ಕೊರೋನ ಪರೀಕ್ಷೆಗೆ ನಕಲಿ ಮಾಹಿತಿ ನೀಡಿದರೆ ಎಫ್ ಐಆರ್: ಮೈಸೂರು ಡಿಸಿ ಎಚ್ಚರಿಕೆ 

ಕೊರೋನ ಪರೀಕ್ಷೆಗೆ ನಕಲಿ ಮಾಹಿತಿ ನೀಡಿದರೆ ಎಫ್ ಐಆರ್: ಮೈಸೂರು ಡಿಸಿ ಎಚ್ಚರಿಕೆ 

YK   ¦    Aug 01, 2020 01:10:24 PM (IST)
ಕೊರೋನ ಪರೀಕ್ಷೆಗೆ ನಕಲಿ ಮಾಹಿತಿ ನೀಡಿದರೆ ಎಫ್ ಐಆರ್: ಮೈಸೂರು ಡಿಸಿ ಎಚ್ಚರಿಕೆ 

ಮೈಸೂರು:  ಕೊರೊನಾ ಸೋಂಕು ಹರಡುವಿಕೆಯನ್ನು  ತಡೆಗಟ್ಟಲು  ಜಿಲ್ಲಾಡಳಿತ ಸೋಂಕು ಪತ್ತೆ ಪರೀಕ್ಷೆಗಳನ್ನು  ಹೆಚ್ಚಿಸಿದೆ. ಆದರೆ ಅನೇಕರು  ಕ್ವಾರಂಟೈನ್ ಮತ್ತು  ಆಸ್ಪತ್ರೆಗೆ ದಾಖಲಿಸುತ್ತಾರೆ ಮತ್ತು ಮನೆಗೆ ಪೋಸ್ಟರ್‌ ಹಚ್ಚುತ್ತಾರೆ ಎಂಬ ಕಾರಣದಿಂದ  ಸುಳ್ಳು ವಿಳಾಸ, ಸುಳ್ಳು ಮೊಬೈಲ್‌ ನಂಬರ್‌ ನೀಡುತಿದ್ದಾರೆ ಅಂತಹವರ ವಿರುದ್ದ  ಎಫ್ಐಆರ್ ದಾಖಲಿಸುತ್ತೇವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣ ಹಾಗೂ ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಿವೆ.  ಸುಳ್ಳು ಮಾಹಿತಿ ನೀಡಿ ಕೆಲವರು ಚಿಕಿತ್ಸೆ ಪಡೆಯದೆ ನಾಪತ್ತೆಯಾಗುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲಾಡಳಿತ ತಪ್ಪು ಮಾಹಿತಿ ನೀಡುವವರ ವಿರುದ್ಧ ಎಫ್ಐಆರ್ ದಾಖಲಿಸಲು ಮುಂದಾಗಿದೆ ಎಂದು ತಿಳಿಸಿದರು.   ತಪಾಸಣೆ ವೇಳೆ 30ಕ್ಕೂ ಹೆಚ್ಚಿನ ಸೋಂಕಿತರು ತಪ್ಪು ವಿಳಾಸ ನೀಡಿದ್ದು, ಜಿಲ್ಲಾಡಳಿತದ ಸಂಪರ್ಕಕ್ಕೆ ಸಿಕ್ಕಿಲ್ಲ. ಪರೀಕ್ಷೆ ವರದಿ ಪಾಸಿಟಿವ್ ಬಂದಾಗ ಆರೋಗ್ಯಾಧಿಕಾರಿಗಳು ಕರೆ ಮಾಡಿದರೆ ಬೇರೆ ಯಾರೋ ಕರೆ ಸ್ವೀಕರಿಸುತ್ತಾರೆ ಅಥವಾ ನಂಬರ್ ತಪ್ಪಾಗಿರುತ್ತದೆ. ವಿಳಾಸ ಹುಡುಕಿ ಹೋದರೆ ಅಲ್ಲಿಯೂ ಸೋಂಕಿತರು ಸಿಗುವುದಿಲ್ಲ. ಹೀಗೆ ಆರೋಗ್ಯಾಧಿಕಾರಿಗಳನ್ನು ಕೊರೊನಾ ಟೆಸ್ಟಿಂಗ್ ವೇಳೆ ತಪ್ಪು ಮಾಹಿತಿ ನೀಡಿ ಯಾಮಾರಿಸುತ್ತಿದ್ದಾರೆ ಎಂದರು.

ಸಾಮಾನ್ಯವಾಗಿ ಗಂಟಲು ದ್ರವ ಪರೀಕ್ಷೆಯಲ್ಲಿ ನೀಡುವ ವಿವರವನ್ನು ಸರಿಯಾಗಿ ಪರಿಶೀಲಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಇದನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಪಾಸಿಟಿವ್ ಬಂದರೆ ಏರಿಯಾ ಸೀಲ್‌ಡೌನ್ ಆಗುತ್ತೆ ಅಥವಾ ನಮ್ಮನ್ನು ಯಾವುದೋ ಆಸ್ಪತ್ರೆಗೆ ದಾಖಲಿಸುತ್ತಾರೆ ಎಂಬ ಭಯದಿಂದ ತಪ್ಪು ತಪ್ಪು ವಿಳಾಸ ನೀಡುತ್ತಿದ್ದಾರೆ ಎಂದರು.ಪರೀಕ್ಷೆ ಸಂದರ್ಭದಲ್ಲಿ ಆಧಾರ್, ರೇಷನ್ ಕಾರ್ಡ್ ಕಡ್ಡಾಯ : ಪರೀಕ್ಷೆ ವೇಳೆ ತಪ್ಪು ಮಾಹಿತಿ ನೀಡುತ್ತಿರುವ ಹಿನ್ನೆಲೆ ಇನ್ಮುಂದೆ ಪರೀಕ್ಷೆ ವೇಳೆ ಆಧಾರ್ ಕಾರ್ಡ್ ನಂಬರ್, ಮತದಾರರ ಗುರುತಿನ ಚೀಟಿ ಮತ್ತು ರೇಷನ್ ಕಾರ್ಡ್ ಯಾವುದಾದ್ರೂ ಒಂದು ದಾಖಲೆಯನ್ನು ವ್ಯಕ್ತಿ ನೀಡಲೇಬೇಕು ಎಂಬ ನಿಯಮವನ್ನು ಜಿಲ್ಲಾಡಳಿತ ರೂಪಿಸಿದೆ. ಇದರಿಂದ ತಪ್ಪು ಮಾಹಿತಿ ನೀಡುವುದನ್ನು ತಪ್ಪಿಸಬಹುದು ಜೊತೆಗೆ ಸೋಂಕು ಇತರರಿಗೂ ಹರಡದಂತೆ ತಡೆಗಟ್ಟಬಹುದಾಗಿದೆ.

ಕೊರೊನಾ ಟೆಸ್ಟಿಂಗ್ ವೇಳೆಯಲ್ಲಿ ತಪ್ಪು ವಿಳಾಸ, ನಕಲಿ ನಂಬರ್ ನೀಡಿ ಮತ್ತಷ್ಟು ಸಮಸ್ಯೆ ಸೃಷ್ಟಿಸಿದರೆ ಅಂತಹ ಸೋಂಕಿತರನ್ನು ಹುಡುಕಿ ಎಫ್‌ಐಆರ್ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಮೌಢ್ಯತೆ ತೊರೆದು ಧೈರ್ಯವಾಗಿ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆದುಕೊಂಡರೆ ನಿಮ್ಮ ಮನೆಯವರನ್ನಷ್ಟೆ ಅಲ್ಲ  ಇಡೀ ಬಡಾವಣೆ, ಊರನ್ನೆ ಸೋಂಕಿನಿಂದ  ಪಾರು ಮಾಡಬಹುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ.