ಕಾರ್ಮಿಕರ ಫೆಡರೇಷನ್‍ನಿಂದ ಪ್ರತಿಭಟನೆಯ ಎಚ್ಚರಿಕೆ

ಕಾರ್ಮಿಕರ ಫೆಡರೇಷನ್‍ನಿಂದ ಪ್ರತಿಭಟನೆಯ ಎಚ್ಚರಿಕೆ

LK   ¦    Jul 30, 2020 03:44:39 PM (IST)
ಕಾರ್ಮಿಕರ ಫೆಡರೇಷನ್‍ನಿಂದ ಪ್ರತಿಭಟನೆಯ ಎಚ್ಚರಿಕೆ

ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಪ್ಪಿದಲ್ಲಿ ಆಗಸ್ಟ್ 10ರಂದು ಕಾರ್ಮಿಕ ಕಚೇರಿ ಮತ್ತು ಕಲ್ಯಾಣ ಮಂಡಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದಾಗಿ ಎಚ್ಚರಿಕೆ ನೀಡಿದೆ.

 

ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಘೋಷಿಸಿರುವ ಐದು ಸಾವಿರ ಕೋವಿಡ್ ಪರಿಹಾರ ವಿತರಣೆ ಅವಧಿ ವಿಸ್ತರಿಸಬೇಕು ಎಂದು ಕೋರಿ ಹಲವಾರು ಮನವಿಗಳನ್ನು ಜೂನ್ 30ಕ್ಕಿಂತ ಪೂರ್ವದಲ್ಲೇ ನೀಡಿದ್ದರೂ, ಕಲ್ಯಾಣ ಮಂಡಳಿ ಯಾವುದೇ ಕ್ರಮವಹಿಸಲಿಲ್ಲ. ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಸಾರಿಗೆ ಸೌಕರ್ಯ ಇಲ್ಲದಿದ್ದರಿಂದ, ಬ್ಯಾಂಕ್ ಖಾತೆ ಸರಿಪಡಿಸಿ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಇದರಿಂದ ಸಾವಿರಾರು ಗ್ರಾಮೀಣ ಪ್ರದೇಶದ ಕಾರ್ಮಿಕರು ಪರಿಹಾರದಿಂದ ವಂಚಿತರಾಗಿದ್ದಾರೆ. ಹೀಗಾಗಿ ಕನಿಷ್ಟ ಒಂದು ತಿಂಗಳಾದರೂ ಈ ಅವಧಿಯನ್ನು ಮತ್ತೆ ವಿಸ್ತರಿಸಬೇಕು.

 

ಕೋವಿಡ್ ಅವಧಿಯಲ್ಲಿ ಸಾಕಷ್ಟು ಕಾರ್ಮಿಕ ಕುಟುಂಬಗಳಲ್ಲಿ ಮದುವೆಗಳು ಸರಳವಾಗಿಯೇ ನಡೆದಿವೆ. ಇಂತಹ ಸನ್ನಿವೇಶದಲ್ಲಿ ಕೆಲವರ ನವೀಕರಣ ಕೂಡ ಬಾಕಿ ಇದ್ದವು. ಇದಲ್ಲದೆ ಪಿಂಚಣಿಗಾಗಿ ಅರ್ಜಿ ಸಲ್ಲಿಸಬೇಕಾದವರು ಈ ಅವಧಿಯಲ್ಲಿ ಅರ್ಜಿಗಳನ್ನು ಸಲಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮದುವೆ, ಪಿಂಚಣಿ ಹಾಗೂ ವೈದ್ಯಕೀಯ ಸೇರಿ ಅವಶ್ಯಕವಿರುವ ಸೌಲಭ್ಯಗಳಿಗೆ ಅರ್ಜಿ ಹಾಕಲು ಇರುವ ಅವಧಿಯನ್ನು ಕೋವಿಡ್ ಅವಧಿ ಎಂದು ಪರಿಗಣಿಸಿ ವಿಸ್ತರಿಸಬೇಕು ಮತ್ತು ವಿವಿಧ ಸಹಾಯಧನಕ್ಕಾಗಿ ಸಲ್ಲಿಸಿದ ಸಾವಿರಾರು ಅರ್ಜಿಗಳು ವಿವಿಧ ಕಾರ್ಮಿಕ ಕಚೇರಿಗಳಲ್ಲಿ ತಪಾಸಣೆ, ಸಿಬ್ಬಂದಿ ಕೊರತೆಯ ನೆಪದಲ್ಲಿ ತಡೆಹಿಡಿಯಲ್ಪಟ್ಟಿವೆ, ಇವುಗಳನ್ನೆಲ್ಲ ಒಂದು ಪೈಲೆಟ್ ಯೋಜನೆಯಡಿಯಲ್ಲಿ ನಿರ್ದಿಷ್ಟ ಕಾಲಾಮಿತಿಯಲ್ಲಿ ಶೀಘ್ರ ವಿಲೇವಾರಿ ಮಾಡಲು ಕ್ರಮವಹಿಸಬೇಕು.

 

ರಾಜ್ಯಾದ್ಯಂತ ಇರುವ ಸೇವಾಸಿಂಧು ಕೇಂದ್ರಗಳು ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಶುಲ್ಕ ಪಡೆದೇ ಕಾರ್ಮಿಕರನ್ನು ಮನಬಂದಂತೆ ಶೋಷಣೆ ಮಾಡುತ್ತಿದ್ದಾರೆ. ಇಂತಹ ಕೇಂದ್ರಗಳ ವಿರುದ್ಧ ಈ ಹಿಂದೆ ದೂರುಗಳನ್ನು ನೀಡಿದಾಗ ಅಂತಹ ಕೇಂದ್ರಗಳನ್ನು ಬಂದ್ ಮಾಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಕಾರ್ಮಿಕ ಇಲಾಖೆ ಸಿಬ್ಬಂದಿ ಶಾಮೀಲಾಗಿ ಸೇವಾ ಸಿಂಧು ಕೇಂದ್ರಗಳ ಏಜೆಂಟರ ರೀತಿ ಕೆಲಸ ಮಾಡುತ್ತಿದ್ದಾರೆ. ಸೇವಾ ಸಿಂಧು ಕೇಂದ್ರಗಳಿಗೆ ಕಾರ್ಮಿಕರಿಂದ ಸುಲಿಗೆ ಮಾಡುವುದು ಬಿಟ್ಟು ಬೇರೆ ಯಾವ ಸಾಮಾಜಿಕ ಕಳಕಳಿ, ಸೇವಾ ಮನೋಭಾವ ಇರುವುದಿಲ್ಲ. ಹೀಗಾಗಿ ಪುನಃ ನವೀಕರಣಕ್ಕೆ ಕಾರ್ಮಿಕ ಸಂಘಗಳೇ ಅವರಿಗೆ ಸಹಾಯ ಮಾಡಬೇಕು. ಹೀಗಾಗಿ ಕಾರ್ಮಿಕರಿಂದ ಹಣ ಸುಲಿಗೆ ಮಾಡುತ್ತಿರುವ ಅಂತಹ ಕೇಂದ್ರಗಳನ್ನು ಮುಚ್ಚಿಸಲು ಕ್ರಮವಹಿಸಬೇಕು. ಇದಲ್ಲದೆ ರಾಜ್ಯದ ಹತ್ತಾರು ಕಾರ್ಮಿಕ ನಿರೀಕ್ಷರ ಕಚೇರಿ ಜಿಲ್ಲಾ ಕಾರ್ಮಿಕಾಧಿಕಾರಿಗಳ ಕಚೇರಿಗಳಲ್ಲಿ ಸಿಬ್ಬಂದಿ ಸಹಾಯದಿಂದ ನಕಲಿ ಏಜೆಂಟರ ಕಾಟ ಮಿತಿ ಮೀರಿದೆ. ಪ್ರತಿ ಅರ್ಜಿಗೆ ನೂರಾರು ರೂಪಾಯಿಗಳು, ಸೌಲಭ್ಯಗಳ ಅರ್ಜಿಗೆ ಕನಿಷ್ಟ ಒಂದು ಸಾವಿರದಿಂದ ಐದು ಸಾವಿರದವರೆಗೂ ಲಂಚಪಡೆದು ಅರ್ಜಿಗಳನ್ನು ಕೆಲವೇ ದಿನಗಳಲ್ಲಿ ವಿಲೇವಾರಿ ಮಾಡುತ್ತಿರುವ ನೂರಾರು ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.