ತಂದೆ ಮಗನನ್ನು ಕೊಂದಿದ್ದ ಆರೋಪಿಗಳ ಬಂಧನ

ತಂದೆ ಮಗನನ್ನು ಕೊಂದಿದ್ದ ಆರೋಪಿಗಳ ಬಂಧನ

CI   ¦    Jan 09, 2021 12:05:42 PM (IST)
ತಂದೆ ಮಗನನ್ನು ಕೊಂದಿದ್ದ ಆರೋಪಿಗಳ ಬಂಧನ

ಮೈಸೂರು: ತಂದೆ ಮಗನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಮೈಸೂರು ದಕ್ಷಿಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಬಂಧಿತರನ್ನು ಮಂಡಕಳ್ಳಿ ಗ್ರಾಮದ ನಿವಾಸಿಗಳಾದ ಮಂಜುನಾಥ್, ಮಹಾದೇವಸ್ವಾಮಿ (ಮಾದಪ್ಪ) ಹಾಗೂ ಸತೀಶ್ ಕುಮಾರ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಡಿಸೆಂಬರ್‌ 2 ರಂದು ತಂದೆಯನ್ನು ಕೊಲೆ ಮಾಡಿ ನಂತರ ನಿನ್ನೆ ಮಗನನ್ನೂ ಕೊಲೆ ಮಾಡಿದ್ದರೆಂದು ವರದಿ ಆಗಿತ್ತು. ಆದರೆ ಆರೋಪಿಗಳು ಮೊದಲೇ ಮಗನನ್ನು ಕೊಂದು ನಂತರ ತಂದೆಯನ್ನು ಕೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮಂಡಕಳ್ಳಿ ಗ್ರಾಮದ ಮರಿಕೋಟೆಗೌಡ ಪುತ್ರ ಸತೀಶ್ ಕುಮಾರ್ ಹಾಗೂ ಬಂಧಿತ ಕೊಲೆ ಆರೋಪಿಗಳಿಗೆ 2020 ಡಿಸೆಂಬರ್ 26ರಂದು ರಾತ್ರಿ ಎಪಿಎಂಸಿ ರಸ್ತೆ ಬಳಿ ವೈಯಕ್ತಿಕ‌ ದ್ವೇಷದಿಂದ ಗಲಾಟೆ ನಡೆದಿತ್ತು.

ಆರೋಪಿಗಳಾದ ಮಂಜುನಾಥ್, ಸತೀಶ್ ಕುಮಾರ್, ಮಹದೇವಸ್ವಾಮಿ ಮೂವರು ಸೇರಿ ಮರಿಕೋಟೆಗೌಡ ಪುತ್ರ ಸತೀಶ್ ಕುಮಾರ್ ನನ್ನು ಹತ್ಯೆ ಮಾಡಿ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯ ಮೈದಾನದಲ್ಲಿ ಗುಂಡಿ ತೆಗೆದು ಹೂತು ಹಾಕಿದ್ದರು.

ಈ ಘಟನೆ ಯಾರಿಗೂ ಗೊತ್ತಿಲ್ಲ ಎಂದು ಸುಮ್ಮನಾಗಿದ್ದರು. ಆದರೆ ಮಗನು ಮನೆಗೆ ಬಾರದಿದ್ದಾಗ ಅಂದು ರಾತ್ರಿಯೇ ಡಿಸೆಂಬರ್ 26ರಂದು ಮಗ ಕಾಣೆಯಾಗಿದ್ದಾನೆ ಎಂದು ಮರಿ ಕೋಟೆಗೌಡ, ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ತಮ್ಮ ದುಷ್ಕೃತ್ಯ ಎಲ್ಲಿ ಬೆಳಕಿಗೆ ಬರುವುದೋ ಎಂದು ಹೆದರಿದ ದುಷ್ಕರ್ಮಿಗಳು ಮರಿಕೋಟೆಗೌಡನನ್ನೆ ಮುಗಿಸಿಬಿಟ್ಟರೆ ಯಾರೂ ಕೇಳುವುದಿಲ್ಲ ಎಂದು ಭಾವಿಸಿ ಕಳೆದ ಜನವರಿ 2ರ ಬೆಳಗ್ಗೆ 7.30ರ ಸಮಯದಲ್ಲಿ ಮಂಡಕಳ್ಳಿ ಗ್ರಾಮ ಹಾಗೂ ಶ್ರೀನಗರ ಗ್ರಾಮದ ರಸ್ತೆಯಲ್ಲಿರುವ ಪುಟ್ಟಯ್ಯ ಜಮೀನಿನಲ್ಲಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಅಪ್ಪನ ಕೊಲೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ವಿಚಾರಣೆ ವೇಳೆ ಆರೋಪಿಗಳು ಕೊಲೆಯ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿದ್ದಾರೆ. ನಿನ್ನೆ ಸತೀಶನ ಶವವನ್ನು ಹೊರತೆಗೆಯಲಾಗಿದೆ.

ತಂದೆ ಮಗನನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.