ಹುಚ್ಚಪ್ಪನಕಟ್ಟೆಯಲ್ಲೊಂದು ಧುಮ್ಮಿಕ್ಕುವ ಜಲಧಾರೆ

ಹುಚ್ಚಪ್ಪನಕಟ್ಟೆಯಲ್ಲೊಂದು ಧುಮ್ಮಿಕ್ಕುವ ಜಲಧಾರೆ

LK   ¦    May 26, 2019 09:10:21 AM (IST)
ಹುಚ್ಚಪ್ಪನಕಟ್ಟೆಯಲ್ಲೊಂದು ಧುಮ್ಮಿಕ್ಕುವ ಜಲಧಾರೆ

ಚಾಮರಾಜನಗರ: ಕೆರೆಯೊಂದಕ್ಕೆ ಬ್ರಿಟೀಷರ ಕಾಲದಲ್ಲಿ ಕಟ್ಟಲಾಗಿದ್ದ ಹುಚ್ಚಪ್ಪನಕಟ್ಟೆ ಇದೀಗ ಜಲಪಾತವಾಗಿ ಮಾರ್ಪಾಡು ಗೊಂಡಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯತೊಡಗಿದೆ.

ಹಾಗೆ ನೋಡಿದರೆ ಇವತ್ತು ಜಲಧಾರೆಯಾಗಿ ಧುಮುಕುತ್ತಿರುವ ಹುಚ್ಚಪ್ಪನಕಟ್ಟೆ ಒಂದು ಕೆರೆಯಷ್ಟೆ ಆದರೆ ಇದೀಗ ಇಲ್ಲಿ ಜಲಧಾರೆ ನಿರ್ಮಾಣವಾಗುವ ಮೂಲಕ ಒಂದಷ್ಟು ಪ್ರವಾಸಿಗರನ್ನು ತನ್ನತ್ತ ಬರಮಾಡಿಕೊಳ್ಳುತ್ತಿದೆ.

ಚಾಮರಾಜನಗರ ತಾಲೂಕಿನ ಹೊನ್ನಳ್ಳಿಗೂ ಮಧ್ಯ ಮಾರ್ಗದಲ್ಲಿನ ಹುಚ್ಚಪ್ಪನಕಟ್ಟೆಯಲ್ಲಿ ಕಾಣಸಿಗುವ ಈ ಜಲಪಾತ ಮಳೆಗಾಲದಲ್ಲಿ ಕಾಣಿಸಿಕೊಳ್ಳದೆ ಬೇಸಿಗೆಯಲ್ಲಿ ಸೃಷ್ಟಿಯಾಗಿದ್ದು ಎಲ್ಲರ ಅಚ್ಚರಿಗೆ ಕಾರಣಬಹುದು.

ಹುಚ್ಚಪ್ಪನಕಟ್ಟೆಯು ಚಾಮರಾಜನಗರದಿಂದ ಸುಮಾರು 18 ಕಿ.ಮೀ. ದೂರದಲ್ಲಿ ಹರದನಹಳ್ಳಿ, ಅಮಚವಾಡಿ, ಹೊನ್ನಳ್ಳಿಗೂ ಮಧ್ಯ ಮಾರ್ಗದಲ್ಲಿದೆ. ಇದು ಹರಿಯುವ ನೀರಿನಿಂದ ಸೃಷ್ಠಿಯಾದ ಜಲಧಾರೆಯಲ್ಲ. ಗುಡ್ಡಗಳ ನಡುವೆ ನೀರು ಸಂಗ್ರಹವಾಗುತ್ತಿದ್ದ ಕೆರೆಗೆ ಬ್ರಿಟೀಷರ ಕಾಲದಲ್ಲಿ ತಡೆಗೋಡೆಯನ್ನು ನಿರ್ಮಿಸಲಾಗಿದ್ದು, ಇದರಲ್ಲಿ ಮಳೆಗಾಲದ ವೇಳೆ ನೀರು ಸಂಗ್ರಹವಾಗುತ್ತಿತ್ತಾದರೂ ನೀರು ಮಾತ್ರ ತುಂಬಿ ಹರಿದಿದ್ದು, ಕಡಿಮೆಯೇ ಹೀಗಾಗಿ ನೀರು ಧುಮ್ಮಿಕ್ಕುವ ಸುಂದರ ದೃಶ್ಯ ಯಾರಿಗೂ ಲಭ್ಯವಾಗಿರಲಿಲ್ಲ.

ಇದೀಗ ಮಳೆ ಬಾರದೆ ನೀರು ಹೇಗೆ ಹುಚ್ಚಪ್ಪನಕಟ್ಟೆಯಿಂದ ಧುಮ್ಮಿಕ್ಕುತ್ತಿದೆ ಎಂಬ ಪ್ರಶ್ನೆಗೆ ಉತ್ತರವೂ ದೊರೆತಿದೆ. ಈ ವ್ಯಾಪ್ತಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಈ ಹುಚ್ಚಪ್ಪನಕಟ್ಟೆ ಕೆರೆಗೂ ಕಬಿನಿ ನದಿಯಿಂದ ನೀರು ಹರಿಸಲಾಗಿದೆ. ಹೀಗಾಗಿ ಕೆರೆಯಲ್ಲಿ ನೀರು ತುಂಬಿ ತಡೆಗೋಡೆಯ ಮೇಲ್ಭಾಗದಿಂದ ನೀರು ಧುಮ್ಮಿಕ್ಕಿ ಹರಿಯುತ್ತಿದ್ದು, ಅದು ನೋಡುಗರ ಜಲಧಾರೆಯ ಮಾದರಿಯಲ್ಲಿ ಸುರಿಯುತ್ತಾ ನೋಡುಗರನ್ನು ಸೆಳೆಯುತ್ತಿದೆ. ಈ ವಿಚಾರ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಇದೀಗ ಬೇಸಿಗೆ ಧಗೆಯಿಂದಾಗಿ ಜನ ಬಸವಳಿದಿದ್ದು ದೇಹವನ್ನು ತಂಪು ಮಾಡಿಕೊಳ್ಳಲು ಇಲ್ಲಿಗೆ ಬರುತ್ತಿದ್ದಾರೆ. ಸುರಿಯುವ ಜಲಧಾರೆಗೆ ತಲೆಕೊಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾರೆ. ಈಗಾಗಲೇ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸಲಾಗಿದ್ದು, ಅದರಂತೆ ಹುಚ್ಚಪ್ಪನ ಕೆರೆಗೂ ನೀರು ಹರಿದು ಬಂದಿದ್ದು, ಅದು ತುಂಬಿ ಹರಿಯುತ್ತಿರುವುದರಿಂದ ಸುಂದರ ದೃಶ್ಯ ನಿರ್ಮಾಣವಾಗಿದೆ.