ಅಕ್ರಮ ಮೀನುಗಾರಿಕೆಗೆ ತೆರಳುವಾಗಲೇ ಬಂದಿಸಿದ ಅರಣ್ಯಾಧಿಕಾರಿಗಳು

ಅಕ್ರಮ ಮೀನುಗಾರಿಕೆಗೆ ತೆರಳುವಾಗಲೇ ಬಂದಿಸಿದ ಅರಣ್ಯಾಧಿಕಾರಿಗಳು

Apr 01, 2021 12:33:07 PM (IST)
  ಅಕ್ರಮ ಮೀನುಗಾರಿಕೆಗೆ ತೆರಳುವಾಗಲೇ ಬಂದಿಸಿದ ಅರಣ್ಯಾಧಿಕಾರಿಗಳು

ಚಾಮರಾಜನಗರ: ಕಾವೇರಿ ನದಿಯಲ್ಲಿ ಅಕ್ರಮವಾಗಿ ಮೀನುಗಾರಿಕೆಗೆ ತೆರಳುತ್ತಿದ್ದಾಗಲೇ ಬುಧವಾರ 8 ಮಂದಿ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಬಂದಿತರನ್ನು ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಜಾಗೇರಿ ಚಿನ್ನಪ್ಪ(42), ಅಮಲ್ ಅರ್ಪುದ್ ಜಯರಾಜ್(32), ಪೀಟರ್ ಪೇರಿಯನಾಯಗಂ (35), ಸ್ಟ್ಯಾನ್ಯಿ ಜಾನ್ ಬೋಸ್ಕೊ(35), ಅರುಳ್ ರಾಜ್ (35), ಪೆರಿಯನಾಯಗಮ್ಮ(34), ಜ್ಯೋತಿಪ್ರಿಯಾ(28) ಹಾಗೂ ಸುನೀತಾ(28) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕಾವೇರಿ ವನ್ಯಜೀವಿ ವ್ಯಾಪ್ತಿಯ ಅರಣ್ಯದ ಚಿಕ್ಕಲ್ಲೂರು ಬೀಟ್ ಗೆ ಸೇರಿದ ಅರಣ್ಯದ ಎಣ್ಣೆಹೊಳೆಯ ಬಳಿ ಅಕ್ರಮವಾಗಿ ಮೀನು ಹಿಡಿಯಲು ಬಲೆ , ದೋಣಿ ಮುಂತಾದ ಪರಿಕರಗಳೊಂದಿಗೆ ಹೊರಟಿದ್ದರು.

ಈ ಬಗ್ಗೆ ಖಚಿತ ಸುಳಿವು ಪಡೆದ ಕಾವೇರಿ ವನ್ಯಜೀವಿ ಡಿಸಿಎಫ್ ಎಸ್.ರಮೇಶ್ ಹಾಗೂ ಎಸಿಎಫ್ ಅಂಕರಾಜು ಮಾರ್ಗದರ್ಶನದಲ್ಲಿ ಇಲ್ಲಿನ ಅರಣ್ಯಾಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಐದು ಬೋಟ್, ಐದು ಬಲೆ, ಐದು ಹುಟ್ಟು, ಮೀನು ಬೇಟೆಯ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಈ ಮೊದಲಿನಿಂದಲೂ ಅರಣ್ಯ ಇಲಾಖೆಯ ಕಣ್ತಪ್ಪಿಸಿ ನಿಷೇಧಿತ ಪ್ರದೆಶದಲ್ಲಿ ಮೀನು ಹಿಡಿಯುತಿದ್ದರು ಎಂದು ಹೇಳಲಾಗಿದೆ . ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.