ಮೇಷ್ಟ್ರ ವರ್ಗಾವಣೆಗೆ ವಿರೋಧ: ವಿದ್ಯಾರ್ಥಿಗಳಿಂದ ಪೀಠೋಪಕರಣ ಧ್ವಂಸ

ಮೇಷ್ಟ್ರ ವರ್ಗಾವಣೆಗೆ ವಿರೋಧ: ವಿದ್ಯಾರ್ಥಿಗಳಿಂದ ಪೀಠೋಪಕರಣ ಧ್ವಂಸ

LK   ¦    Dec 01, 2019 05:28:19 PM (IST)
ಮೇಷ್ಟ್ರ ವರ್ಗಾವಣೆಗೆ ವಿರೋಧ: ವಿದ್ಯಾರ್ಥಿಗಳಿಂದ ಪೀಠೋಪಕರಣ ಧ್ವಂಸ

ಚಾಮರಾಜನಗರ: ನೆಚ್ಚಿನ ಮೇಷ್ಟು ದಿಢೀರ್ ವರ್ಗಾವಣೆ ಆಗಿರುವುದನ್ನು ತಿಳಿದ ಶಾಲಾ ಮಕ್ಕಳು ರೋಧಿಸಿ, ಪ್ರತಿಭಟನೆ ನಡೆಸಿದ್ದಲ್ಲದೆ ಶಾಲಾ ಪೀಠೋಪಕರಣ ಧ್ವಂಸ ಮಾಡಿದ ಘಟನೆ ಜಿಲ್ಲೆಯ ಹನೂರು ತಾಲೂಕಿನ ಮೀಣ್ಯಂನಲ್ಲಿ ನಡೆದಿದ್ದು ಈ ವೀಡಿಯೋ ವೈರಲ್ ಆಗಿದೆ.

ಶಿಕ್ಷಕ ಪಿ.ಮಹಾದೇವಸ್ವಾಮಿ ಎಂಬುವವರನ್ನು ಮೀಣ್ಯಂ ಶಾಲೆಯಿಂದ ಲೊಕ್ಕನಹಳ್ಳಿ ಶಾಲೆಗೆ ದಿಢೀರ್ ಆಗಿ ವರ್ಗಾವಣೆ ಮಾಡಿದ ಸುದ್ದಿ ಕೇಳಿದ ವಿದ್ಯಾರ್ಥಿಗಳು, ನೆಚ್ಚಿನ ಶಿಕ್ಷಕರು ಬೇಕೇ ಬೇಕೆಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಗ್ರಾಮಸ್ಥರೂ ಸಹ ಇದಕ್ಕೆ ಧ್ವನಿಗೂಡಿಸಿದರು. ತಮ್ಮ ಶಾಲೆಗೆ ಮತ್ತೇ ಮಹಾದೇವಸ್ವಾಮಿ ನಿಯೋಜನೆ ಆಗದಿದ್ದರೇ ಯಾರೂ ಶಾಲೆಗೆ ಬರುವುದಿಲ್ಲ ಎಂದು ಮಕ್ಕಳು ಎಚ್ಚರಿಕೆ ನೀಡಿದ್ದಾರೆ.

 

ಇನ್ನು ವರ್ಗಾವಣೆಯಾದ ಪಿ.ಮಹದೇವಸ್ವಾಮಿ ಕಳೆದ 4 ವರ್ಷದಿಂದ ಮೀಣ್ಯಂ ಶಾಲೆಯಲ್ಲಿದ್ದು ಕನ್ನಡ, ಇಂಗ್ಲಿಷ್ ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದಿದ್ದರಿಂದ ಅದರ ಜವಾಬ್ದಾರಿಯನ್ನು ಹೊತ್ತಿದ್ದರು. ಇದರೊಟ್ಟಿಗೆ ಬಿಸಿಯೂಟದ ಮೇಲ್ವಿಚಾರಣೆಯನ್ನು ವಹಿಸಿಕೊಂಡು ಮಕ್ಕಳಿಗೆ ಶುಚಿ-ರುಚಿಯಾದ ಬಿಸಿಯೂಟ ಸಿಗುವಂತೆ ಮಾಡಿದ್ದರು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಪಿ.ಮಹದೇವಸ್ವಾಮಿ ಅವರ ವರ್ಗಾವಣೆಯಲ್ಲಿ ಮುಖ್ಯ ಶಿಕ್ಷಕ ಬಾಲುನಾಯ್ಕ ಎಂಬುವರ ಪ್ರಭಾವ ಬೀರಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

 

ಈ ನಡುವೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಆಕ್ರೋಶಗೊಂಡು ತರಗತಿಯ ಪೀಠೋಪಕರಣವನ್ನು ಧ್ವಂಸ ಮಾಡುವಷ್ಟರ ಮಟ್ಟಿಗೆ ಹೋಗಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನು ಯಾರೋ ವೀಡಿಯೋ ಮಾಡಿ ಹರಿಯ ಬಿಟ್ಟಿರುವುದು ಸಂಶಯಕ್ಕೆ ಕಾರಣವಾಗಿದೆ.

 

ಇನ್ನೊಂದೆಡೆ ಇತ್ತೀಚೆಗೆ ಮಿಣ್ಯಂ ಶಾಲಾ ಶಿಕ್ಷಕರ ರಂಪಾಟ ಸಾಕಷ್ಟು ಸುದ್ದಿಯಾಗಿ ಶಿಕ್ಷಣ ಸಚಿವರ ಗಮನಕ್ಕೂ ಹೋಗಿತ್ತು. ಶಿಕ್ಷಣ ಇಲಾಖೆ ತಡವಾಗಿ ಎಚ್ಚೆತ್ತುಕೊಂಡು ರಂಪಾಟಕ್ಕೇ ಕಾರಣವಾಗಿದ್ದ ಬಾಲುನಾಯ್ಕ ಮತ್ತು ಮಹದೇವಸ್ವಾಮಿ ಅವರನ್ನು ಅನ್ಯ ಶಾಲೆಗಳಿಗೆ ಕರ್ತವ್ಯ ಮಾಡುವಂತೆ ನಿಯೋಜನೆ ಮಾಡಿ ಆದೇಶ ಹೂರಡಿಸಿದ್ದ ಬೆನ್ನಲ್ಲ್ಲೇ ಗ್ರಾಮದ ಕೆಲವರು ಶಾಲಾ ಮಕ್ಕಳನ್ನು ಎತ್ತಿಕಟ್ಟಿ ಈ ರೀತಿಯ ಹ್ಯೆಡ್ರಾಮಾ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ ಮಹದೇವಸ್ವಾಮಿಯವರನ್ನು ಇದೇ ಶಾಲೆಯಲ್ಲಿ ಉಳಿಸಿಕೊಳ್ಳಲು ತಂತ್ರ ರೂಪಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ಮಕ್ಕಳಲ್ಲಿ ಈ ರೀತಿಯ ಆಕ್ರೋಶ ಎಷ್ಟು ಸರಿ ಎಂಬುದು ಪ್ರಶ್ನೆಯಾಗಿ ಉಳಿದಿದೆ.