ಪ್ರಿಯಕರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

ಪ್ರಿಯಕರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

LK   ¦    Feb 13, 2020 08:16:58 PM (IST)
ಪ್ರಿಯಕರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

ಮೈಸೂರು: ತನ್ನ ಪ್ರಿಯಕರನ ಕಿರುಕುಳಕ್ಕೆ ಬೇಸತ್ತ ಪ್ರಿಯತಮೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಲ್ಲಹಳ್ಳಿ ಗ್ರಾಮದ ಮಹದೇವಯ್ಯ ಎಂಬವರ ಪುತ್ರಿ ಮೇಘನಾ(20) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಅದೇ ಗ್ರಾಮದ ಯುವಕ ಮಣಿಕಂಠ ಎಂಬಾತನೇ ಕಿರುಕುಳ ನೀಡಿದ ನೀಡಿದವನು ಎಂದು ಆರೋಪಿಸಲಾಗಿದೆ.

ಇವರಿಬ್ಬರು ಕೆಲವು ದಿನಗಳಿಂದ ಪ್ರೀತಿಸುತ್ತಿದ್ದರು. ಆದರೆ ಅನ್ಯ ಜಾತಿಯಾಗಿದ್ದರಿಂದ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಪೋಷಕರು ಇಬ್ಬರಿಗೂ ಬುದ್ದಿವಾದ ಹೇಳಿದ್ದರು. ಜತೆಗೆ ಮೇಘನಾ ಪೋಷಕರು ತಕ್ಷಣ ಆಕೆಯ ಒಪ್ಪಿಗೆ ಪಡೆದು ಮತ್ತೊಬ್ಬ ಗುಂಡ್ಲುಪೇಟೆ ಮೂಲದ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿ ಮದುವೆಗೆ ದಿನಾಂಕ ನಿಗದಿಗೊಳಿಸಿದ್ದರು.

ಇತ್ತ ಪ್ರಿಯಕರ ಮಣಿಕಂಠ ಮಾತ್ರ ಸುಮ್ಮನಿರದೆ ಮೇಘನಾಳ ಭೇಟಿ ಮಾಡಿ, ನೀನು ನನ್ನೊಂದಿಗೆ ಸಹಕರಿಸಬೇಕು ಇಲ್ಲದೆ ಹೋದರೆ ನಮ್ಮಿಬ್ಬರ ಲವ್ ಬಗ್ಗೆ ನಿನ್ನ ಮದುವೆಯಾಗುವ ಯುವಕನಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದನಲ್ಲದೆ,  ದೈಹಿಕ ಸಂಬಂಧಕ್ಕೆ ಒಪ್ಪದಿದ್ದರೆ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳನ್ನು ವಾಟ್ಸಾಪ್ ಗೆ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಹೆದರಿಸಿದ್ದು, ಇದರಿಂದ ಹೆದರಿದ ಮೇಘನಾ ತನ್ನ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಸಂಬಂಧ ಮಣಿಕಂಠನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೊಡ್ಡಕವಲಂದೆ ಪೊಲೀಸ್ ಠಾಣೆಯಲ್ಲಿ ಮೇಘನಾಳ ತಂದೆ ಮಹದೇವಯ್ಯ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ದೊಡ್ಡಕವಲಂದೆ ಠಾಣೆಯ ಪಿಎಸ್‍ಐ ಅಮೆಜಾನ್ ಅವರು ಮಣಿಕಂಠನ ಪತ್ತೆಗಾಗಿ ಬಲೆ ಬೀಸಿದ್ದಾರೆ.