ವರದಕ್ಷಿಣೆಗಾಗಿ ಪತ್ನಿಯನ್ನು ಹೊರದಬ್ಬಿದ ಪತಿ: ನ್ಯಾಯಕ್ಕಾಗಿ ಧರಣಿ

ವರದಕ್ಷಿಣೆಗಾಗಿ ಪತ್ನಿಯನ್ನು ಹೊರದಬ್ಬಿದ ಪತಿ: ನ್ಯಾಯಕ್ಕಾಗಿ ಧರಣಿ

Nov 16, 2015 06:13:12 PM (IST)

ಮೈಸೂರು: ವರದಕ್ಷಿಣೆಗಾಗಿ ತನ್ನ ಮನೆಯವರ ಜತೆ ಸೇರಿಕೊಂಡು ಪತಿ ತನ್ನ ಪತ್ನಿಯನ್ನು ಹೊರದಬ್ಬಿದ್ದು, ಗಂಡ ಬೇಕೆಂದು ನ್ಯಾಯಕ್ಕಾಗಿ ಪತ್ನಿ ಗಂಡನ ಮನೆ ಮುಂದೆ ಧರಣಿ ಕುಳಿತಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮಾವ ಪ್ರಸಿದ್ಧ ವಕೀಲ, ಗಂಡ ಕೈತುಂಬ ಸಂಬಳ ತರುವ ಚಾಟೆಂಡ್ ಅಕೌಂಟೆಂಡ್ ಒಳ್ಳೆಯ ಸಂಬಂಧವೆಂದು ಮದುವೆಯಾಗಿ ಒಂದೂವರೆ ವರ್ಷಕ್ಕೆ ವರದಕ್ಷಿಣೆಗಾಗಿ ಉಪನ್ಯಾಸಕಿ ಹೆಂಡತಿಯನ್ನೇ ಬೀದಿಗೆ ಹಾಕಿದ್ದರು. ಮೈಸೂರಿನ ಶಾರದದೇವಿ ನಗರದ ನಿವಾಸಿ ವಕೀಲ ಶ್ರೀಕಂಠೇಗೌಡ ಹಾಗೂ ಅವರ ಪತ್ನಿ ಜತೆ ಸೇರಿಕೊಂಡು ಮಗ ಪುನೀತ್ ತನ್ನ ಪತ್ನಿಯನ್ನೇ ಮನೆಯಿಂದ ಹೊರದಬ್ಬಿ ಬೀಗ ಹಾಕಿಕೊಂಡು ನಾಪತ್ತೆಯಾಗಿರುವವರಾಗಿದ್ದಾರೆ. ಸದ್ಯಕ್ಕೆ ಬೇರೆ ದಾರಿ ಕಾಣದ ದಿವಂಗತ ನಿವೃತ್ತ ಪೊಲೀಸ್ ಅಧಿಕಾರಿ ಚೇತನ್ ಕುಮಾರ್ ಅವರ ಪುತ್ರಿ ರಜನಿ ಗಂಡ ಹಾಗೂ ನ್ಯಾಯಕ್ಕಾಗಿ  ಗಂಡನ ಮನೆಮುಂದೆಯೇ ಧರಣಿ ಕುಳಿತಿರುವ ಮಹಿಳೆಯಾಗಿದ್ದಾಳೆ.

2014 ರ ಮಾರ್ಚ್ ತಿಂಗಳಲ್ಲಿ ರಜನಿ ಹಾಗೂ ಪುನೀತ್ ಇಬ್ಬರಿಗೂ ವಿವಾಹ ನಿಶ್ಚಯವಾಗಿ, ವರನಿಗೆ ಒಂದು ಲಕ್ಷ ನಗದು, 2 ಲಕ್ಷ ರೂ ಮೌಲ್ಯ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಿ  30 ಲಕ್ಷ ರೂ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಯಾದ ಮರುದಿನದಿಂದಲೇ ಮಾವ ವಕೀಲ ಶ್ರೀಕಂಠೇಗೌಡ ಹಾಗೂ ಅತ್ತೆ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು.

ಗಂಡ ಪುನೀತ್ ತಂದೆ ತಾಯಿಯ ಮಾತುಕೇಳಿ ಪತ್ನಿ ರಜನಿಗೆ ಹಣಕ್ಕಾಗಿ ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸುತ್ತಿದ್ದ ಎನ್ನಲಾಗಿದೆ. ಎಲ್ಲವನ್ನು ಸಹಿಸಿಕೊಂಡಿದ್ದ ರಜನಿ ದೀಪಾವಳಿಗೆ ತವರು ಮನೆಗೆ ಹೋಗಿ ವಾಪಾಸ್ ಬಂದಿದ್ದಾಳೆ. ಆದರೆ ವರದಕ್ಷಿಣೆ ಹಣ ತರುವ ತನಕ ಮನೆಗೆ ಸೇರಿಸಿಕೊಳ್ಳುವುದಿಲ್ಲವೆಂದು ತಗಾದೆ ತೆಗೆದಿರುವ ಅತ್ತೆ, ಗಂಡ, ಮಾವ  ರಜನಿಯ ಬಟ್ಟೆ, ಬ್ಯಾಗ್ ಎಲ್ಲವನ್ನೂ ಬಿಸಾಡಿ ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ  ಗಂಡ ಅತ್ತೆ, ಮಾವನ ಕಿರುಕುಳದ ಬಗ್ಗೆ ಮಹಿಳಾ ಠಾಣೆ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ಗಂಡನ ಆಶ್ರಯ ಸಿಕ್ಕಿ ನನಗೆ ನ್ಯಾಯ ಸಿಗುವವರೆಗೂ ಗಂಡನ ಮನೆ ಬಾಗಿಲಲ್ಲೇ ವಾಸಿಸುವ ಮೂಲಕ ಧರಣಿ ನಡೆಸುತ್ತಿದ್ದಾಳೆ. ವಿಷಯ ತಿಳಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ನಿರ್ದೇಶನದ ಮೇರೆಗೆ ಸ್ಥಳಕ್ಕೆ ಧಾವಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

ಮಾವ ದೌರ್ಜನ್ಯಗಳ ವಿರುದ್ಧ ದನಿ ಎತ್ತುವ ವಕೀಲರಾಗಿದ್ದು, ಗಂಡ ಚಾರ್ಟರ್ಡ್ ಅಕೌಂಟೆಂಟ್ ಆಗಿ ಎಂಟೆಕ್ ಮುಗಿಸಿ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಪತ್ನಿಗೆ ವರದಕ್ಷಿಣೆಯ ಕಿರುಕುಳ ನೀಡುತ್ತಿರುವುದು ವಿದ್ಯಾವಂತರೆನಿಸಿಕೊಂಡವರೇ ಹಣ ದಾಹಕ್ಕಾಗಿ ಎಂತಹ ಕ್ರೂರ ಮಟ್ಟಕ್ಕೆ ಇಳಿಯುತ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

More Images