ಮೈಸೂರು ನಗರದಲ್ಲಿ ಶ್ರೀಗಂಧ ಕಳ್ಳರ ಬಂಧನ

ಮೈಸೂರು ನಗರದಲ್ಲಿ ಶ್ರೀಗಂಧ ಕಳ್ಳರ ಬಂಧನ

LK   ¦    Jan 19, 2021 08:11:59 AM (IST)
ಮೈಸೂರು ನಗರದಲ್ಲಿ ಶ್ರೀಗಂಧ ಕಳ್ಳರ ಬಂಧನ

ಮೈಸೂರು: ನಗರದ ವಿವಿಧೆಡೆ ಬೆಳೆದ ಶ್ರೀಗಂಧದ ಮರಗಳನ್ನು ಸಮಯ ಸಾಧಿಸಿ ಕಳವು ಮಾಡುತ್ತಿದ್ದ ನಾಲ್ವರು ಕಳ್ಳರನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ ಮೂವತ್ತೈದು ಲಕ್ಷ ಮೌಲ್ಯದ ಶ್ರೀಗಂಧ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಹತ್ಯಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ತಾಲೂಕು ಇಲವಾಲ ಹೋಬಳಿಯ ಕಮ್ರಳ್ಳಿ ಗ್ರಾಮದ ರಘು(46), ಮಂಜುನಾಥ್ ಅಲಿಯಾಸ್ ಮಂಜು(22), ಮೈಸೂರು ನಗರದ ಲಷ್ಕರ್ ಮೊಹಲ್ಲದ ಮಕ್ಬುಲ್ ಷರೀಫ್(58) ಮತ್ತು  ಕಲ್ಯಾಣಗಿರಿಯ ಸೈಯ್ಯದ್ ಗೌಸ್ ಮೊಹಿದ್ದೀನ್(50) ಬಂಧಿತರು.

ಈ ಕಳ್ಳರ ಪೈಕಿ ರಘು ಮತ್ತು ಮಂಜು ಎಂಬಿಬ್ಬರು ಜ.8ರಂದು ರಾತ್ರಿ ನಗರದ ಬೆಲವತ್ತ ರಿಂಗ್ ರಸ್ತೆಯ ಪಕ್ಕದಲ್ಲಿರುವ ಭಾರತೀಯ ನೋಟು ಮುದ್ರಣ ಘಟಕದ ಕಾಂಪೌಂಡ್ ಒಳಗೆ ನುಸುಳಿ  ಅಲ್ಲಿರುವ ಕಾಡಿನೊಳಗೆ ಬೆಳೆದಿದ್ದ ಶ್ರೀಗಂಧದ ಮರವನ್ನು ಕಡಿದು ಅದನ್ನು ಮತ್ತೊಬ್ಬ ಆರೋಪಿ ಮಕ್ಬುಲ್ ಷರೀಫ್ ಎಂಬಾತನಿಗೆ ಮಾರಾಟ ಮಾಡಿದ್ದರು. ಆ ನಂತರ ಮತ್ತೆ ಜ.13ರಂದು ನುಗ್ಗಿ  ಮರವನ್ನು ಕಡಿಯುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಕಳ್ಳರಾದ ರಘು ಮತ್ತು ಮಂಜು ಸಿಕ್ಕಿ ಬಿದ್ದಿದ್ದರು. ಅವರಿಂದ ಗಂಧದ ಮರ ಮತ್ತು ಮರವನ್ನು ಕಡಿಯಲು ಬಳಸಿದ್ದ ಮಚ್ಚು, ಕೊಡಲಿ, ಗರಗಸ ಹಾಗೂ ಬೈಕ್‍ನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿತ್ತು.

ಇವರು ನೀಡಿದ ಸುಳಿವಿನ ಮೇರೆಗೆ ಶ್ರೀಗಂಧವನ್ನು ಖರೀದಿಸುತ್ತಿದ್ದ ಮಕ್ಬುಲ್ ಷರೀಫ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತ ಹಲವು ವರ್ಷಗಳಿಂದ ಶ್ರೀಗಂಧವನ್ನು ಅಕ್ರಮವಾಗಿ ಖರೀದಿಸುವ ಕೆಲಸ ಮಾಡಿಕೊಂಡಿದ್ದನಲ್ಲದೆ, ಶ್ರೀಗಂಧ ಮರವನ್ನು ಕಡಿಯಲು ಬೇಕಾದ ಹತ್ಯಾರುಗಳಾದ ಮಚ್ಚು, ಗರಗಸ, ಟಾರ್ಚ್‍ಗಳನ್ನು ಒದಗಿಸುತ್ತಿದ್ದನು ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ಆತ  ಕಳ್ಳರಾದ ರಘು ಹಾಗೂ ಮಂಜು ನಿಂದ ಅಕ್ರಮವಾಗಿ ಖರೀದಿಸಿದ್ದ 33.5 ಕೆ.ಜಿ ಶ್ರೀಗಂಧ, 3 ಮಚ್ಚುಗಳು, 1 ಕೊಡಲಿ, 3 ಗರಗಸ ಹಾಗೂ 2 ಟಾರ್ಚ್‍ಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ. ಆತನ ವಿಚಾರಣೆಗೊಳಪಡಿಸಿದಾಗ ಆತ  ಸೈಯ್ಯದ್ ಗೌಸ್ ಎಂಬಾತನಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಆತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ 190 ಕೆ.ಜಿ ಶ್ರೀಗಂಧದ ತುಂಡುಗಳು, ತೂಕದ ಯಂತ್ರ ಸಿಕ್ಕಿದೆ.

ಇನ್ನು ಸೈಯದ್ ಗೌಸ್ ಮೊಹಿದ್ದೀನ್ ಹಲವು ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದು, ಈತನ ವಿರುದ್ದ ಕಳ್ಳತನ ಮಾಡಿದ್ದ ಗಂಧದ ಮಾಲನ್ನು ಸ್ವೀಕರಿಸಿದ್ದಕ್ಕಾಗಿ ವಿರಾಜಪೇಟೆ ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ 2019ನೇ ಸಾಲಿನಲ್ಲಿ ಪ್ರಕರಣ ದಾಖಲಾಗ್ದಿ 2020ನೇ ಸಾಲಿನಲ್ಲಿ 84 ದಿನಗಳ ಕಾಲ ಮಡಿಕೇರಿ ಕೇಂದ್ರ ಕಾರಾಗೃಹದಲ್ಲಿದ್ದು ಹೊರ ಬಂದಿದ್ದರೂ ಅದೇ ಕೃತ್ಯವನ್ನು ಮುಂದುವರೆಸಿದ್ದನು. ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೈಸೂರು ನಗರದ  ಡಿ.ಸಿ.ಪಿ ಗೀತಪ್ರಸನ್ನ, ಎ.ಸಿ.ಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೇಟಗಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಎ. ಮಲ್ಲೇಶ್, ಪಿ.ಎಸ್.ಐ ವಿಶ್ವನಾಥ್. ಮತ್ತು ನಾಗರಾಜ್ ನಾಯಕ್, ಸಿಬ್ಬಂದಿ ಪೊನ್ನಪ್ಪ. ಮಧುಕುಮಾರ್. ಹೆಚ್.ಪಿ. ದಿವಾಕರ್. ಕೃಷ್ಣ. ಹೆಚ್.ಬಿ.ರಾಜೇಶ್. ಹೆಚ್.ವಿ, ಪ್ರಶಾಂತ್‍ಕುಮಾರ್, ಸಿ. ಬಸವರಾಜು, ಶ್ರೀ ಶೈಲ ಹುಗ್ಗಿ, ಲಿಖಿತ್ ಆರ್. ಚೇತನ್. ಆಶಾ, ಪ್ರಕಾಶ್. ಜಿ. ಚಂದ್ರಕಾಂತ್ ತಳವಾರ್, ಮಣಿ ಮತ್ತು ಎ.ಸಿ.ಪಿ ನರಸಿಂಹರಾಜ ವಿಭಾಗದ ವಿಶೇಷ ತಂಡದ ಸಿಬ್ಬಂದಿ  ಅನಿಲ್ ಶಂಕಪಾಲ್, ಲಿಂಗರಾಜಪ್ಪ, ರಮೇಶ್, ಸುರೇಶ್, ಕಾಂತರಾಜು, ಜೀವನ್, ಹನುಮಂತ ಕಲ್ಲೇದ್, ಗೌರಿಶಂಕರ್ ಭಾಗವಹಿಸಿದ್ದರು.