ಮಗಳೊಬ್ಬಳು ಅಮ್ಮನಿಗಾಗಿ ನಿರ್ಮಿಸಿದ ಮಾತೃಮಂದಿರ!

ಮಗಳೊಬ್ಬಳು ಅಮ್ಮನಿಗಾಗಿ ನಿರ್ಮಿಸಿದ ಮಾತೃಮಂದಿರ!

LavaKumar   ¦    Oct 07, 2020 12:32:02 PM (IST)
ಮಗಳೊಬ್ಬಳು ಅಮ್ಮನಿಗಾಗಿ ನಿರ್ಮಿಸಿದ ಮಾತೃಮಂದಿರ!

ಸಾಮಾನ್ಯವಾಗಿ ಎಲ್ಲ ರೀತಿಯ ದೇಗುಲ ನೋಡಿರಬಹುದು. ಆದರೆ ಮಾಗಡಿಯ ತಾವರೆಕೆರೆ ಸೊಂಡೆಕೊಪ್ಪ ರಸ್ತೆಯ ವರ್ತೂರು ಗ್ರಾಮದ ಹಿಮಗಿರಿ ಎಸ್ಟೇಟ್‍ನಲ್ಲಿರುವ ಮಾತೃಮಂದಿರ ವಿಶಿಷ್ಟವಾಗಿದೆ. ಇದು ಮಗಳೊಬ್ಬಳು ತನ್ನ ಅಮ್ಮನಿಗಾಗಿ ನಿರ್ಮಿಸಿದ ದೇಗುಲವಾಗಿದೆ.

ನಾವೆಲ್ಲರೂ ಮಾತಿಗೆ ಮಾತೃದೇವೋಭವ ಎನ್ನುತ್ತೇವೆ. ಆದರೆ ಅದನ್ನು  ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ವಿಜಯಕುಮಾರಿ ಎಂಬುವರು ಸಾಕಾರ ಮಾಡಿದ್ದಾರೆ.

ಹೆತ್ತವರನ್ನು ಬೀದಿಗೆ ಬಿಡುವ, ಅನಾಥಶ್ರಮಕ್ಕೆ ಸೇರಿಸುವ, ತಮ್ಮಿಂದ ದೂರವಿಡುವ ಜನರ ಮಧ್ಯೆ ತಾಯಿಯನ್ನು ಅವರು ಅಗಲಿದ ನಂತರವೂ ದೇವರಂತೆ ಪೂಜಿಸುತ್ತಾ ಅವರ ಹೆಸರಿನಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಶಿಕ್ಷಕಿ ವಿಜಯಕುಮಾರಿ ಅವರು ಇತರರಿಗೆ ಮಾದರಿಯಾಗಿದ್ದಾರೆ.

ಅಮ್ಮ ಕರುಣಾಮಯಿ ಆಕೆ ಪ್ರತಿಕ್ಷಣವೂ ತನ್ನ ಮಕ್ಕಳ ಒಳಿತನ್ನೇ ಬಯಸುತ್ತಾ ಬದುಕುತ್ತಾಳೆ ಅಂಥವಳನ್ನು ಕಡೇ ಕಾಲದಲ್ಲಿ ನೋಡಿಕೊಳ್ಳಬೇಕಾದದ್ದು ಮಕ್ಕಳ ಕರ್ತವ್ಯ ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಮಕ್ಕಳಿದ್ದರೂ ಅನಾಥರಾಗಿ ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ. ಕಾರಣ ದುಡಿಮೆ, ಸಂಪಾದನೆಯೇ ಮುಖ್ಯವಾಗಿರುವುದರಿಂದ ಎಲ್ಲೋ ದೂರಕ್ಕೆ ಮಕ್ಕಳು ಹೊರಟು ಹೋಗುತ್ತಾರೆ. ಇತ್ತ ತಾಯಿ ತನ್ನ ಮಕ್ಕಳ ನಿರೀಕ್ಷೆಯಲ್ಲಿ ಕಾಯುತ್ತಾ ಏಕಾಂಗಿಯಾಗಿ ಕಣ್ಣೀರಲ್ಲಿ ದಿನಕಳೆಯುವುದು ಸಾಮಾನ್ಯವಾಗಿದೆ.

ವಿಜಯಕುಮಾರಿಯವರು ಹಾಗಲ್ಲ. ಜೀವಂತವಾಗಿದ್ದಾಗಲೂ ತನ್ನ ತಾಯಿಯನ್ನು ಜತನದಿಂದ ನೋಡಿಕೊಂಡರು. ಕಾಲವಾದ ಬಳಿಕ ಅವರ ಹೆಸರಲ್ಲಿ ಭವ್ಯವಾದ ದೇಗುಲ ನಿರ್ಮಿಸಿ ಅದರಲ್ಲೊಂದು ಅಮ್ಮನ ಪ್ರತಿಮೆ ಮಾಡಿ ಪೂಜಿಸುತ್ತಿದ್ದಾರೆ. ಅಷ್ಟೇ ಅಲ್ಲ ವರ್ಷಕ್ಕೊಮ್ಮೆ ಮಾತೃ ಉತ್ಸವವನ್ನು ನಡೆಸುತ್ತಾರೆ. ಈ ಸಂದರ್ಭ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ.

ಇನ್ನು ಇವರು  ಬೆಂಗಳೂರಿನ ಬಸವೇಶ್ವರ ನಗರದಲ್ಲಿ ತಾಯಿ ಪುಟ್ಟ ಚೆನ್ನಮ್ಮ, ತಂದೆ ನಂಜಪ್ಪನವರ ಹೆಸರಿನಲ್ಲಿ ನಿರ್ಮಿಸಿರುವ `ಪುನಂ' ಮನೆಯಂಗಳದಲ್ಲಿ ತಾಯಿಯ ಹೆಸರಲ್ಲಿ ರಂಗೋಲಿಸ್ಪರ್ಧೆ, ಸಂಗೀತ ಸಂಜೆ, ರಕ್ತ ಮತ್ತು ನೇತ್ರದಾನ ಸಿನಿಮಾನಟರ, ಸಾಹಿತಿ, ಪತ್ರಕರ್ತರು, ಕಲಾವಿದರು, ಉದ್ಯಮಿಗಳು, ಧಾರ್ಮಿಕ ಗುರುಗಳನ್ನು ಕರೆದು ಗೌರವಿಸಿ ತಾಯಿಗೆ ವಿಶೇಷ ಪೂಜೆ ಅಭಿಷೇಕ, ಹೋಮ, ಪ್ರಸಾದ ವಿನಿಯೋಗ ಮಾಡುತ್ತಾರೆ ಇದು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ನಡೆದು ಬಂದಿದೆ.

ವರ್ತೂರು ಗ್ರಾಮದ ಹಿಮಗಿರಿ ಎಸ್ಟೇಟ್‍ನಲ್ಲಿ ಇವರು ಕಟ್ಟಿಸಿರುವ ಅಮ್ಮನ ದೇಗುಲವಾದ ಮಾತೃಮಂದಿರ ಸುಂದರವಾಗಿದೆ. ಅಷ್ಟೇ ಅಲ್ಲ ಅಮೃತಶಿಲೆಯಿಂದ ನಿರ್ಮಿಸಿರುವ ಪುತ್ಥಳಿಯೂ ಭವ್ಯವಾಗಿದೆ.

ನಿಜಕ್ಕೂ ಅಮ್ಮನಿಗೊಂದು ದೇವರ ಸ್ಥಾನ ನೀಡಿ ಆಕೆಗೊಂದು ಗುಡಿಕಟ್ಟಿ ಪ್ರತಿಕ್ಷಣವೂ ಆಕೆಯ ಸ್ಮರಣೆ ಮಾಡುತ್ತಾ ಆಕೆಯ ನೆನಪಲ್ಲಿ ಇತರರಿಗೆ ಒಳ್ಳೆಯದನ್ನು ಮಾಡುತ್ತಿರುವ ಶಿಕ್ಷಕಿ ವಿಜಯಕುಮಾರಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.