`ಚಿಮ್ಮ’ ಸೇನಾ ದಂಡನಾಯಕನಾದ ಕಥೆ…

`ಚಿಮ್ಮ’ ಸೇನಾ ದಂಡನಾಯಕನಾದ ಕಥೆ…

B.M. Lavakumar   ¦    Jan 28, 2020 05:31:06 PM (IST)
`ಚಿಮ್ಮ’ ಸೇನಾ ದಂಡನಾಯಕನಾದ ಕಥೆ…

ಬಾಲ್ಯದಲ್ಲಿ ಸದಾ ತುಂಟಾಟ ನಡೆಸುತ್ತಾ ಇಡೀ ಮನೆಯವರ ಮೆಚ್ಚುಗೆಗೆ ಪಾತ್ರರಾಗಿ ಚಿಮ್ಮ ಎಂದೇ ಕರೆಯಿಸಿಕೊಳ್ಳುತ್ತಿದ್ದ ಹುಡುಗ ಮುಂದೊಂದು ದಿನ ಸೇನಾ ದಂಡನಾಯಕನಾಗಿ ಇಡೀ ದೇಶವೇ ಮರೆಯದ ಮಾಣಿಕ್ಯನಾಗಿ ಮೆರೆಯುತ್ತಾನೆ ಎಂದು ಯಾರು ನಂಬಿರಲಿಲ್ಲ. ಅವರು ಬೇರೆ ಯಾರೂ ಅಲ್ಲ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ.

ಕೊಡಂದೆರ ಮಾದಪ್ಪರರ ಪುತ್ರರಾಗಿ  1899 ಜನವರಿ 28ರಂದು ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ಜನಿಸಿದ ಕಾರ್ಯಪ್ಪರವರು  ಬಾಲ್ಯದಲ್ಲಿಯೇ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಕನಸು ಕಂಡಿದ್ದರು. ಹತ್ತಿರದಿಂದ ಅವರ ತುಂಟಾಟಗಳನ್ನು ನೋಡುತ್ತಾ ಖುಷಿ ಪಡುತ್ತಿದ್ದ ಬಂಧುವರ್ಗದವರು ಪ್ರೀತಿಯಿಂದ "ಚಿಮ್ಮ" ಎಂದೇ ಕರೆಯುತ್ತಿದ್ದರು.

ಇವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲ್ ಅಂದರೆ ಈಗಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯಿತು. ಆ ನಂತರ ಮುಂದಿನ ವಿದ್ಯಾಭ್ಯಾಸವನ್ನು ಅವರು ಮದ್ರಾಸಿನ ಫ್ರೆಸಿಡೆನ್ಸಿ ಕಾಲೇಜಿನಲ್ಲಿ ಮಾಡಿದರು. ಕಾಲೇಜಿನ ದಿನಗಳಲ್ಲಿ ವಿವಿಧ ಪುಸ್ತಕಗಳನ್ನು ಓದುತ್ತಿದ್ದ ಅವರು ನಾಟಕಗಳನ್ನು ಇಷ್ಟಪಡುತ್ತಿದ್ದರು. ಕ್ರೀಡೆÀಯಲ್ಲಿ ಆಸಕ್ತಿ ಹೊಂದಿದ್ದ ಅವರು ಹಾಕಿ ಮತ್ತು ಟೆನ್ನಿಸ್‍ನಂತಹ  ಆಟಗಳನ್ನು ಆಗಾಗ್ಗೆ ಆಡುತ್ತಿದ್ದರು. ಇದರ ಜೊತೆಗೆ ಸಂಗೀತ ಮತ್ತು ಜಾದು ಕಡೆಗೂ ಒಲವು ತೋರುತ್ತಿದ್ದರು.

ಓದಿನ ನಂತರ ಅವರಿಗೆ ಉದ್ಯೋಗ ಮಾಡಲು ಬೇರೆ, ಬೇರೆ ಹುದ್ದೆಗಳು ಅರಸಿ ಬರುವುದೇನು ಕಷ್ಟವಾಗಿರಲಿಲ್ಲ. ಆದರೆ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಅದಮ್ಯ ಉತ್ಸಾಹ ಅವರಲ್ಲಿದ್ದುದರಿಂದ ಅವರು ಸೇನೆಯ ನೇಮಕಾತಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದರು. ಅಲ್ಲಿ ಅವರು ಸೇನೆಗೆ ನೇಮಕಗೊಂಡಿದ್ದರು. 1917ರ ಪ್ರಥಮ ವಿಶ್ವ ಯುದ್ಧದ ವೇಳೆಗೆ ಅವರಿಗೆ ವೀರಯೋಧನಾಗಿ ಹೋರಾಡುವ ಅವಕಾಶ ಒದಗಿಬಂದಿತ್ತು. 1918ರಲ್ಲಿ ಮೊದಲನೆಯ ವಿಶ್ವಯುದ್ಧ ಮುಗಿದಾಗ ಭಾರತದ ರಾಜಕೀಯ ನಾಯಕರು ಭಾರತೀಯರನ್ನೂ ಬ್ರಿಟಿಷ್ ಆಡಳಿದ ಕಿಂಗ್ಸ್ ಕಮಿಷನ್‍ನಲ್ಲಿ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸತೊಡಗಿದರು. ಆ ಸಂದರ್ಭ ನಡೆದ ಕಠಿಣ ಪರೀಕ್ಷೆಗಳ ಬಳಿಕ ಆಯ್ಕೆಯಾದ ಬೆರಳೆಣಿಕೆಯ ಮಂದಿಯಲ್ಲಿ ಕಾರ್ಯಪ್ಪ ಒಬ್ಬರಾಗಿದ್ದರು, ಅವರು ಸೇನೆಯ ಕಠಿಣ ತರಬೇತಿಯನ್ನು ಮುಗಿಸಿ ಇಂದೂರಿನ ಡೆಲಿ ಕೆಡೆಟ್ ಕಾಲೇಜಿನಲ್ಲಿ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ ಮೊದಲ ವರ್ಗಕ್ಕೆ ಸೇರಿಕೊಂಡರು ಮತ್ತು ಮುಂಬಯಿಯಲ್ಲಿದ್ದ ಕರ್ನಾಟಿಕ್ ಪದಾತಿದಳಕ್ಕೆ ನಿಯುಕ್ತಿಗೊಂಡರು.

ಮೆಸೊಪೆಟಾಮಿಯಾ(ಈಗಿನ ಇರಾಕ್)ದಲ್ಲಿದ್ದ 37(ವೇಲ್ಸ್ ರಾಜಕುಮಾರನ) ಡೊಗ್ರಾ ದಳದೊಂದಿಗೆ ಸೈನ್ಯದ ಸಕ್ರಿಯ ಸೇವೆಯನ್ನು ಪ್ರಾರಂಭಿಸಿದರು. ನಂತರ ಇವರನ್ನು 2ನೇ ರಾಜಪೂತ್  ಲಘು ಪದಾತಿದಳ(ವಿಕ್ಟೊರಿಯಾ ರಾಣಿಯ ಸ್ವಂತ)ಕ್ಕೆ ವರ್ಗಾಯಿಸಲಾಯಿತು. 1933ರಲ್ಲಿ ಕ್ವೆಟ್ಟಾದಲ್ಲಿದ್ದ ಸಾಫ್ಟ್ ಕಾಲೇಜಿನಲ್ಲಿ ತರಬೇತಿ ಪಡೆದ ಇವರು ಈ ತರಬೇತಿಯನ್ನು ಪಡೆದ ಮೊದಲ ಭಾರತೀಯ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.  1946ರಲ್ಲಿ ಫ್ರಂಟೀಯರ್  ಬ್ರಿಗೇಡ್ ಗುಂಪಿನ ಬ್ರಿಗೇಡಿಯರರಾಗಿ ಭಡ್ತಿ ಪಡೆದ ಇವರು ಕರ್ನಲ್ ಅಯೂಬ್ ಖಾನ್ (ಸ್ವಾತಂತ್ರ್ಯ ಬಳಿಕ ಪಾಕಿಸ್ತಾನದ ಸೈನ್ಯದ ಫೀಲ್ಡ್ ಮಾರ್ಷಲ್ ಮತ್ತು 1962ರಿಂದ 1969ರವರೆಗೆ ರಾಷ್ಟ್ರಪತಿಯಾಗಿದ್ದರು) ಇವರ ಅಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

ಕಾರ್ಯಪ್ಪನವರು ತಮ್ಮ ಸೇವಾವಧಿಯಲ್ಲಿ ವಿವಿಧ ದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು,  1941-42ರ ವೇಳೆಯಲ್ಲಿ  ಸಿರಿಯಾ ಮತ್ತು ಇರಾನ್‍ ದೇಶಗಳಲ್ಲಿಯೂ, 1943-44ರಲ್ಲಿ ಬರ್ಮಾದಲ್ಲಿ ಹಾಗೂ ವಝಿರಿಸ್ತಾನದಲ್ಲಿ ಕಾರ್ಯನಿರ್ವಹಿಸಿದರು. 1942ರಲ್ಲಿ ಒಂದು ತುಕಡಿಯನ್ನು ಇವರ ಸ್ವಾಧೀನಕ್ಕೆ ಒಪ್ಪಿಸಲಾಯಿತು, ಅವತ್ತಿನ ದಿನಕ್ಕೆ ಇಂತಹ ಅಧಿಕಾರ ಪಡೆದ ಮೊದಲ ಭಾರತೀಯ ಅಧಿಕಾರಿ ಅವರಾಗಿದ್ದರು. ಆದಾದ ನಂತರ ಬರ್ಮಾದಿಂದ ಜಪಾನೀಯರನ್ನು ತೆರವುಗೊಳಿಸುವ ಸಲುವಾಗಿ 26ನೆಯ ಡಿವಿಜನ್ ನಲ್ಲಿ ಕೆಲಸ ನಿರ್ವಹಿಸಿದ ಅವರು ಅದನ್ನು  ಯಶಸ್ವಿಗೊಳಿಸಿದಾಗ ಅವರಿಗೆ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್  ಪ್ರಶಸ್ತಿಯನ್ನು ನೀಡಲಾಯಿತು.

 

1947ರಲ್ಲಿ ಯುನೈಟೆಡ್ ಕಿಂಗ್‍ಡಮ್‍ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿಯನ್ನು ಪಡೆದ ಅವರು, ಅಲ್ಲಿಯೂ ಆ ತರಬೇತಿಯನ್ನು ಪಡೆದ ಮೊದಲ ಭಾರತೀಯರಾದರು. ಸ್ವಾತಂತ್ರ್ಯ ದೊರೆತು ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಕಾರ್ಯಪ್ಪನವರು ಭಾರತದ ಸೈನ್ಯ ವಿಭಜನೆಯನ್ನು ಮತ್ತು ಸೈನ್ಯದ ಆಸ್ತಿಯ ವಿಭಜನೆಯನ್ನು ಎರಡು ದೇಶಗಳಿಗೆ ಸಮಾಧಾನವಾಗುವ ರೀತಿಯಲ್ಲಿ ನೆರವೇರಿಸಿದರು.

ಸ್ವಾತಂತ್ರ್ಯ ನಂತರ ಭಾರತದ ಬಳಿಕ ಕಾರ್ಯಪ್ಪನವರು ಮೇಜರ್ ಜನರಲ್ ಪದವಿಗೆ ಏರಿದರಲ್ಲದೆ, ಸೈನ್ಯದ ಉಪ ದಂಡನಾಯಕರಾದರು. ನಂತರ ಲೆಫ್ಟನೆಂಟ್ ಜನರಲ್ ಎಂದು ಪದೊನ್ನತಿಗೊಳಿಸಿ ಪೂರ್ವದ ಸೈನ್ಯದ ಕಮಾಂಡರ್ ಆದರು. 1947ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಪ್ರಾರಂಭವಾದಾಗ ಇವರನ್ನು ಪಶ್ಚಿಮದ ಸೈನ್ಯದ ಮುಖ್ಯ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಝಿಲಾ, ದ್ರಾಸ್ ಮತ್ತು ಕಾರ್ಗಿಲ್ ಗಳನ್ನು ವಾಪಸ್ ಪಡೆಯುವಲ್ಲಿಯೂ ಯಶಸ್ವಿಯಾದರು. 1983ರಲ್ಲಿ ಭಾರತದ ಮಹಾದಂಡನಾಯಕ(ಫೀಲ್ಡ್‍ಮಾರ್ಷಲ್)ರಾದರು. ಇವರು ನಿವೃತ್ತಿಯ ಬಳಿಕ ಮಡಿಕೇರಿಯ ನಿಸರ್ಗ ಸುಂದರ ಸ್ಥಳವಾದ ರೋಷನಾರದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದರು. ಕೊನೆಯವರೆಗೂ ಶಿಸ್ತಿನಿಂದಲೇ ಬದುಕಿದ ಅವರು 1993ರ ಮೇ 15ರಂದು ನಮ್ಮನ್ನಗಲಿದರು. ಇವತ್ತು ಕಾರ್ಯಪ್ಪರವರು ನಮ್ಮ ಮುಂದೆ ಇಲ್ಲದಿರಬಹುದು ಆದರೆ ಅವರ ಧೀರತನ, ಶಿಸ್ತು, ಪರಿಸರ ಸಂರಕ್ಷಣೆ, ದೇಶಕ್ಕೆ ನೀಡಿದ ಸೇವೆ ಸ್ಮರಿಸುತ್ತಲೇ ಇರುತ್ತೇವೆ. ಅಷ್ಟೇ ಅಲ್ಲ ಕೊಡಗು ಬಿಟ್ಟು ಹೊರ ಹೋದ ಸಂದರ್ಭ ಅಲ್ಲಿನ ಜನರನ್ನು ಪರಿಚಯಿಸಿಕೊಂಡ ತಕ್ಷಣ ಅವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ನೆನಪು ಮಾಡಿಕೊಳುವುದು ಸಹಜ.