ಜಂಬೂ ಸವಾರಿಯೊಂದಿಗೆ ಸಂಪನ್ನಗೊಂಡ ಮೈಸೂರು ದಸರಾ

ಜಂಬೂ ಸವಾರಿಯೊಂದಿಗೆ ಸಂಪನ್ನಗೊಂಡ ಮೈಸೂರು ದಸರಾ

LK   ¦    Oct 09, 2019 10:08:06 AM (IST)
ಜಂಬೂ ಸವಾರಿಯೊಂದಿಗೆ ಸಂಪನ್ನಗೊಂಡ ಮೈಸೂರು ದಸರಾ

ಮೈಸೂರು: ಐತಿಹಾಸಿಕ 409ನೇ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಲಕ್ಷಾಂತರ ಮಂದಿ ಮಂಗಳವಾರ ಸಾಕ್ಷಿಯಾದರು.

ಈ ಒಂದು ಅಪರೂಪದ ಕ್ಷಣಗಳಿಗಾಗಿ ವರ್ಷದಿಂದ ಕಾಯುತ್ತಿದ್ದ ಮಂದಿ ಚಿನ್ನದ ಅರ್ಜುನ ಹೊತ್ತ ಅಂಬಾರಿಯಲ್ಲಿ ವಿರಾಜಮಾನವಾದ ತಾಯಿ ಚಾಮುಂಡೇಶ್ವರಿಯನ್ನು ಕಣ್ ತುಂಬಿಸಿಕೊಂಡು ಕೃತಾರ್ಥರಾದರು.

ಬೆಳಗ್ಗಿನಿಂದಲೇ ಸುತ್ತಮುತ್ತಲಿನ ಹಳ್ಳಿಗಳಿಂದ, ಮೊದಲೇ ನಗರಕ್ಕೆ ಬಂದು ವಾಸ್ತವ್ಯ ಹೂಡಿದ್ದ ಲಕ್ಷಾಂತರ ಮಂದಿ ಅರಮನೆ ಹಾಗೂ ಜಂಬೂಸವಾರಿ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಜಮಾಯಿಸಿದ್ದರು. ಪಾಸ್ ಪಡೆದವರು ಕಾಯ್ದಿರಿಸಿದ ಸ್ಥಳಗಳಲ್ಲಿ ಆಸೀನರಾದರೆ, ಉಳಿದವರ ಪೈಕಿ ಕೆಲವರು ರಸ್ತೆ ಬದಿಯಲ್ಲಿ ಸೂಕ್ತವಾದ ಜಾಗವನ್ನು ಆರಿಸಿಕೊಂಡು ಆಸೀನರಾದರೆ, ಮತ್ತೆ ಕೆಲವರು ಕಟ್ಟಡ ಹಾಗೂ ಮರಗಳ ಮೇಲೆ ಹತ್ತಿ ಕುಳಿತು ಜಂಬೂಸವಾರಿಯನ್ನು ಹತ್ತಿರದಿಂದ ವೀಕ್ಷಿಸಿದರು.

ಸಂಪ್ರದಾಯದಂತೆ ಬೆಳಗ್ಗೆ ಅರಮನೆ ದರ್ಬಾರ್ ಹಾಲ್‍ನಲ್ಲಿ ಸಾಂಪ್ರದಾಯಿಕ ವಿಧಿವಿಧಾನ ಮುಗಿಸಿದ ಯದುವೀರ್ ಒಡೆಯರ್ ಅವರು, ಸಂಪ್ರದಾಯದಂತೆ ಅರಮನೆಯಿಂದ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಇದೇ ಸಂದರ್ಭ ಕರಿತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ ನಡೆಯಿತು. ಬನ್ನಿಪೂಜೆ ನೆರವೇರಿಸಿ ಬಂದ ಬಳಿಕ ಒಡೆಯರ್ ಅವರ ಅಪ್ಪಣೆ ಪಡೆದ ಬಳಿಕ ಜಂಬೂಸವಾರಿಗೆ ಮುಂದಿನ ವ್ಯವಸ್ಥೆಯನ್ನು ಕೈಗೊಳ್ಳಲಾಯಿತು.

ಮಧ್ಯಾಹ್ನ 2.09ಕ್ಕೆ ಬಲರಾಮ ದ್ವಾರದ ಶ್ರೀಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೂಜೆ ನೆರವೇರಿಸಿದರು. ಈ ಸಂದರ್ಭ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಸಚಿವರು ಪಾಲ್ಗೊಂಡಿದ್ದರು. ಈ ವೇಳೆ ಸ್ತಬ್ದ ಚಿತ್ರ ಮತ್ತು ಜಾನಪದ ಕಲಾ ತಂಡಗಳು ಸಾಗಿದವು.

ಸಂಜೆ 4.17ರ ಕುಂಭ ಲಗ್ನದಲ್ಲಿ ಅರ್ಜುನ ಹೊತ್ತ ಚಿನ್ನದ ಅಂಬಾರಿಯಲ್ಲಿ ವೀರಾಜಮಾನಳಾದ ತಾಯಿ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪಾರ್ಚನೆ ನೆರವೇರಿಸಿದರು. ಇದೇ ವೇಳೆ ಕುಶಾಲತೋಪು ಸಿಡಿಸಲಾಯಿತು.

ಬಳಿಕ ಅರ್ಜುನನಿಗೆ ಕಾವೇರಿ ಮತ್ತು ವಿಜಯ ಎಂಬ ಹೆಣ್ಣಾನೆಗಳು ಕುಮ್ಕಿ ಆನೆಗಳಾಗಿ ಮೆರವಣಿಗೆಯುದ್ದಕ್ಕೂ ಸಾಗಿದವು. ಇನ್ನು ಅಶ್ವದಳ, ಪೊಲೀಸ್ ಕವಾಯತ್ ಸಾಥ್ ನೀಡಿತು. ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ಕುಳಿತಿದ್ದ ಜನ ತಾಯಿ ಚಾಮುಂಡೇಶ್ವರಿಗೆ ಜೈಕಾರ ಕೂಗುತ್ತಾ ಕಣ್ತುಂಬಿಕೊಂಡರು.

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಕಲಾತಂಡಗಳ ಪೈಕಿ ಚಾಮುಂಡೇಶ್ವರಿ ಮತ್ತು ಮಹಿಷಾಸುರನ ವೇಷದಲ್ಲಿ ಮರಗಾಲಿನ ನಡಿಗೆಯಲ್ಲಿ ಸಾಗಿದ್ದು ಆಕರ್ಷಣೀಯವಾಗಿತ್ತು. ಇನ್ನು ಬೆಳಗಾಂ-ಅತಿವೃಷ್ಠಿ ಪ್ರವಾಹದಿಂದ ನಲುಗಿದ ಬೆಳಗಾವಿ, ಬಾಗಲಕೋಟೆ-ಅತೀವೃಷ್ಠಿ ಹಾಗೂ ಪುನರ್ವಸತಿ ಕಾರ್ಯಗಳು, ಧಾರವಾಡ-ಸಾಂಸ್ಕøತಿಕ ವೈಭವ, ಹಾವೇರಿ-ಶಂಖನಾದ ಮೊಳಗಿಸುತ್ತಿರುವ ಕನಕದಾಸರು, ಗದಗ-ಭೇಟಿ ಪಡವೋ ಭೇಟಿ ಬಚಾವೋ, ಉತ್ತರ ಕನ್ನಡ-ಕದಂಬ ಬನವಾಸಿ ಮಧುಕೇಶ್ವರ ದೇವಸ್ಥಾನ, ವಿಜಯಪುರ-ವಚನ ಪಿತಾಮಹ ಫ.ಹು ಹಳಕಟ್ಟಿ, ಬೆಂಗಳೂರು ನಗರ-ಚಂದ್ರಯಾನ-2, ಬೆಂಗಳೂರು ಗ್ರಾಮಾಂತರ-ಸ್ವಚ್ಛತ ಕಡೆಗೆ ನಮ್ಮ ನಡಿಗೆ, ಚಿತ್ರದುರ್ಗಾ-ಹೆಣ್ಣು ಭ್ರ್ರೂಣ ಹತ್ಯೆ ತಡೆ ಹಾಗೂ ಮಹಿಳಾ ಸಾಧಕರು, ದಾವಣಗೆರೆ-ಏರ್‍ಸ್ಟ್ರೈಕ್, ಕೋಲಾರ-ಅಂತರಗಂಗೆ, ಶಿವಮೊಗ್ಗ-ಫಿಟ್ ಇಂಡಿಯಾ, ತುಮಕೂರು-ಸಮಗ್ರ ಕೃಷಿ ಪದ್ದತಿ ಹಾಗೂ ನಡೆದಾಡುವ ದೇವರು, ರಾಮನಗರ-ಮಳೂರು ಅಂಬೆಗಾಲು ಕೃಷ್ಣ, ಚಿಕ್ಕಬಳ್ಳಾಪುರ-ರೇಷ್ಮೆ ಮತ್ತು ಹೆಚ್ ನರಸಿಂಹಯ್ಯ, ಗುಲ್ಬರ್ಗಾ-ಆಯುಷ್ಮಾನ್ ಭಾರತ್, ಬಳ್ಳಾರಿ-ಹಂಪಿ ವಾಸ್ತುಶಿಲ್ಪ ಕಲಾ ವೈಭವ, ಬೀದರ್-ಫಸಲ್ ಭೀಮಾ ಯೋಜನೆ, ಕೊಪ್ಪಳ-ಗವಿಸಿದ್ದೇಶ್ವರ ಬೆಟ್ಟ, ರಾಯಚೂರು-ಗೂಗಲ್ ಬ್ರಿಡ್ಜ್, ಪ್ರಧಾನ ಮಂತ್ರಿ ಸಿಂಚಯಿ ಹಾಗೂ ನರೇಗಾಯೋಜನೆ, ಯಾದಗಿರಿ-ಅಂಬಿಗರ ಚೌಡಯ್ಯ, ಮೈಸೂರು-ಚಾಮರಾಜ ಒಡೆಯರ್ ಅವರ 100 ನೇ ವರ್ಷದ ಸಾಧನೆ, ಚಾಮರಾಜನಗರ-ಸಮೃದ್ದಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ, ಚಿಕ್ಕಮಗಳೂರು-ಶಿಶಿಲಬೆಟ್ಟ, ದಕ್ಷಿಣ ಕನ್ನಡ-ಮಂಗಳದೇವಿ ಹಾಗೂ ಭಾರತದ ದೊಡ್ಡ ಪೆಟ್ರೋಲಿಯಂ ಘಟಕ, ಹಾಸನ-ಎತ್ತಿನಹೊಳೆ ಯೋಜನೆ, ಕೊಡಗು-ಗುಡ್ಡ ಕುಸಿತ ಜಾಗೃತಿ ಮೂಡಿಸುವ ಬಗ್ಗೆ, ಮಂಡ್ಯ-ಶ್ರೀ ಆದಿ ಚುಂಚನಗಿರಿ ಮಠ, ಉಡುಪಿಕೃಷ್ಣ ಮಠದ ಗೋಪುರ, ದಸರಾ ಉಪ ಸಮಿತಿ-ಆನೆ ಬಂಡಿ, ಜೆ.ಎಸ್.ಎಸ್ ಮಠ, ವಾರ್ತಾ ಇಲಾಖೆ-ಸರ್ಕಾರ ಸೌಲಭ್ಯಗಳ ಮಾಹಿತಿ, ದಸರಾ ಉಪ ಸಮಿತಿ-ಮೆಮೊರೈಲ್, ಉಡಾನ್ ಹಾಗೂ ಹತ್ತು ಪಥದ ರಸ್ತೆ, ಜಿಲ್ಲಾಡಳಿತ ಸಾಮಾಜಿಕ ನ್ಯಾಯ, ಕಾವೇರಿ ನೀರಾವರಿ ನಿಗಮ-ನೀರಾವರಿ ನಿಗಮ ಮಾಹಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಪೋಷಣ ಅಭಿಯಾನ, ರಕ್ತಹೀನತೆ ಮುಕ್ತ ಭಾರತ, ಪ್ರವಾಸೋದ್ಯಮ ಇಲಾಖೆ-ನಿಮ್ಮ ಸಾಹಸಗಾಥೆ ನೀವೇ ರಚಿಸಿ, ಮೈಸೂರು ವಿಶ್ವವಿದ್ಯಾನಿಲಯ-ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳ ಅನಾವರಣವನ್ನು ಸ್ತಬ್ದ ಚಿತ್ರಗಳ ಮೂಲಕ ಮಾಡಿದ್ದರೆ ಇವುಗಳ ನಡುವೆ ಸುಮಾರು 43 ಬಗೆಯ ಜನಪದ ಕಲಾ ತಂಡಗಳು ಸಾಥ್ ನೀಡಿದವು.

ಈ ಪೈಕಿ ಕೋಲಾಟ, ತಮಟೆ, ಪೂಜಾಕುಣಿತ, ಕಂಗೀಲು, ಸತ್ತಿಗೆ, ಕರಡಿ ಕುಣಿತ, ಬೊಂಬೆಯಾಟ, ಕಂಸಾಳೆ ಹೀಗೆ ಹಲವು ಪ್ರದರ್ಶನ ಗಮನಸೆಳೆಯಿತು.

More Images