ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದ ಸಚಿವ ಶಂಕರ್

ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದ ಸಚಿವ ಶಂಕರ್

LK   ¦    Jan 15, 2021 10:08:52 AM (IST)
ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದ ಸಚಿವ ಶಂಕರ್

ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಯಾವುದೇ ಖಾತೆಯನ್ನು ನೀಡಿದರೂ ಅದನ್ನು ಸಮರ್ಪಕವಾಗಿ ನಿಭಾಯಿಸುವ ವಿಶ್ವಾಸವನ್ನು ನೂತನ ಸಚಿವ ಆರ್.ಶಂಕರ್ ವ್ಯಕ್ತಪಡಿಸಿದ್ದಾರೆ.

ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಬಳಿಕ ಗುರುವಾರ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಪತ್ನಿ ಸಹಿತ ಆಗಮಿಸಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು ಈಗಾಗಲೇ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮುಖ್ಯಮಂತ್ರಿಗಳು  ಇದುವರೆಗೆ ಖಾತೆಗಳನ್ನು ಹಂಚಿಲ್ಲ. ಯಾವುದೇ ಖಾತೆ ನೀಡಿದರೂ ಅದನ್ನು ನಿಭಾಯಿಸುತ್ತೇನೆ. ಇದು ಟೆಂಪಲ್ ರನ್ ಅಲ್ಲ ನಾನು ನಂಜುಂಡೇಶ್ವರನ ಭಕ್ತನಾಗಿದ್ದು, ಸಚಿವನಾದ ಬಳಿಕ ದೇವರಿಗೆ ಪೂಜೆ ಸಲ್ಲಿಸಲು ಬಂದಿದ್ದೇನೆ. ಹಿಂದೆಯೂ ದೇವಾಲಯಕ್ಕೆ ಬರುತ್ತಿದ್ದೆ. ಇದಕ್ಕೆ ಹೊಸ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.

ಇನ್ನು ಸಚಿವ ಸ್ಥಾನ ಸಿಗದ ಅತೃಪ್ತ ಶಾಸಕರ ಕುರಿತಂತೆ ಮಾತನಾಡಿದ ಅವರು, ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಅಸಮಾಧಾನಿತರು ಹೈಕಮಾಂಡ್‍ನೊಂದಿಗೆ ಮಾತನಾಡುವಂತೆ ಹೇಳಿದ್ದಾರೆ. ಹೀಗಿರುವಾಗ ಎಲ್ಲ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಬಗೆಹರಿಯಲಿದೆ ಎಂದರು. ಸುಪ್ರೀಂಕೋರ್ಟ್ ಆದೇಶದ ಇರುವ ಹಿನ್ನೆಲೆಯಲ್ಲಿ ಬಹುಶಃ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡಿಲ್ಲವೇನೋ? ಆದರೆ ಶಾಸಕ ಮುನಿರತ್ನ ಅವರಿಗೆ ಮುಂದೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಕಾಯಬೇಕಷ್ಟೆ ಎಂದರು.

ಇದಕ್ಕೂ ಮುನ್ನ ಅವರು ಪತ್ನಿ ಧನಲಕ್ಷ್ಮಿ ಸೇರಿದಂತೆ ಕುಟುಂಬದೊಂದಿಗೆ ಶ್ರೀಕಂಠೇಶ್ವರ ದೇವಾಲಯಕ್ಕೆ ಆಗಮಿಸಿ ಗರ್ಭಗುಡಿಯ ಮುಂಭಾಗ ಕುಳಿತು ನಂಜುಂಡೇಶ್ವರ ಹಾಗೂ ಪಾರ್ವತಿ ಅಮ್ಮನವರ ದರ್ಶನ ಭಾಗ್ಯ ಪಡೆದರಲ್ಲದೆ,  ನಂಜುಂಡೇಶ್ವರ ಹಾಗೂ ಪಾರ್ವತಿ ಅಮ್ಮನವರ ದರ್ಶನ ಭಾಗ್ಯ ಪಡೆದರು. ಬಳಿಕ  ಗಣಪತಿ, ಸುಬ್ರಹ್ಮಣ್ಯೇಶ್ವರ, ಸರಸ್ವತಿ, ಪಾರ್ವತಿ ಅಮ್ಮನವರು ಸೇರಿದಂತೆ ವಿವಿಧ ಗುಡಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ನೂತನ ಸಚಿವ ದಂಪತಿಗಳಿಗೆ  ದೇವಾಲಯದ ಆಗಮಿಕರು ದೇವರ ಪ್ರಸಾದ ನೀಡಿ, ಶಲ್ಯ ಹಾಕಿ ಮಾಲಾರ್ಪಣೆ ಮಾಡಿ ಆಶೀರ್ವದಿಸಿದರು.