ಶತಮಾನದ ಬಳಿಕ ಭಕ್ತರಿಲ್ಲದೆ ಚಾಮುಂಡೇಶ್ವರಿಗೆ ಪೂಜೆ

ಶತಮಾನದ ಬಳಿಕ ಭಕ್ತರಿಲ್ಲದೆ ಚಾಮುಂಡೇಶ್ವರಿಗೆ ಪೂಜೆ

LK   ¦    Jun 26, 2020 08:20:31 PM (IST)
ಶತಮಾನದ ಬಳಿಕ ಭಕ್ತರಿಲ್ಲದೆ ಚಾಮುಂಡೇಶ್ವರಿಗೆ ಪೂಜೆ

ಮೈಸೂರು: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಶತಮಾನದ ಬಳಿಕ ಇದೇ ಮೊದಲ ಬಾರಿಗೆ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ಸಂಭ್ರಮದ ಬದಲಿಗೆ ನೀರವ ಮೌನ ಆವರಿಸಿತ್ತು. ಭಕ್ತರ ಜಯಘೋಷಗಳಿಲ್ಲದೆ  ವಿಧಿವಿಧಾನದಂತೆ ತಾಯಿ ಚಾಮುಂಡೇಶ್ವರಿಗೆ ಪೂಜಾ ಕೈಂಕರ್ಯ ನೆರವೇರಿತು.

ಆಷಾಢ ಬಂತೆಂದರೆ ಸಾಕು ಚಾಮುಂಡಿಬೆಟ್ಟದಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಆಷಾಢ ಶುಕ್ರವಾರಗಳಂದು ಲಕ್ಷಾಂತರ ಜನ ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದರು. ಚಾಮುಂಡಿಯ ಅಂಗಳದಲ್ಲಿ ಕಣ್ಣು ಹಾಯಿಸಿದಷ್ಟು ದೂರವೂ ಜನಸಾಗರವೇ ಕಾಣುತ್ತಿತ್ತು. ಮಹಿಷಾಸುರ ವಿಗ್ರಹದಿಂದ ದೇವಸ್ಥಾನದವರೆಗೆ, ದೇವಸ್ಥಾನದ ಸುತ್ತಲಿನ ಪ್ರದೇಶವು ಭಕ್ತರಿಂದಲೇ ತುಂಬಿ ಹೋಗಿರುತ್ತಿತ್ತು. ಅಲ್ಲದೆ, ಬೆಟ್ಟದ ಪ್ರತಿ ಅಂಗಡಿ, ವ್ಯಾಪಾರಿ ಮಳಿಗೆ, ಹೋಟೆಲ್‍ಗಳಲ್ಲೂ ಜನದಟ್ಟಣೆ ಗೋಚರವಾಗುತ್ತಿತ್ತು. ಆದರೆ, ಈ ಬಾರಿ ಇಂತಹ ಜಾತ್ರಾ ಸಂಭ್ರಮ, ಹಬ್ಬದ ಸಡಗರದ ಕ್ಷಣಗಳು ಇಲ್ಲಿ ಕಾಣಲಿಲ್ಲ. ಬದಲಿಗೆ ಇದಕ್ಕೆ ವ್ಯತಿರಿಕ್ತ ಸನ್ನಿವೇಶ ಕಂಡು ಬಂತು.

ಮಹಾಮಾರಿ ಕೊರೊನಾದಿಂದಾಗಿ ಈ ಬಾರಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶ ನಿಷೇಧಿಸುವುದರಿಂದ ಶತಮಾನದ ಬಳಿಕ ಭಕ್ತರ ಅನುಪಸ್ಥಿತಿಯಲ್ಲಿ ತಾಯಿ ಚಾಮುಂಡೇಶ್ವರಿಗೆ ಆಷಾಢ ಶುಕ್ರವಾರದ ವಿಶೇಷ ಪೂಜೆಯನ್ನು ಅರ್ಪಿಸಲಾಯಿತು. ವಿವಿಧ ಬಗೆಯ ಪೂಜಾ ಕೈಂಕರ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು. ಪ್ರತಿ ವರ್ಷದ ಅದ್ದೂರಿತನ ಈ ಬಾರಿ ತೆರೆಮರೆಗೆ ಸರಿಯಿತು.  ನೂರಾರು ವರ್ಷಗಳ ಹಿಂದೆಯೂ ಸಹ ಕಾಲರಾ, ಪ್ಲೇಗ್‍ನಂತಹ ಸಾಂಕ್ರಾಮಿಕ ರೋಗ ತಲೆದೋರಿದ್ದಾಗ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು.

ಕೊರೊನಾ ಸೋಂಕು ಹೆಚ್ಚಳದಿಂದ ಈಗಾಗಲೇ ಎಲ್ಲಾ ಆಷಾಢ ಶುಕ್ರವಾರ ಮತ್ತು ವರ್ಧಂತಿಯಂದು ಚಾಮುಂಡಿ ಬೆಟ್ಟಕ್ಕೆ ಭಕ್ತರು ಮತ್ತು ಪ್ರವಾಸಿಗರಿಗೆ ಪ್ರವೇಶ ನಿಬರ್ಂಧಿಸಿದೆ. ತಾಯಿಗೆ ನಾಗಲಕ್ಷ್ಮಿ ಅಲಂಕಾರ ಮಾಡಿ ಬೆಳಗ್ಗೆ 4.30ಕ್ಕೆ ಚಾಮುಂಡಿಬೆಟ್ಟದ ದೇವಾಲಯದಲ್ಲಿ ಪ್ರಧಾನ ಆಗಮಿಕ ಡಾ.ಎನ್.ಶಶಿಶೇಖರ್ ದೀಕ್ಷಿತ್, ಅರ್ಚಕ ದೇವಿ ಪ್ರಸಾದ್ ನೇತೃತ್ವದಲ್ಲಿ ತಾಯಿ ಚಾಮುಂಡೇಶ್ವರಿಗೆ ಮಹಾನ್ಯಾಸ ಪೂರ್ವಕ ಅಭಿಷೇಕ, ರುದ್ರಾಭಿಷೇಕ, ಅರ್ಚನೆ ಸೇರಿದಂತೆ ನಾನಾ ಧಾರ್ಮಿಕ ಕೈಂಕರ್ಯ ನಡೆಸಲಾಯಿತು. ಬೆಳಗ್ಗೆ 7.20ಕ್ಕೆ ದೇವಾಲಯದ ಆವರಣದಲ್ಲಿಯೇ ಚಾಮುಂಡಿ ತಾಯಿ ಉತ್ಸವ ಮೂರ್ತಿಯ ಉತ್ಸವ ಮಾಡಲಾಯಿತು. ನಂತರ 8ಕ್ಕೆ ದೇಗುಲದ ಬಾಗಿಲು ಹಾಕಲಾಯಿತು.  ಕೊರೊನಾ ಸೋಂಕು ತೊಲಗಿ, ನಾಡು ಸುಭೀಕ್ಷವಾಗಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಡಿಸಿಪಿ ಪ್ರಕಾಶ್ ಗೌಡ ಸೇರಿದಂತೆ ದೇವಾಲಯದ ಸಿಬ್ಬಂದಿ ಹಾಜರಿದ್ದರು.