ಆಶಾ ಕಾರ್ಯಕರ್ತೆಯರ ಸಂಘದಿಂದ ಮೈಸೂರಿನಲ್ಲಿ ಪ್ರತಿಭಟನೆ

ಆಶಾ ಕಾರ್ಯಕರ್ತೆಯರ ಸಂಘದಿಂದ ಮೈಸೂರಿನಲ್ಲಿ ಪ್ರತಿಭಟನೆ

CI   ¦    Jul 29, 2020 03:10:15 PM (IST)
ಆಶಾ ಕಾರ್ಯಕರ್ತೆಯರ ಸಂಘದಿಂದ ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು: ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12,000 ಗೌರವಧನ ಖಾತರಿಪಡಿಸಬೇಕು ಮತ್ತು ಕೋವಿಡ್-19 ವಿರುದ್ಧ ಹೋರಾಟಕ್ಕೆ ಅಗತ್ಯವಿರುವಷ್ಟು ರಕ್ಷಣಾ ಸಾಮಗ್ರಿಗಳನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ರಾಜ್ಯವ್ಯಾಪಿಯಾಗಿ ಜೂ.30ರಂದು ಮತ್ತು ನಂತರದಲ್ಲಿ ತಾಲೂಕು, ಜಿಲ್ಲಾಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ ಜಿಲ್ಲಾಧಿಕಾರಿಗಳು ಮತ್ತು  ತಹಶೀಲ್ದಾರ್  ಮತ್ತು ರಾಜ್ಯದ ಹಲವಾರು ಸಚಿವರಿಗೆ ಮತ್ತು ಶಾಸಕರಿಗೆ ಖುದ್ದಾಗಿ ಮನವಿ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗಿತ್ತು.

ಇಂದಿಗೆ ಹೋರಾಟ ನಡೆಸುತ್ತಿರುವುದು 20ನೇ ದಿನಕ್ಕೆ ಕಾಲಿರಿಸಿದೆ. ಆದರೆ ಇದುವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಕನಿಷ್ಠ 12,000 ವೇತನ ನಿಗದಿಪಡಿಸಿ, ರಕ್ಷಣಾ ಸಾಮಗ್ರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಬೇಕು. ಆಗಾಗ ಎಲ್ಲಾ ಕಾರ್ಯಕರ್ತೆಯರಿಗೆ ಆರೋಗ್ಯ ತಪಾಸಣೆ ಮಾಡಬೇಕು. ಪಾಸಿಟಿವ್ ಬಂದಿರುವ ಎಲ್ಲರಿಗೂ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು. ಈ ಅವಧಿಯಲ್ಲಿ ಮಾಸಿಕ ಗೌರವಧನ ಮತ್ತು ಪ್ರೋತ್ಸಾಹ ಧನ ನೀಡಬೇಕು. ಸೋಂಕಿತ ಆಶಾಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.