ಚಾರಣಿಗರಿಗೆ ಮುದನೀಡುವ ಶಿಡ್ಲಮಲ್ಲಿಕಾರ್ಜುನ ಬೆಟ್ಟ!

ಚಾರಣಿಗರಿಗೆ ಮುದನೀಡುವ ಶಿಡ್ಲಮಲ್ಲಿಕಾರ್ಜುನ ಬೆಟ್ಟ!

LK   ¦    Nov 23, 2020 10:10:45 AM (IST)
ಚಾರಣಿಗರಿಗೆ ಮುದನೀಡುವ ಶಿಡ್ಲಮಲ್ಲಿಕಾರ್ಜುನ ಬೆಟ್ಟ!

ಈಗ ಮಳೆ ಕಡಿಮೆಯಾಗಿ ಮೈನಡುಗಿಸುವ ಸಣ್ಣಗಿನ ಚಳಿ ಆರಂಭವಾಗಿದೆ. ಅದರಲ್ಲೂ ಮುಂಜಾನೆ ವೇಳೆ ಬೆಟ್ಟಗುಡ್ಡಗಳನ್ನು ಕಟ್ಟಿ ಹಾಕುವ ಮಂಜು ಸುಂದರ ನೋಟವನ್ನು ತೆರೆದಿಡುತ್ತಿದೆ.

ಇಡೀ ಪರಿಸರ ಹಸಿರು ಹಚ್ಚಡದಿಂದ ಕಂಗೊಳಿಸುತ್ತಿದ್ದರೆ ಅದರ ನಡುವೆ ಒಂದಷ್ಟು ಸಮಯಗಳನ್ನು ಕಳೆಯುವುದೇ ಒಂಥರಾ ಮಜಾ. ಹೀಗಾಗಿಯೇ ಬೆಟ್ಟಗುಡ್ಡಗಳತ್ತ ಜನ ಹೆಚ್ಚಿನ ಸಂಖ್ಯೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಹಲವಾರು ಬೆಟ್ಟಗುಡ್ಡಗಳಿದ್ದು ಅವು ಪ್ರೇಕ್ಷಣೀಯ ತಾಣಗಳಾಗಿ ಗಮನಸೆಳೆಯುತ್ತಿವೆ. ಇಂತಹ ತಾಣಗಳ ಪೈಕಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಶಿಡ್ಲಮಲ್ಲಿಕಾರ್ಜುನ ಬೆಟ್ಟವೂ ಒಂದಾಗಿದೆ. ಇದೀಗ ಈ ಬೆಟ್ಟದತ್ತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತರು ಎಲ್ಲರೂ ಆಗಮಿಸುತ್ತಿದ್ದು, ಅದರಲ್ಲೂ ಟಿಬೆಟಿಯನ್ಸ್ ತುಸು ಹೆಚ್ಚಾಗಿಯೇ ಬರುತ್ತಿರುವುದು ಕಂಡು ಬರುತ್ತಿದೆ.

ಕೊಡಗು ಮತ್ತು ಮೈಸೂರಿಗೆ ಗಡಿಭಾಗದಲ್ಲಿರುವ ಈ ಬೆಟ್ಟವು ನಿಸರ್ಗ ಸೌಂದರ್ಯದ ಗಣಿಯಾಗಿದೆ. ಬೆಟ್ಟದ ಮೇಲ್ಭಾಗದಲ್ಲಿರುವ ಮಲ್ಲಿಕಾರ್ಜುನ ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದೆಂದು ಹೇಳಲಾಗಿದ್ದು, ಆಕರ್ಷಕವಾಗಿರುವ ಈ ದೇವಾಲಯದ ಬಳಿಗೆ ಹೋಗಬೇಕಾದರೆ ಸುಮಾರು 3600 ಮೆಟ್ಟಿಲನ್ನು ಹತ್ತಿಹೋಗಬೇಕು. ಈ ಮೆಟ್ಟಿಲೇರಲೆಂದೇ ಜನ ಇಲ್ಲಿಗೆ ಬರುತ್ತಾರೆ. ಅದರಲ್ಲೂ ನಿಸರ್ಗದ ಸುಂದರ ದೃಶ್ಯಗಳನ್ನು ಸವಿಯುತ್ತಾ ತೆರಳುತ್ತಿದ್ದರೆ ಮೆಟ್ಟಿಲೇರುವ ಆಯಾಸವೇ ಗೊತ್ತಾಗುವುದಿಲ್ಲ.

ಬೆಟ್ಟವನ್ನೇರಿ ಮೇಲ್ಭಾಗ ತಲುಪಿದಾಗ ಅಲ್ಲಿಂದ ಕಂಡು ಬರುವ ಸುಂದರ ದೃಶ್ಯಗಳು ನಮ್ಮ ಎಲ್ಲ ನೋವನ್ನು ದೂರ ಸರಿಸಿ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಒಂದೆಡೆ ಮಲೆನಾಡು ಮತ್ತೊಂದೆಡೆ ಅರೆಮಲೆನಾಡು. ಇದೆರಡರ ಸುಂದರ ದೃಶ್ಯಗಳ ಸಮ್ಮಿಲನ ಕಣ್ಮನ ಸೆಳೆಯುತ್ತದೆ. ಈಗಂತೂ ಇಲ್ಲಿ ಮುಂಜಾನೆ ಕಂಡುಬರುವ ಮಂಜಿನ ಆಟ ಖುಷಿಕೊಡುತ್ತದೆ. ಇಡೀ ಬೆಟ್ಟವನ್ನೇ ಆವರಿಸುವ ಮಂಜು ಮತ್ತು ಅದನ್ನು ಸೀಳಿ ಬರುವ ಸೂರ್ಯ ರಶ್ಮಿ ಮೈಮನವನ್ನು ಪುಳಕಗೊಳಿಸುತ್ತದೆ. ಬೆಟ್ಟದ ಸುತ್ತಲಿನ ಕಾನನದಲ್ಲಿ ಪ್ರಾಣಿಪಕ್ಷಿಗಳು ಬೀಡು ಬಿಟ್ಟಿದ್ದು ಆಗೊಮ್ಮೆ ಈಗೊಮ್ಮೆ ನವಿಲುಗಳು ಭೇಟಿ ನೀಡುವ ಪ್ರವಾಸಿಗರ ಕಣ್ಣಿಗೆ ಬಿದ್ದು ಅಚ್ಚರಿ ಮೂಡಿಸುತ್ತವೆ.

ಇನ್ನು ಹಕ್ಕಿಗಳ ಚಿಲಿಪಿಲಿ, ಪ್ರಶಾಂತ ವಾತಾವರಣ ಮುದನೀಡುತ್ತದೆ. ಮುಂಜಾನೆ ಬೆಟ್ಟವೇರಿದ್ದೇ ಆದರೆ ಸಿಗುವ ಅನುಭವ ವರ್ಣಿಸಲಾಗದ್ದಾಗಿರುತ್ತದೆ. ಸದಾ ಪಟ್ಟಣದ ಗೌಜು ಗದ್ದಲಗಳಿಗೆ ಒಳಗಾಗಿ ಅಯ್ಯೋ ಒಂದಷ್ಟು ಸಮಯವನ್ನಾದರೂ ಪ್ರಶಾಂತ ಸ್ಥಳದಲ್ಲಿ ಕಳೆದು ಬರೋಣ ಎಂದು ಯೋಚಿಸುವ ಮಂದಿ ಧಾರಾಳವಾಗಿ ಶಿಡ್ಲಮಲ್ಲಿಕಾರ್ಜುನ ಬೆಟ್ಟಕ್ಕೆ ತೆರಳಬಹುದಾಗಿದ್ದು, ಬೆಟ್ಟದ ಮೇಲಿನ ಮಲ್ಲಿಕಾರ್ಜುನಸ್ವಾಮಿ ಸುತ್ತಮುತ್ತಲಿನ ಜನರ ಆರಾಧ್ಯದೈವನಾಗಿ ಕಾಪಾಡುತ್ತಿದ್ದಾನೆ.

ಸದಾ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿ ಸದಾ ಪೇಟೆ ಪಟ್ಟಣಗಳ ಗದ್ದಲದಲ್ಲಿ ದಿನ ಕಳೆಯುವವರು ಬಿಡುವು ಮಾಡಿಕೊಂಡು ಬೆಟ್ಟದಪುರದ ಶಿಡ್ಲಮಲ್ಲಿಕಾರ್ಜುನ ಬೆಟ್ಟಕ್ಕೆ ಬಂದರೆ ಒಂದಷ್ಟು ರಿಲ್ಯಾಕ್ಸ್ ಆಗುವುದರಲ್ಲಿ ಎರಡು ಮಾತಿಲ್ಲ.