಇದುವರೆಗೆ ಜಿಲ್ಲೆಯಲ್ಲಿ 9970 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, 8191 ಮಂದಿ 14 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. 1418 ಮಂದಿ ಹೋಂ ಕ್ವಾರಂಟೈನ್‍ನಲ್ಲಿದ್ದರೆ, 285 ಮಂದಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ. ಈವರೆಗೆ 17669 ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಿದ್ದು, 17471 ನೆಗೆಟಿವ್ ಬಂದಿದೆ.

 

ಸಾರ್ವಜನಿಕರ ಸ್ಥಳಗಳಲ್ಲಿ ಸಾಮಾಜಿಕ ಅಂತರದ ಕೊರತೆಯೂ ಕಾಡತೊಡಗಿದೆ. ಮಾರುಕಟ್ಟೆ ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಜನರ ನೂಕು ನುಗ್ಗಲು ಕಂಡು ಬರುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗಲಿದ್ದು, ಇದರ ತಡೆಗೆ ಇಂದಿನಿಂದ ನಾಲ್ಕು ದಿನಗಳ ಕಾಲ ಮೈಸೂರು ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಾದ ದೇವರಾಜ ಮಾರುಕಟ್ಟೆ, ಸಂತೆ ಪೇಟೆ, ಶಿವರಾಂಪೇಟೆ, ಮನ್ನಾರ್ಸ್ ಮಾರ್ಕೆಟ್, ಬೋಟಿ ಬಜಾರ್ ಹಾಗೂ ಸುತ್ತಮುತ್ತಲ ಫುಟ್ ಪಾತ್‍ಗಳನ್ನು ಬಂದ್ ಮಾಡಿ ಸ್ಯಾನಿಟೈಸ್ ಮಾಡಲಾಗುತ್ತಿದೆ.

 

ಈ ವ್ಯಾಪಾರ ಕೇಂದ್ರಗಳಲ್ಲಿ ಪ್ರತಿದಿನ ಸಾವಿರಾರು ಮಂದಿ ಬಂದು ಹೋಗುತ್ತಿರುವುದರಿಂದ ವ್ಯಾಪಾರಸ್ಥರು ಸೇರಿದಂತೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಾಲ್ಕು ದಿನಗಳ ಕಾಲ ಬಂದ್ ಮಾಡಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಇನ್ನು ಹೊಸ ಪ್ರಕರಣಗಳಿಂದಾಗಿ ಹೆಬ್ಬಾಳು ಮೊದಲನೇ ಹಂತ, ದೇವರಾಜ ಮೊಹಲ್ಲಾದ ಬಿ.ಕೆ.ಸ್ಟ್ರೀಟ್, ದಟ್ಟಗಳ್ಳಿಯ 3ನೇ ಹಂತ, 11ನೇ ಮೇನ್ ಸೀಲ್‍ಡೌನ್ ಮಾಡಲಾಗಿದೆ.