ಪ್ರಕೃತಿಯ ನಗು ಮರೆಯಾದರೆ...

ಪ್ರಕೃತಿಯ ನಗು ಮರೆಯಾದರೆ...

Megha R Sanadi   ¦    Sep 30, 2020 11:17:28 AM (IST)
ಪ್ರಕೃತಿಯ ನಗು ಮರೆಯಾದರೆ...

ಪ್ರಪಂಚದ ಪ್ರತಿಯೊಂದು ಜೀವಿಯೂ ತನ್ನದೇಯಾದ ರೀತಿಯಲ್ಲಿ ಭಾವನೆಗಳನ್ನು ತೋರ್ಪಡಿಸುತ್ತವೆ. ಮನುಷ್ಯ ಮಾತಿನ ಮೂಲಕ, ಮೂಕ ಪ್ರಾಣಿಗಳು ಭಾವನೆಗಳ ಮೂಲಕ, ಮರ-ಗಿಡಗಳು ಹಸಿರನ್ನು ಹಾಸುವುದರ ಮುಲಕ ಅಂತೆಯೇ ಪ್ರಕೃತಿ ತನ್ನಲಿ ಬದಲಾವಣೆಗಳನ್ನು ತೋರುವುದರ ಮೂಲಕ. ಹೀಗೆ ಈ ಭೂಮಿ ಮೇಲೆ ಇರುವ ಪ್ರತಿಯೊಂದು ಜೀವಿಯು ಒಂದಲ್ಲಾ ಒಂದು ರೀತಿಯಲ್ಲಿ ತಮ್ಮೊಳಗೆ ಹುದುಗಿದ ಭಾವನೆಗಳ ಗಂಟನ್ನು ಬಿಚ್ಚಿ ಎಲ್ಲರೆದುರು ಇಡುತ್ತದೆ.

ಭಾವನೆಗಳನ್ನು ಪ್ರವಾಹದಂತೆ, ಹೂವಿನಂತೆ, ಹಕ್ಕಿಯಂತೆ, ಮಳೆಯಂತೆ ಹೀಗೆ ಹಲವಾರು ರೀತಿಯಲ್ಲಿ ಹೋಲಿಸಿ ಹೇಳಿದ್ದಾರೆ. ಇವು ಎಲ್ಲವೂ ಸತ್ಯ. ಏಕೆಂದರೆ ಭಾವನೆಗಳನ್ನು ಹರಿಯಲು ಬಿಟ್ಟರೆ ನದಿಯಂತೆ, ಹಾರಸಿದರೆ ಹಕ್ಕಿಯಾಗಿ ಬಾನಂಚಲಿ ಹಾರುತ್ತದೆ, ಹಾಗೆಯೇ ಅದನ್ನು ಬಂದಿಯಾಗಿಡಲು ಪ್ರಯತ್ನಿಸಿದರೆ ಒಂದಲ್ಲಾ ಒಂದು ದಿನ ಕಟ್ಟೆಯನ್ನು ಒಡೆದು, ನುಗ್ಗಿ ಬರುವ ಪ್ರವಾಹವೂ ಆಗಿ ಸುತ್ತಲಿನವರೆಲ್ಲರನ್ನು ಬಲಿತೆಗೆದುಕೊಂಡರು ಆಶ್ಚರ್ಯವೇನು ಇಲ್ಲ. ಇದು ಒಂದು ಸಾಧಾರಣ ಜೀವಿಗೆ ಮಾತ್ರ ಅನ್ವಯಿಸುವಂತಹದಲ್ಲ. ಬದಲಾಗಿ ನಮ್ಮೆಲ್ಲರ ತಾಯಿ ಎಂದೇ ಕರೆಯುವ ಪ್ರಕೃತಿ ಮಾತೆಗೂ ಅನ್ವಯಿಸುತ್ತದೆ.

ಒಂದು ಚಿಕ್ಕ ಜೀವಿಯಾದ ಇರುವೆಯೂ ತನಗೆ ತಡಿಯಲಾಗದಷ್ಟು ನೋವಾದರೆ ಅದನ್ನು ವಿರೋಧಿಸಿ, ತನಗೆ ಗಾಸಿಗೊಳಿಸಿದವರನ್ನು ಕಚ್ಚುತ್ತದೆ. ಅದಾದ ನಂತರ ಅದರ ಪ್ರಾಣ ಹೋದರೂ ಅದು ಲೆಕ್ಕಿಸುವುದಿಲ್ಲ. ಇನ್ನು ಮನುಷ್ಯನ ಬಗ್ಗೆಯಂತೂ ಹೇಳುವುದೇ ಬೇಡ. ತನಗೆ ನೋವುಂಟು ಮಾಡುವುದು ಹಾಗಿರಲಿ, ಆ ರೀತಿಯಾಗಿ ಯಾರಾದರೂ ಯೋಚಿಸಿದರೂ ಸಾಕು, ಅದಕ್ಕೆ ಪ್ರತಿಕ್ರಯಿಸಲು ಸಿದ್ದನಾಗಿ ನಿಂತಿರುತ್ತಾನೆ. ಹೀಗಿರುವಾಗ ಪ್ರಕೃತಿ ಮಾತ್ರ ತನ್ನ ಎಲ್ಲಾ ಭಾವನೆಗಳನ್ನು ಬಚ್ಚಿಟ್ಟು ನಗುವನ್ನು ಎಂದೂ ತೋರುತ್ತಿರಬೇಕು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ?

ತಾಯಿ ಎಂಬವಳು ಸಹನಾಶೀಲೆ. ಆದ್ದರಿಂದ ತನ್ನ ಮಕ್ಕಳು ಎಷ್ಟೇ ಕ್ರೌರ್ಯ ತೋರಿದರು, ಒದೆಯನ್ನು ನೀಡದೆ ಎಲ್ಲವನ್ನು ಸಹಿಸಿ, ತಿದ್ದಿ ತೀಡುತ್ತಾಳೆ. ಆದರೂ ಆಕೆ ತನ್ನ ಸಹನಾಕಡಲನ್ನು ಮೀರಿ ನಿಂತಾಗ ಎಲ್ಲರಿಗಿಂತಲೂ ಹೆಚ್ಚಾಗಿ ಬೈಯುತ್ತಾಳೆ, ಹೊಡೆಯುತ್ತಾಳೆ. ಹೀಗೆ ತನ್ನ ಅಸಹನೆಯನನ್ನು ತೋರ್ಪಡಿಸುತ್ತಾಳೆ. ಹೀಗಿರುವಾಗ ಪ್ರಕೃತಿ ಮಾತೆ ತನ್ನ ಮಕ್ಕಳನ್ನು ಲೆಕ್ಕವಿಲ್ಲದಷ್ಟು ಬಾರಿ ಕ್ಷಮಿಸಿದ್ದರೂ, ಅದಾವುದನ್ನು ಗಮನಿಸದೇ, ದುರಾಸೆಯಿಂದ ಮನುಷ್ಯ ತಾನು ಎಲ್ಲವುದನ್ನು, ಎಲ್ಲರನ್ನು ನಿಯಂತ್ರಿಸುತ್ತೇನೆ ಎಂದು ಹೊರಟ. ಪ್ರಕೃತಿ ಮಾತೆಯ ತಾಳ್ಮೆಯನ್ನು ಆಕೆಯ ದೌರ್ಭಲ್ಯ, ಆಕೆಯಿಂದ ಏನೂ ಮಾಡಲು ಸಾಧ್ಯವಿಲ್ಲ ಎಂಬ ಭ್ರಮೆಯಲ್ಲಿ ತಾನೇ ಸರ್ವಶ್ರೇಷ್ಟ ಎನ್ನಲು ಪ್ರಾರಂಭಿಸಿದ.

 

ಇದನ್ನೆಲ್ಲಾ ಅತೀ ತಾಳ್ಮೆಯಿಂದ ನೋಡುತ್ತಿದ್ದ ಪ್ರಕೃತಿ, ಮನುಷ್ಯನ ಅಹಂಕಾರವನ್ನು ಅಡಗಿಸಲು ಪ್ರಾರಂಭಿಸಿದಳು. ಭಾವನೆಗಳು ತುಂಬಿದ್ದ ಈ ಪ್ರಪಂಚದಲ್ಲಿ ಮನುಷ್ಯನ ಅಜ್ಞಾನ, ಅಟ್ಟಹಾಸಗಳಿಂದ ಭಾವರಹಿತ ಸಾಮಾಜದ ಪ್ರಾರಂಭವಾಯಿತು. ಕಾಲಕ್ಕೆ ಅನುಗುಣವಾಗಿ ಪ್ರಕೃತಿಯೂ ಬದಲಾಯಿತು. ಎಂದು ಜೀವಿಗಳು ತನ್ನ ಮಾತೆಯನ್ನೇ ಕೊಲ್ಲಲು ಪ್ರಾರಂಭಿಸಿದವೋ, ಅಂದು ತನ್ನ ರಕ್ಷಣೆಗಾಗಿ ಪ್ರಕೃತಿಯೂ ತನ್ನೆಲ್ಲಾ ಭಾವನೆಗಳನ್ನು ಪಕ್ಕದಲ್ಲಿಟ್ಟು, ಅವಳನ್ನು ಅವಳೇ ರಕ್ಷಿಸಿಕೊಳ್ಳಲು ಹೊರಟಳು. ಹಾಗೆ ಹೊರಟಿರುವ ಪ್ರತಿಫಲವೇ ಇಂದು ನಾವೆಲ್ಲರು ಅನುಭವಿಸುತ್ತಿರುವ ಪ್ರಕೃತಿ ವಿಕೋಪ.

ಎಂದು ಮಾನವೀಯತೆಯನ್ನು ಮರೆತು ಮನುಷ್ಯ ಮೃಗಕ್ಕಿಂತ ಕಡೆಯಾಗಿ ವರ್ತಿಸಲು ಪ್ರಾರಂಭಿಸಿದನೋ, ಅಂದು ಮಾತೆಯೇ ಮಕ್ಕಳನ್ನು ಸರಿದಾರಿಗೆ ತರುವ ಹಾದಿಯನ್ನು ಆರಿಸಿದಳು. ಮನುಜ ತನ್ನ ಸ್ವಾರ್ಥಕ್ಕಾಗಿ ಸುಂದರ ಭಾವನೆಗಳುಳ್ಳ ನಿಸರ್ಗವನ್ನು ನಾಶ ಮಾಡಿ, ಕಾಂಕ್ರೆಟ್ ಕಾಡಿನ ನಿರ್ಮಾಣವನ್ನು ಪ್ರಾರಂಭಿಸಿದ. ಆದರೆ ಮನುಷ್ಯನ ಅತಿ ಆಸೆಗೆ ಪ್ರಕೃತಿಯ ಉಳಿದ ಮಕ್ಕಳು ಬಲಿಯಾಗುತ್ತಾ ಬಂದವು. ಇದೆಲ್ಲವನ್ನು ಸಹಿಸುತ್ತಾ ಸುಮ್ಮನಿದ್ದ ಮಾತೆಗೆ ಅರಿವಾದದ್ದು, ತನ್ನ ಮುದ್ದು ಕಂದನೆಂದುಕೊಂಡಿದ್ದ ಮನುಜನ ಆಟವನ್ನು ಇನ್ನು ಸಹಿಸಿದರೆ ಉಳಿದ ಮಕ್ಕಳನ್ನೆಲ್ಲಾ ನಾನು ಮರಿಯ ಬೇಕೆಂದು.

ಅದೆಷ್ಟೂ ಕಾಲದಿಂದ ತನ್ನ ನೋವಿನ ರೋಧನೆಗಳನ್ನೆಲ್ಲಾ ಕಟ್ಟಿಟ್ಟು, ನಗು ಮೊಗವನ್ನು ಎಲ್ಲರಿಗೂ ತೋರುತ್ತಿದ್ದ ಪ್ರಕೃತಿ, ಮಾನವೀಯತೆಯನ್ನು ಮರೆತ ಮನುಜನಿಗೆ, ತನ್ನ ಮಾತೃ ಹೃದಯವನ್ನು ಮುರಿದ ದುರಾಸೆಯ ಮಕ್ಕಳಿಗೆ, ಮಾತೆಯೇ ಮಾರಿಯಾಗಿ ಕಾಡುತ್ತಿದ್ದಾಳೆ. ತನ್ನ ಭಾವನೆಗಳ ಕಟ್ಟೆಯನ್ನು ಪ್ರವಾಹದಂತೆ ಹರಿಬಿಟ್ಟಿದ್ದಾಳೆ. ಆಕೆಯ ನಗು ಇಂದು ಸಂಪೂರ್ಣವಾಗಿ ಮರೆಯಾಗಿದೆ. ಪ್ರಕೃತಿ ತನ್ನ ಸುಂದರ ಮುಗುಳು ನಗೆಯನ್ನು ಮರೆತು, ಕೆಂಗಣ್ಣ ಕಾಳಿಯಾಗಿ ಎಲ್ಲರ ಬಲಿಗೆ ಸಿದ್ದಳಾಗಿ ನಿಂತಿದ್ದಾಳೆ.