ಮೈಸೂರಿನಲ್ಲಿ ಕೊರೋನಾ ಸೋಂಕಿತ 10 ಮಂದಿ ಗುಣಮುಖ

ಮೈಸೂರಿನಲ್ಲಿ ಕೊರೋನಾ ಸೋಂಕಿತ 10 ಮಂದಿ ಗುಣಮುಖ

LK   ¦    Jun 25, 2020 02:46:54 PM (IST)
ಮೈಸೂರಿನಲ್ಲಿ ಕೊರೋನಾ ಸೋಂಕಿತ 10 ಮಂದಿ ಗುಣಮುಖ

ಮೈಸೂರು: ಮೈಸೂರಿನಲ್ಲಿ ಬುಧವಾರ 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 10 ಮಂದಿ ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಬುಧವಾರ 7 ಮಂದಿಗೆ ಪಾಸಿಟಿವ್ ಆಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 198ಕ್ಕೆ ಏರಿಕೆಯಾಗಿದೆ. ಇನ್ನು 10 ಮಂದಿ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 76ಕ್ಕೆ ಇಳಿಕೆಯಾಗಿದೆ. ಈವರೆಗೆ 122 ಮಂದಿ ಸೋಂಕಿತರು ಗುಣಮುಖವಾಗಿದ್ದಾರೆ. ಹೊಸ ಪ್ರಕರಣಗಳಿಂದಾಗಿ ಹೆಬ್ಬಾಳು ಮೊದಲನೇ ಹಂತ, ದೇವರಾಜ ಮೊಹಲ್ಲಾದ ಬಿ.ಕೆ.ಸ್ಟ್ರೀಟ್, ದಟ್ಟಗಳ್ಳಿಯ 3ನೇ ಹಂತ, 11ನೇ ಮೇನ್ ಸೀಲ್‍ಡೌನ್ ಮಾಡಲಾಗಿದೆ.

ಬುಧವಾರ ಪಾಸಿಟಿವ್ ಆದ ಪ್ರಕರಣಗಳಲ್ಲಿ 19 ವರ್ಷದ ಬಾಲಕ, 30 ವರ್ಷದ ಪುರುಷ, 39 ವರ್ಷದ ಮಹಿಳೆ ತಮಿಳುನಾಡಿನಿಂದ ಹಿಂದಿರುಗಿದ್ದರೆ, 23 ವರ್ಷದ ಯುವಕ ರಾಜಸ್ಥಾನದಿಂದ, 23 ವರ್ಷದ ಯುವಕ ಆಂಧ್ರಪ್ರದೇಶದಿಂದ ಮೈಸೂರಿಗೆ ವಾಪಸ್ಸಾದವರಾಗಿದ್ದಾರೆ. ಬೆಂಗಳೂರಿಗೆ ಕರ್ತವ್ಯದ ಮೇಲೆ ತೆರಳಿದ್ದ 50 ವರ್ಷದ ಕೆಎಸ್‍ಆರ್‍ಪಿ ಸಿಬ್ಬಂದಿಗೂ ಸೋಂಕು ತಗುಲಿದೆ. ಪಿ 9569 ಪ್ರಾಥಮಿಕ ಸಂಪರ್ಕದಲ್ಲಿದ್ದ 9 ವರ್ಷದ ಬಾಲಕಿಗೂ ಪಾಸಿಟಿವ್ ಆಗಿದೆ. 7ರಲ್ಲಿ ಮೂವರು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದರೆ ನಾಲ್ವರು ಹೋಂ ಕ್ವಾರಂಟೈನಲ್ಲಿದ್ದರು. ಇದಲ್ಲದೆ ಸೋಂಕು ತಗುಲಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ 5920, ಪಿ 6279, ಪಿ 7282, ಪಿ 7284, ಪಿ 7284, ಪಿ 7285, ಪಿ 8015, ಪಿ 8018, ಪಿ 8488 ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 9970 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, 8191 ಮಂದಿ 14 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. 1418 ಮಂದಿ ಹೋಂ ಕ್ವಾರಂಟೈನ್‍ನಲ್ಲಿದ್ದರೆ, 285 ಮಂದಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ. ಈವರೆಗೆ 17669 ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಿದ್ದು, 17471 ನೆಗೆಟಿವ್ ಬಂದಿದೆ. 198 ಪಾಸಿಟಿವ್ ಆಗಿದೆ. ಇದರಲ್ಲಿ 122 ಮಂದಿ ಗುಣಮುಖವಾಗಿದ್ದು, 76 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.