ಕೃಷಿ ಜೀವನ ಕ್ರಮವೇ ಹೊರತು ಉದ್ಯಮವಲ್ಲ

ಕೃಷಿ ಜೀವನ ಕ್ರಮವೇ ಹೊರತು ಉದ್ಯಮವಲ್ಲ

LK   ¦    Feb 17, 2021 09:07:29 AM (IST)
ಕೃಷಿ ಜೀವನ ಕ್ರಮವೇ ಹೊರತು ಉದ್ಯಮವಲ್ಲ

ಮೈಸೂರು: ಕೃಷಿ ಜೀವನಕ್ರಮವೇ ಹೊರತು ಅದು ಉದ್ಯಮವಲ್ಲ ಎಂದು ಕೃಷಿಕರು ಮತ್ತು ಲೇಖಕ ಚಿನ್ನಸ್ವಾಮಿ ವಡ್ಡಗೆರೆಯವರು ಹೇಳಿದರು.

ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-11’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ   ‘ಕೃಷಿ ಮತ್ತು ಜೀವನ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಕೃಷಿ ಶ್ರಮ ಪ್ರಧಾನವಾದ ವೃತ್ತಿ. ಇಂದು ಜನರು ಅದರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ. ಕೃಷಿ ಎಂದರೆ ಮೂಗು ಮುರಿಯುವ ಘಟನೆಗಳು ಹೆಚ್ಚುತ್ತಿವೆ. ಜೀವನೋಪಾಯಕ್ಕಾಗಿ ನಾವು ಹಲವಾರು ವೃತ್ತಿಗಳನ್ನು ಅವಲಂಬಿಸುತ್ತೇವೆ. ಆದರೆ ಕೃಷಿ ಮತ್ತು ಆರೋಗ್ಯಕ್ಕೆ ಅವಿನಾಭಾವ ಸಂಬಂಧವಿದೆ ಎಂದರು.

ಕೃಷಿ ನಮ್ಮ ಅಂತರಂಗ ಮತ್ತು ಬಹಿರಂಗದ ಬದುಕನ್ನು ರೂಪಿಸುವ ವಿಶೇಷ ವೃತ್ತಿಯಾಗಿದೆ. ವ್ಯವಸಾಯದಲ್ಲಿ ಬೆಳೆಗಳಿಗೆ ಪ್ರಾಮುಖ್ಯತೆಯನ್ನು ನೀಡದೇ ಅಂತರಂಗದ ಸಾಧನೆಗೆ ಒತ್ತು ನೀಡಬೇಕು. ಕೃಷಿಯನ್ನು ಒಂದು ಕಲೆಯನ್ನಾಗಿ ಕರಗತಮಾಡಿಕೊಳ್ಳಬೇಕು. ಪ್ರಸ್ತುತ ಸಂದರ್ಭದಲ್ಲಿ ಆಹಾರಕ್ಕೆ ಬದಲಾಗಿ ಔಷಧವನ್ನೇ ಆಹಾರವನ್ನಾಗಿ ಸೇವಿಸಲಾಗುತ್ತಿದೆ. ಬದುಕಿನಲ್ಲಿ ನಕಾರಾತ್ಮಕತೆಗೆ ಅವಕಾಶ ನೀಡದೆ ಮಾದರಿಯಾದ ಬದುಕನ್ನು ಕಟ್ಟಿಕೊಳ್ಳಬೇಕು.  ವೈಫಲ್ಯವನ್ನು ಅನುಭವಿಸಿಯೂ ಎದೆಗುಂದದೆ ಯಶಸ್ಸನ್ನು ಕಂಡ ಅನೇಕ ರೈತರು ನಮ್ಮ ನಾಡಿನಲ್ಲಿದ್ದಾರೆ. ನಮ್ಮ ಸುತ್ತುಮುತ್ತಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಸಮೃದ್ಧವಾದ ಕೃಷಿಯನ್ನು ಮಾಡಬಹುದು. ಯುವಕರು ಕೃಷಿಯನ್ನು ಮೂಲವೃತ್ತಿಯಾಗಿ ಪರಿಗಣಿಸಬೇಕಾದ ಅಗತ್ಯತೆ ಇಂದು ಬಂದೊದಗಿದೆ. ಕೃಷಿಗೆ ಪೂರಕವಾದ ಗುಡಿ ಕೈಗಾರಿಕೆಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಆನ್‍ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಜಿಜ್ಞಾಸುಗಳು, ಸಾರ್ವಜನಿಕರು ಭಾಗವಹಿಸಿದ್ದರು.