ಸಮಸ್ಯೆ ಎದುರಿಸಿ ಕರ್ತವ್ಯ ನಿರ್ವಹಿಸಲು ಬದ್ಧರಾಗಿರಬೇಕು: ಬಸವರಾಜ ಬೊಮ್ಮಯಿ

ಸಮಸ್ಯೆ ಎದುರಿಸಿ ಕರ್ತವ್ಯ ನಿರ್ವಹಿಸಲು ಬದ್ಧರಾಗಿರಬೇಕು: ಬಸವರಾಜ ಬೊಮ್ಮಯಿ

LK   ¦    Oct 18, 2019 07:36:50 PM (IST)
ಸಮಸ್ಯೆ ಎದುರಿಸಿ ಕರ್ತವ್ಯ ನಿರ್ವಹಿಸಲು ಬದ್ಧರಾಗಿರಬೇಕು: ಬಸವರಾಜ ಬೊಮ್ಮಯಿ

ಮೈಸೂರು: ಸಮಾಜದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಹಲವಾರು ಸಮಸ್ಯೆಗಳು ಎದುರಾಗಲಿದ್ದು, ಅಂತಹ ಸಮಸ್ಯೆಗಳನ್ನು ಎದುರಿಸಿ ಯಾವುದೇ ಆಮಿಷಗಳಿಗೆ ಒಳಗಾಗದೆ, ಪ್ರಮಾಣ ವಚನಕ್ಕೆ ಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಯಿ ಹೇಳಿದರು.

ನಗರದ ಅಕಾಡೆಮಿ ಕವಾಯತು ಮೈದಾನದಲ್ಲಿ ನಡೆದ 42ನೇ ತಂಡದ ಆರಕ್ಷಕ ಉಪನಿರೀಕ್ಷಕರು, ಆರ್‍ಎಸ್‍ಐ ಮತ್ತು ಸ್ಪೆ ಆರ್‍ಎಸ್‍ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಪ್ರಶಿಕ್ಷಣಾರ್ಥಿಗಳ ಕುರಿತು ಮಾತನಾಡಿದ ಅವರು ಇಂದು ನಿಮ್ಮ ಬದುಕಿನಲ್ಲಿ ಉತ್ತಮ ಘಟ್ಟ ತಲುಪಿದ್ದೀರ. ಅದೇ ರೀತಿ ಮುಂದೆ ಸಮಾಜದಲ್ಲಿ ಸತ್ಯ, ನ್ಯಾಯವನ್ನು ಎತ್ತಿಹಿಡಿಯುವ ಕಾರ್ಯ ನಿರ್ವಹಿಸಬೇಕು.

ಪೊಲೀಸ್ ಸೇವೆ ನಿರಂತರವಾಗಿ ಜನರಿಗೆ ಹತ್ತಿರವಾಗಿರುವ, ಅಪಾರ ಗೌರವಿಸುವ ಸೇವೆ, ಶಿಸ್ತಿನ ಹಾಗೂ ಘನತೆ ಹೆಚ್ಚಿಸುವ ಸೇವೆಯಾಗಿದೆ. ಈ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸಮಯ ಪ್ರಜ್ಞೆ ಮತ್ತು ಸ್ಥಿತಿ ಪ್ರಜ್ಞೆ ಮುಖ್ಯವಾಗಿರಬೇಕು. ದೇಹ ಮನಸ್ಸು ಎರಡು ಒಂದಾಗಿ ಕೆಲಸ ಮಾಡಿದರೆ ಪೊಲೀಸರಿಗೆ ಯಶಸ್ಸು ಗ್ಯಾರಂಟಿ ಎಂದು ತಿಳಿಸಿದರು.

ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ 12 ಶಾಲೆಗಳಿದ್ದು, ಪ್ರಶಿಕ್ಷಣಾರ್ಥಿಗಳಿಗೆ ಉತ್ತಮ ತರಬೇತಿ ನೀಡುತ್ತಾ ಬಂದಿವೆ. ಇತ್ತೀಚಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆ, ಸೈಬರ್ ಕ್ರೈಂಗಳ ಬದಲಾವಣೆಯಾಗುತ್ತಿದ್ದು, ತರಬೇತಿಗಳಲ್ಲಿ ಮತ್ತಷ್ಟು ಬದಲಾವಣೆ ಹಾಗೂ ಸುಧಾರಣೆ ಅವಶ್ಯಕವಾಗಿದೆ. ಅಂತರಾಷ್ಟ್ರೀಯ ಗುಣಮಟ್ಟದ ತರಬೇತಿಯನ್ನು ಕೊಡಲು ಚಿಂತಿಸಲಾಗಿದೆ ಎಂದು ಹೇಳಿದರು.

ಪೊಲೀಸ್ ಇಲಾಖೆಯಲ್ಲಿ ಸುಮಾರು 16 ಸಾವಿರ ಹುದ್ದೆಗಳು ಖಾಲಿಯಿದ್ದು, ಈ ವರ್ಷದಲ್ಲಿ ಮೊದಲನೇ ಹಂತವಾಗಿ ಸುಮಾರು 6 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪೊಲೀಸ್ ಇಲಾಖೆಯ ಔರಾದ್ಕರ್ ವರದಿಯು ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಅವರು ತಿಳಿಸಿದರು.

ನಿರ್ಗಮನ ಪಥ ಸಂಚಲನದಲ್ಲಿ 42ನೇ ತಂಡದ ಒಟ್ಟು 62 ಆರಕ್ಷಕ ಉಪನರೀಕ್ಷಕರು, ಆರ್‍ಎಸ್‍ಐ ಮತ್ತು ಸ್ಪೆಆರ್‍ಎಸ್‍ಐ ಪ್ರಶಿಕ್ಷಣಾರ್ಥಿಗಳು ಸುಮಾರು 11 ತಿಂಗಳ ಕಾಲ ಬುನಾದಿ ತರಬೇತಿ ಪಡೆದು ತಮ್ಮ ಸೇವೆಗೆ ಹೊರಟರು. ಇವರಲ್ಲಿ ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೆಂಗಳೂರು, ಹಾಸನ, ಚಿಕ್ಕಮಗಳೂರು, ಚಿರ್ತದುರ್ಗ, ಚಾಮರಾಜನಗರ, ದಾವಣಗೆರೆ, ಶಿವಮೊಗ್ಗ, ಧಾರವಾಡ, ಕಲಬುರುಗಿ, ಕೋಲಾರ, ಮೈಸೂರು, ರಾಯಚೂರು ಹಾಗೂ ವಿಜಯಪುರದಿಂದ ಆಯ್ಕೆಯಾದವರಿದ್ದರು.

ಇದೇ ಸಂದರ್ಭದಲ್ಲಿ ತರಬೇತಿಯಲ್ಲಿ ಹಲವಾರು ವಿಭಾಗಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಉತ್ತಮ ರೈಫಲ್ ಫೈರಿಂಗ್‍ನಲ್ಲಿ ಬೆಳಗಾವಿ ಜಿಲ್ಲೆಯ ಪ್ರೊ.ಆರ್.ಎಸ್.ಐ ಬಾನೆ ಸಿದ್ದಣ್ಣ, ರಿವಾಲ್ವರ್ ಪೈರಿಂಗ್‍ನಲ್ಲಿ ಬಾಗಲಕೋಟೆ ಜಿಲ್ಲೆಯ ಸ್ಪೆ.ಆರ್.ಎಸ್.ಐ ಸಂಜೀವ ಗಟ್ಟರಗಿ, ಡೈರೆಕ್ಟರ್ ಅಸೆಸ್‍ಮೆಂಟ್ ಕಪ್‍ನಲ್ಲಿ ಬೆಳಗಾವಿ ಜಿಲ್ಲೆಯ ಪ್ರೊ.ಪಿ.ಎಸ್.ಐ ಉಮಾಶ್ರೀ ಕಲಕುಟಗಿ, ಒಳಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿಯಾಗಿ ಹಾಗೂ ಸರ್ವೋತ್ತಮ ಪ್ರಶಿಕ್ಷಣಾರ್ಥಿ 2ನೇ ಸ್ಥಾನದಲ್ಲಿ ಹಾಸನದ ಸ್ಪೆ.ಆರ್.ಎಸ್.ಐ ರಘುರಾಜ್, ಹೊರಾಂಗಣ ಪ್ರಶಿಕ್ಷಾಣಾರ್ಥಿಯಾಗಿ ದಾವಣಗೆರೆ ಜಿಲ್ಲೆಯ ಪ್ರೊ.ಆರ್.ಎಸ್.ಐ ಮಂಜಣ್ಣ, ಸರ್ವೋತ್ತಮ ಮಹಿಳಾ ಪ್ರಶಿಕ್ಷಣಾರ್ಥಿ ಕೋಲಾರ ಜಿಲ್ಲೆಯ ಪ್ರೊ.ಪಿ.ಎಸ್.ಐ ಅರ್ಪಿತಾರೆಡ್ಡಿ ಹಾಗೂ ಸರ್ವೋತ್ತಮ ಪ್ರಶಿಕ್ಷಣಾರ್ಥಿಯಾಗಿ ಚಾಮರಾಜನಗರದ ಪ್ರೊ.ಪಿ.ಎಸ್.ಐ ಚರಣ್.ಎಸ್ ಅವರು ಬಹುಮಾನ ಪಡೆದುಕೊಂಡರು.

ಈ ಸಂದರ್ಭದಲ್ಲಿ ಪೊಲೀಸ್ ಮಹಾ ನಿರ್ದೇಶಕರಾದ ಪದಮ್ ಕುಮಾರ್ ಗರ್ಗ್, ಪೊಲೀಸ್ ಮಹಾ ನಿರೀಕ್ಷಕ ರವಿ ಎಸ್, ಪೊಲೀಸ್ ಮಹಾ ನಿರೀಕ್ಷಕರು ಮತ್ತು ನಿರ್ದೇಶಕರಾದ ವಿಪುಲ್ ಕುಮಾರ್, ನಗರ ಪೊಲೀಸ್ ಆಯುಕ್ತರಾದ ಕೆ.ಟಿ ಬಾಲಕೃಷ್ಣ, ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಮೈಸುರು ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.