ಇನ್ಮುಂದೆ ಮಂಗಳವಾರವೂ ಮೃಗಾಲಯಕ್ಕೆ ಪ್ರವೇಶ

ಇನ್ಮುಂದೆ ಮಂಗಳವಾರವೂ ಮೃಗಾಲಯಕ್ಕೆ ಪ್ರವೇಶ

LK   ¦    Jun 29, 2020 07:35:28 PM (IST)
ಇನ್ಮುಂದೆ ಮಂಗಳವಾರವೂ ಮೃಗಾಲಯಕ್ಕೆ ಪ್ರವೇಶ

ಮೈಸೂರು: ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನಕ್ಕೆ ಇದುವರೆಗೆ ಪ್ರತಿ ಮಂಗಳವಾರ ವಾರದ ರಜೆಯಾಗಿತ್ತಾದರೂ  ಕೋವಿಡ್-19 ವೈರಾಣು ತಡೆಗಟ್ಟುವ ಹಿನ್ನೆಲೆಯಲ್ಲಿ  ಜುಲೈ 5 ರಿಂದ ಮುಂದಿನ ನಾಲ್ಕು ಭಾನುವಾರಗಳಂದು ಸಂಪೂರ್ಣ ಲಾಕ್‍ಡೌನ್ ಮಾಡಲು ಸರ್ಕಾರ ಆದೇಶ ಹೊರಡಿಸಿರುವುದರಿಂದ ಭಾನುವಾರ ರಜೆ ಘೋಷಿಸಲಾಗಿರುವುದರಿಂದ ಮಂಗಳವಾರದಂದು ವೀಕ್ಷಣೆಗೆ ತೆರೆಯಲಾಗುವುದು ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜಿತ್‍ಕುಲಕರ್ಣಿ ತಿಳಿಸಿದ್ದಾರೆ.

ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನ್ನು ಜೂನ್ 30 ರಂದು ವೀಕ್ಷಣೆಗೆ ತೆರೆಯಲಾಗುವುದು ಹಾಗೂ ಜುಲೈ 5 ಭಾನುವಾರದಂದು ವೀಕ್ಷಣೆಗೆ ನಿರ್ಬಂಧಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇನ್ನೊಂದೆಡೆ ಕೋವಿಡ್-19 ಹಿನ್ನೆಲೆ ಲಾಕ್‍ಡೌನ್‍ನಿಂದಾಗಿ ಮೃಗಾಲಯ ಹಾಗೂ ಪ್ರಾಣಿಗಳ ಆಹಾರ ನಿರ್ವಹಣೆಗೆ ತೊಂದರೆಯುಂಟಾದ ಹಿನ್ನೆಲೆಯಲ್ಲಿ ಹಲವಾರು ಗಣ್ಯರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಮೃಗಾಲಯದ ಪ್ರಾಣಿಗಳನ್ನು ದತ್ತು ಸ್ವೀಕರಿಸುವ ಮೂಲಕ ಮೃಗಾಲಯಕ್ಕೆ ಸಾಕಷ್ಟು ನೆರವು ನೀಡುತ್ತಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈ.ಲಿ. ನವರು 10 ಲಕ್ಷ ರೂ. ಪಾವತಿಸಿ ಮೃಗಾಲಯದ ಎರಡು ಭಾರತೀಯ ಆನೆಗಳು, ಒಂದು ಭಾರತೀಯ ಸಿಂಹ, ಒಂದು ಹುಲಿ, ಎರಡು ಜಿರಾಫೆಗಳು, ಎರಡು ಝೀಬ್ರಾಗಳು, ಒಂದು ಚಿಂಪಾಂಜಿ ಮತ್ತು ಒಂದು ಬಿಳಿ ಘೇಂಡಾಮೃಗಗಳನ್ನು ಜುಲೈ 9, 2020 ರಿಂದ 2021ರ ಜುಲೈ 8 ರವರೆಗೆ ಒಂದು ವರ್ಷದ ಅವಧಿಗೆ ದತ್ತು ತೆಗೆದುಕೊಂಡಿದ್ದಾರೆ.

ಅಲ್ಲದೆ ಒಂದು ವರ್ಷದ ಅವಧಿಗೆ ಬೆಂಗಳೂರಿನ ಪೂರ್ಣಿಮಾ. ಎಂಬುವರು 5 ಸಾವಿರ ರೂ. ಪಾವತಿಸಿ ಮ್ಯಾಂಡರಿನ್‍ಡಕ್, ನಕ್ಷತ್ರ ಆಮೆ ಮತ್ತು ಸಾಮಾನ್ಯ ಹಾವು,  ಸುಜಿತ್‍ರಘುರಾವ್ ಎಂಬುವರು 7,500 ರೂ. ಪಾವತಿಸಿ ಚುಕ್ಕೆ ಜಿಂಕೆ(ಹೆಣ್ಣು), ಬೋರೆಗೌಡ ಎಂಬುವರು 3,500 ರೂ. ಪಾವತಿಸಿ ಬಿಳಿ ನವಿಲನ್ನು ದತ್ತು ಪಡೆದಿದ್ದಾರೆ.