ಚಾಮರಾಜನಗರದ ಸುಂದರ ಗುಂಡಾಲ್ ಜಲಾಶಯ

ಚಾಮರಾಜನಗರದ ಸುಂದರ ಗುಂಡಾಲ್ ಜಲಾಶಯ

LK   ¦    Jun 13, 2020 02:39:26 PM (IST)
ಚಾಮರಾಜನಗರದ ಸುಂದರ ಗುಂಡಾಲ್ ಜಲಾಶಯ

ಮಳೆ ಬಿದ್ದಿದ್ದರಿಂದ ನಿಸರ್ಗ ಸೌಂದರ್ಯವನ್ನು ಹಸಿರನ್ನೊದ್ದು ಸುಂದರವಾಗಿ ಕಂಗೊಳಿಸುತ್ತಿದ್ದು, ಈ ಸುಂದರತೆ ಗುಂಡಾಲ್ ಜಲಾಶಯದ ಸುಂದರತೆಯನ್ನು ಇಮ್ಮಡಿಗೊಳಿಸಿದೆ.

ಗುಂಡಾಲ್ ಜಲಾಶಯವು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ಯ ಮಂಗಲ ಸಂಪರ್ಕಿಸುವ ರಾಜ್ಯ ಹೆದ್ದಾರಿ 79ರ ಮುಖ್ಯ ರಸ್ತೆ ಸಮೀಪವಿದೆ. ಹೀಗಾಗಿ ಪ್ರವಾಸಿಗರು ಈ ಜಲಾಶಯವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಮುಂಗಾರು ಆರಂಭದಲ್ಲಿ ಮಳೆ ಸುರಿದ ಕಾರಣ ಇಡೀ ಪ್ರಕೃತಿ ಹಸಿರಾಗಿದೆ ಇದು ಜಲಾಶಯಕ್ಕೆ ಮೆರಗು ತಂದಿದೆ.

ಹಾಗೆ ನೋಡಿದರೆ ಚಾಮರಾಜನಗರದಲ್ಲಿ ಬಹಳಷ್ಟು ಪ್ರವಾಸಿ ತಾಣಗಳಿವೆ. ಜತೆಗೆ ಜಲಾಶಯಗಳಿವೆ. ಆದರೆ ಕೆಲವು ವರ್ಷಗಳ ಹಿಂದೆ ಬರದಿಂದಾಗಿ ಕೆಲವು ಜಲಾಶಯಗಳಲ್ಲಿ ನೀರು ಕಾಣಿಸುತ್ತಿರಲಿಲ್ಲ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಮಳೆ ಬೀಳುತ್ತಿರುವುದರಿಂದ ಜಲಾಶಯದಲ್ಲಿ ನೀರು ಕಾಣಿಸುತ್ತಿದೆ. ಇದು ಪ್ರವಾಸಿಗರಿಗೆ ಖುಷಿ ಕೊಡುತ್ತಿದೆ.

ಈ ಜಲಾಶಯವನ್ನು ಸುಮಾರು 15,100 ಎಕರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರೊದಗಿಸುವ ಉದ್ದೇಶದಿಂದ ನಿಸರ್ಗ ರಮಣೀಯ ಬೆಟ್ಟ ಗುಡ್ಡಗಳ ನಡುವೆ ನಿರ್ಮಾಣ ಮಾಡಲಾಗಿದೆ. ಇದು ನೀರಾವರಿ ಉದ್ದೇಶಕ್ಕೆ ನಿರ್ಮಾಣ ಮಾಡಲಾಗಿದ್ದರೂ ಸೌಂದರ್ಯವನ್ನು ತನ್ನೊಡಲಲ್ಲಿಟ್ಟು ಕೊಂಡಿರುವ ಕಾರಣದಿಂದ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಆದರೆ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ. ಜತೆಗೆ ಇಲ್ಲಿಗೆ ತೆರಳುವ ಪ್ರವಾಸಿಗರಿಗೆ ಯಾವುದೇ ಸುರಕ್ಷತೆ ಇಲ್ಲದಿರುವುದು ಭಯವನ್ನುಂಟು ಮಾಡಿದೆ.

ಜಲಾಶಯದ ಮೇಲ್ಭಾಗದಲ್ಲಿ ವೀಕ್ಷಣಾ ಗೋಪುರವಿದ್ದು, ಇದು ಪುಂಡ ಪೋಕರಿಗಳ ಆಶ್ರಯ ತಾಣವಾಗಿದ್ದು, ಇಲ್ಲಿಗೆ ಹೆಣ್ಣು ಮಕ್ಕಳು ತೆರಳಲು ಭಯಪಡುವಂತಾಗಿದೆ. ಸಂಬಂಧಿಸಿದವರು ಇತ್ತ ಗಮನಹರಿಸಿದ್ದೇ ಗುಂಡಾಲ್ ಜಲಾಶಯವನ್ನು ಒಂದು ಸುಂದರ ಪ್ರವಾಸಿತಾಣವನ್ನಾಗಿ ಮಾಡಲು ಅವಕಾಶವಿದೆ. ಜಿಲ್ಲೆಯಲ್ಲಿ ಈಗಾಗಲೇ ಖ್ಯಾತಿಯನ್ನು ಪಡೆದ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಹೊಗೇನಕಲ್ ಫಾಲ್ಸ್, ಶಿವಸಮುದ್ರ ಮೊದಲಾದ ಪ್ರವಾಸಿ ತಾಣಗಳಿದ್ದು, ಇಲ್ಲಿಗೆ ಆಗಾಗ್ಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುತ್ತಾರೆ. ಒಂದು ವೇಳೆ ಗುಂಡಾಲ್ ಜಲಾಶಯವನ್ನು ಅಭಿವೃದ್ಧಿ ಗೊಳಿಸಿದ್ದೇ ಆದರೆ ಪ್ರವಾಸಿಗರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಸಾಧ್ಯವಿದೆ. ಇದರಿಂದ ಪ್ರವಾಸೋದ್ಯವೂ ಜಿಲ್ಲೆಯಲ್ಲಿ ಅಭಿವೃದ್ಧಿಯಾಗಲು ಸಾಧ್ಯವಿದೆ.