ಮೈಸೂರು: ಆಕಸ್ಮಿಕ ಬೆಂಕಿ ತಗುಲಿ ಗೃಹಿಣಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಪತಿಯನ್ನ ಬಂಧಿಸಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಹಿಟ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಿಟ್ನಹಳ್ಳಿ ಗ್ರಾಮದ ನಿವಾಸಿ ಸುನೀತಾ(26) ಎಂಬಾಕೆಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ದುರ್ದೈವಿ. ಈಕೆ ಪಿರಿಯಾಪಟ್ಟಣ ತಾಲೂಕಿನ ನಾರಳಾಪುರ ಗ್ರಾಮದ ಈರಪ್ಪಾಜಿ ಎಂಬುವರ ಪುತ್ರಿಯಾಗಿದ್ದು, ವರ್ಷದ ಹಿಂದೆ ಅಂದರೆ ಮಾ.15, 2020ರಂದು ಸಂಬಂಧಿಕನಾಗಿದ್ದ ಹಿಟ್ನಹಳ್ಳಿ ಗ್ರಾಮದ ಸಂಬಂಧಿಕ ಮಂಜು ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು.
ಕಳೆದ ಕೆಲ ದಿನಗಳ ಹಿಂದೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ ಎಂದು ಹೇಳಿ ಪತ್ನಿ ಸುನೀತಾಳನ್ನು ಪತಿ ಮಂಜು ಪಿರಿಯಾಪಟ್ಟಣ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಿದ್ದರು. ಸಂಪೂರ್ಣ ಸುಟ್ಟ ಗಾಯಗಳಿಂದ ನರಳುತ್ತಿದ್ದ ಸುನೀತಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸುನೀತಾಳ ತಂದೆ ಈರಪ್ಪಾಜಿ ಆಕಸ್ಮಿಕ ಸಾವು ಎಂದು ದೂರು ನೀಡಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಜನ ಕೂಡ ಸುನೀತಾ ಆಕಸ್ಮಿಕವಾಗಿ ಬೆಂಕಿ ತಗುಲಿ ಸಾವನ್ನಪ್ಪಿದ್ದಾಳೆ ಎಂದೇ ನಂಬಿದ್ದರು. ಅದರಂತೆ ಆಕೆಯ ಅಂತ್ಯಕ್ರಿಯೆ ಕೂಡ ನಡೆದು ಹೋಗಿತ್ತು. ಇದಾದ ನಂತರ ಮೃತ ಸುನೀತಾಳ ಸಹೋದರ ಸುನೀಲ್ ಕುಮಾರ್ ನ ಗೆಳೆಯ ಮಣಿಕಂಠ ಎಂಬಾತನಿಗೆ ಸುನೀತಾ ತನಗೆ ಪತಿ ಮಂಜು, ಮಾವ ರಾಜಪ್ಪ ಮತ್ತು ಅತ್ತೆ ಶಿವಮ್ಮ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ. ನಾನು ಸತ್ತರೆ ಅದಕ್ಕೆ ಅವರೇ ಕಾರಣ. ಅವರನ್ನು ಸುಮ್ಮನೆ ಬಿಡಬೇಡಿ ಜೈಲಿಗೆ ಕಳುಹಿಸಿ ಎಂದು ವಾಯ್ಸ್ ಮೆಸೇಜ್ ಕಳಿಸಿದ್ದಳು. ಆದರೆ ಇದನ್ನು ಮಣಿಕಂಠ ನೋಡಿರಲಿಲ್ಲ.
ಮಣಿಕಂಠ ಮೆಸೇಜ್ ನೋಡುವ ವೇಳೆಗೆ ಆಕೆಯ ಅಂತ್ಯಕ್ರಿಯೆ ನಡೆದು ಹೋಗಿತ್ತು. ಆಕೆ ವಾಯ್ಸ್ ಮೆಸೇಜ್ನಲ್ಲಿ ತನಗೆ ಗಂಡನ ಮನೆಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂಬ ವಿಚಾರ ತಿಳಿದ ಸಹೋದರ ಸುನೀಲ್ ಕುಮಾರ್ ಇದೀಗ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ನನ್ನ ಸಹೋದರಿಯ ಸಾವಿಗೆ ವರದಕ್ಷಿಣೆ ಕಿರುಕುಳ ಕಾರಣ ಎಂದು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿರುವ ಎಸ್ ಐ ಸದಾಶಿವ ತಿಪರಡ್ಡಿ ಅವರು ಮೃತ ಸುನೀತಾಳ ಪತಿ ಮಂಜುನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪೊಲೀಸರ ತನಿಖೆಯಿಂದ ನಿಜಾಂಶ ಬಯಲಿಗೆ ಬರಬೇಕಾಗಿದೆ.