ದೇವರಾಜ ಅರಸ್ ಹುಟ್ಟೂರಲ್ಲಿ ಅಭಿವೃದ್ಧಿ ಕಾರ್ಯ

ದೇವರಾಜ ಅರಸ್ ಹುಟ್ಟೂರಲ್ಲಿ ಅಭಿವೃದ್ಧಿ ಕಾರ್ಯ

Nov 10, 2015 11:37:36 AM (IST)

ಮೈಸೂರು: ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸ್ ಅವರ ಹುಟ್ಟೂರು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗ ಗ್ರಾಮದ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಿದ್ದು, ನ.13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

ಮುಖ್ಯಮಂತ್ರಿಗಳು ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಸಿ.ಶಿಖಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ,  ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಕಾರ್ಯಕ್ರಮದ ಯಶಸ್ವಿಗೆ ಗ್ರಾಮಸ್ಥರ ಸಹಕಾರ ಬಯಸಿದ್ದರಲ್ಲದೆ,  ಗ್ರಾಮದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ತಯಾರಿಸಿದರು. ಇದೇ ಸಂದರ್ಭ ಜಾತ್ರೆಯೂ ಇರುವುದರಿಂದ ಪೊಲೀಸ್ ಬಂದೋಬಸ್ತ್ ಬಗ್ಗೆಯೂ ಎಸ್ಪಿ ಪರಿಶೀಲಿಸಿದರು.

ಈ ಸಂದರ್ಭ ಬೆಟ್ಟದತುಂಗ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪದ್ಮಮ್ಮ,  ತಹಸೀಲ್ದಾರ್ ರಂಗನಾಥ್, ಪೊಲೀಸ್ ವೃತ್ತ ನಿರೀಕ್ಷಕ ಪ್ರಸನ್ನಕುಮಾರ್, ಬೆಟ್ಟದಪುರ ಪೊಲೀಸ್ಠಾಣೆಯ ಉಪ ನಿರೀಕ್ಷಕ ಅನಿಲ್ ಕುಮಾರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಪ್ರಕಾಶ್, ಬಿಸಿಎಂ ಇಲಾಖೆಯ ಪ್ರಭಾರ ವಿಸ್ತರಣಾಧಿಕಾರಿ ಚಂದ್ರಶೇಖರ್, ಪಿಡಿಓ ಶೇಖರ್, ಉಪಾಧ್ಯಕ್ಷ ಸೋಮಶೇಖರ್ ಮೊದಲಾದವರಿದ್ದರು.