ಜಗದ್ವಿಖ್ಯಾತ ಮೈಸೂರು ಮೃಗಾಲಯ ಪುನಾರಂಭಕ್ಕೆ ಕ್ಷಣಗಣನೆ

ಜಗದ್ವಿಖ್ಯಾತ ಮೈಸೂರು ಮೃಗಾಲಯ ಪುನಾರಂಭಕ್ಕೆ ಕ್ಷಣಗಣನೆ

CI   ¦    May 21, 2020 06:18:38 PM (IST)
 ಜಗದ್ವಿಖ್ಯಾತ ಮೈಸೂರು ಮೃಗಾಲಯ ಪುನಾರಂಭಕ್ಕೆ ಕ್ಷಣಗಣನೆ

ಮೈಸೂರು: ಪ್ರವಾಸೀ ನಗರಿ ಮೈಸೂರಿನ ನೆಚ್ಚಿನ ಆಕರ್ಷಣೆಯಾದ ಚಾಮರಾಜ ಮೃಗಾಲಯವನ್ನು ದೇಶದಾದ್ಯಂತ ಲಾಕ್‌ ಡೌನ್‌ ಘೋಷಣೆಯಾದ ದಿನದಿಂದ ಇಂದಿನವರೆಗೂ ಮುಚ್ಚಲಾಗಿದೆ. ಈ ರೀತಿ ಮುಚ್ಚಿರುವುದರಿಂದ ಮೃಗಾಲಯದ ನಿರ್ವಹಣೆಗೂ ಆರ್ಥಿಕ ಸಂಕಷ್ಟ ಎದುರಾಗಿದೆ. ನೂರೈವತ್ತು ಎಕರೆಗಳಷ್ಟು ವಿಶಾಲವಾಗಿರುವ ಈ ಮೃಗಾಲಯ ೧೩೦೦ ವಿವಿಧ ದೇಶ ವಿದೇಶಗಳ ಪ್ರಾಣಿ ಪಕ್ಷಿಗಳ ಆಶ್ರಯತಾಣವಾಗಿದೆ. ಈ ಮೃಗಾಲಯದ ಸಿಬ್ಬಂದಿ ಮತ್ತು ಪ್ರಾಣಿಗಳ ನಿರ್ವಹಣೆಗೆಂದೆ ತಿಂಗಳಿಗೆ ೨ ಕೋಟಿ ರೂಪಾಯಿಗಳಷ್ಟು ವೆಚ್ಚವಾಗುತ್ತಿದೆ. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಪ್ರಾಣಿಗಳನ್ನು ದತ್ತು ಪಡೆಯಲೂ ಅಸಕ್ತರು ಬರುತ್ತಿಲ್ಲ. 

ಮೃಗಾಲಯ ನಿರ್ವಹಣಾ ವೆಚ್ಚಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಮಾಡಿಕೊಂಡ ಮನವಿಯ ಮೇರೆಗೆ ಅವರ ಸ್ನೇಹಿತರು ಮತ್ತು ದಾನಿಗಳಿಂದ ೨ .೩೨ ಕೋಟಿ ರೂಪಾಯಿಗಳಷ್ಟು ಹಣ ಬಂದಿದೆ. ಜತೆಗೇ ಇನ್ಫೋಸಿಸ್‌ ನ ಸುಧಾ ಮೂರ್ತಿ ಅವರೂ ೨೦ ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಅದರೆ ಮೃಗಾಲಯದ ಪ್ರವೇಶ ಶುಲ್ಕ ದ ಆದಾಯವೇ ಇಲ್ಲದಿರುವ ಹಿನ್ನೆಲೆಯಲ್ಲಿ ಮೃಗಾಲಯವನ್ನು ಹೆಚ್ಚು ದಿನ ಮುಚ್ಚುವುದೂ ಸಾಧ್ಯವಿಲ್ಲ. ಮೃಗಾಲಯಕ್ಕೆ ಪ್ರತಿನಿತ್ಯ ೮ ರಿಂದ ೧೦ ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ. ಇವರಿಂದ ಬರುವ ಪ್ರವೇಶ ಶುಲ್ಕವೇ ನಿತ್ಯ ೭-೮ ಲಕ್ಷ ರೂಪಾಯಿ ಆಗುತಿತ್ತು. ೨೦೦೨ ರಿಂದಲೂ ಮೃಗಾಲಯವು ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ಈವರೆಗೆ ತಾನೇ ನಿರ್ವಹಣೆ ಮಾಡಿಕೊಂಡು ಬಂದಿದೆ.

ರಾಜ್ಯ ಮೃಗಾಲಯ ನಿರ್ವಹಣಾ ಪ್ರಾಧಿಕಾರ ಮೃಗಾಲಯಗಳಿಗೆ ಸಾರ್ವಜನಿಕರಿಗೆ ಪ್ರವೇಶ ನೀಡುವ ಕುರಿತು ಚಿಂತನೆ ನಡೆಸಿದ್ದು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಮೃಗಾಲಯದಲ್ಲಿ ಟಿಕೆಟ್ ತಗೊಳ್ಳುವ ವೇಳೆ, ಒಳಗೆ ಸಾಗುವ ವೇಳೆ ಯಾವ ರೀತಿ ಇರಬೇಕೆಂದು ತಿಳಿಸಿದೆ. ಮೃಗಾಲಯದೊಳಗೆ ಪ್ರವೇಶಿಸುವವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗತ್ತೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೆಮ್ಮು, ಜ್ವರ, ಶೀತದ ಲಕ್ಷಣ ಇರುವವರಿಗೆ ಮೃಗಾಲಯದೊಳಕ್ಕೆ ಪ್ರವೇಶವಿಲ್ಲ. 65ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಮೃಗಾಲಯದೊಳಗೆ ಪ್ರವೇಶ ನಿರಾಕರಣೆ, ಫೇಸ್ ಮಾಸ್ಕ್ ಕಡ್ಡಾಯ, ಮೆಡಿಕೇಟೆಡ್ ಫೂಟ್ ಮ್ಯಾಟ್ ಮೂಲಕವೇ ಹಾದು ಹೋಗಬೇಕು. ದೇಹದ ತಾಪಮಾನ ಕೂಡ ಪರೀಕ್ಷಿಸಲಾಗುತ್ತದೆ. 10 ಅಡಿ ಅಂತರ ಕಾಯ್ದುಕೊಳ್ಳಲೇ ಬೇಕು. ಬ್ಯಾರಿಕೇಡ್ ಕೂಡ ಅಳವಡಿಸಲಾಗುತ್ತಿದೆ.


ಯಾವುದೇ ವಸ್ತುಗಳನ್ನು ತಮ್ಮ ಜೊತೆ ಒಯ್ಯುವಂತಿಲ್ಲ, ಲಾಕರ್ ರೂಮ್ ನಲ್ಲಿಯೇ ಇಟ್ಟು ಒಳಗೆ ಹೋಗಬೇಕು. ಮೃಗಾಲಯದ ಆವರಣದಲ್ಲಿ ಎಲ್ಲಿಯೂ ಉಗುಳಬಾರದು. ಪಾನ್ ಮಸಾಲಾ, ಗುಟ್ಕಾಗಳನ್ನು ಆವರಣದೊಳಗೆ ಸೇವಿಸಿ ಉಗುಳಬಾರದು. ಸಂದರ್ಶಕರ ಮೇಲೆ ಸಿಸಿ ಕ್ಯಾಮರಾ ಕಣ್ಗಾವಲಿರಲಿದ್ದು ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾರಾ ಇಲ್ಲವಾ ಎಂದು ವೀಕ್ಷಿಸಲಾಗುವುದು. ಉಲ್ಲಂಘಿಸುವವರಿಗೆ ತಲಾ 1000ರೂ.ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.ಮೃಗಾಲಯದ ಸಿಬ್ಬಂದಿ ಕೂಡ ನೈರ್ಮಲ್ಯವನ್ನು ಕಾಪಾಡಬೇಕು. ನೀಡಿದ ಸಮಯೋಚಿತ ನಿರ್ದೇಶಗಳನ್ನು ಪಾಲಿಸಬೇಕು ಎಂದಿದೆ.


ಜ್ವರ ಶೀತ ಕೆಮ್ಮು ಇದರಿಂದ ಬಳಲುತ್ತಿರುವ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತಿಲ್ಲ, ಮೇಲಧಿಕಾರಿಗಳಿಗೆ ತಿಳಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಫೇಸ್ ಮಾಸ್ಕ್ ಕಡ್ಡಾಯ. ಕೈಗಳನ್ನು ಸ್ಯಾನಿಟೈಸರ್ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.

ಈ ಕುರಿತು ಮಾತನಾಡಿದ ಮೃಗಾಲಯದ ನಿರ್ದೇಶಕ ಅಜಿತ್‌ ಕುಲಕರ್ಣಿ ಅವರು ಮೃಗಾಲಯ ಪ್ರಾಧಿಕಾರವು ಮೃಗಾಲಯವನ್ನು ಸಾರ್ವಜನಿಕರಿಗೆ ತೆರೆಯುವುದಕ್ಕೆ ಎಲ್ಲ ಸಿದ್ದತೆ ಮಾಡಿಕೊಂಡಿದೆಯೇ , ಸಿಬ್ಬಂದಿಗಳು ತಯಾರಿದ್ದರೆಯೇ ಎಂದು ಕೇಳಿತ್ತು. ನಾವು ರೆಡಿ ಇದ್ದೇವೆ ಅಂತ ಉತ್ತರಿಸಿದ್ದೇವೆ. ಪ್ರಾಧಿಕಾರವು ಸೂಚನೆ ನೀಡಿದ ದಿನದಿಂದಲೇ ತೆರೆಯಲಾಗುವುದು ಎಂದರು.