ಗಿನ್ ಪಿನ್ ನೋಡಲು ಆಕರ್ಷಕ…! ತಿನ್ನಲು ರುಚಿಕರ..!

ಗಿನ್ ಪಿನ್ ನೋಡಲು ಆಕರ್ಷಕ…! ತಿನ್ನಲು ರುಚಿಕರ..!

Prema H.K.   ¦    Jan 29, 2021 10:46:36 AM (IST)
ಗಿನ್ ಪಿನ್ ನೋಡಲು ಆಕರ್ಷಕ…! ತಿನ್ನಲು ರುಚಿಕರ..!

ಗಿನಿ ಪಿಗ್...ಗಿನಿ ಪಿಗ್ ಎಂದು ಕೇಳಿದ ತಕ್ಷಣ ಹಲವಾರು ಮಂದಿಯ ಮನಸ್ಸಿಗೆ ಬರುವುದು ಪಿಗ್ ಎಂದರೆ ಹಂದಿ ಎಂದು. ಆದರೆ ಇಲ್ಲಿ ವಿಷಯವಿರುವುದೇ ಬೇರೆ. ಗಿನಿ ಪಿಗ್ ಒಂದು ಜಾತಿಯ ಪ್ರಾಣಿ. ಈ ಪ್ರಾಣಿಯು ಕೇವಿಡ್ ಹಾಗೂ ಕೇವಿಯಾ ವಂಶಕ್ಕೆ ಸೇರಿದ್ದಾಗಿರುತ್ತದೆ.

ಈ ಪ್ರಾಣಿಗಳು ನೋಡುವುದಕ್ಕೆ ಆಕರ್ಷಕವಾಗಿದ್ದು, ಇವು ಸಾಕಲು ಹಾಗೂ ತಿನ್ನಲು ಯೋಗ್ಯವಾದ ಪ್ರಾಣಿಗಳು. ಇವು ಇಲಿಯ ಹಾಗೂ ಮೊಲದ ಆಕಾರವನ್ನು ಹೊಂದಿದೆ. ಇವುಗಳು ಸಂಘ ಪ್ರಾಣಿಗಳು. ಗಿನಿ ಪಿಗ್ ಸುಮಾರು 20-25 ಸೆಂ.ಮೀ ಉದ್ದವಿದ್ದು ಇವುಗಳಲ್ಲಿ 13 ತಳಿಗಳನ್ನು ನಾವು ಕಾಣಬಹುದು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಇಂಗ್ಲೀಷ್ ಶಾರ್ಟ್ ಹೇರ್, ಸಿಲ್ಕಿ, ಟೆಕ್ಸೆಲ್, ಅಭಿಸಿಯನ್, ಪೆರುವಿಯನ್, ಲಾಂಗ್ ಹೇರ್ ಮುಂತಾದವುಗಳನ್ನು ನಾವು ಕಾಣಬಹುದು.ಇವು ಸುಮಾರು 700 ರಿಂದ1200 ಗ್ರಾಮ್ ಗಳಷ್ಟು ತೂಕವಿರುತ್ತವೆ.ಇವುಗಳು ನಾಲ್ಕರಿಂದ ಐದು ವರ್ಷಗಳವರೆಗೂ ಜೀವಿಸುತ್ತವೆ. ಇವುಗಳ ಸಾಕಾಣಿಕೆ ಕೂಡ ಸುಲಭವಾಗಿದ್ದು ಇವುಗಳ ಸಾಕಾಣಿಕೆಯಿಂದ ಹೆಚ್ಚಿನ ಲಾಭವನ್ನು ಗಳಿಸಬಹುದು.

ಸಾಕಾಣಿಕೆ ವಿಧಾನ

ಗಿನಿ ಪಿಗ್ ಗಳು ಚಿಕ್ಕದಾಗಿದ್ದು. ನೋಡಲು ಸುಂದರವಾಗಿರುತ್ತವೆ. ಇವುಗಳ ಸಾಕಾಣಿಕೆಯು ಅಷ್ಟೇನು ಕಷ್ಟಕರವಾಗಿಲ್ಲ.ಇವುಗಳನ್ನು ಒಂದು ಚಿಕ್ಕ ಕೇಜ್ ನಲ್ಲಿ ಸಾಕಬಹುದು ಆದರೆ ಇವುಗಳು ಬಹಳ ಸೂಕ್ಷ್ಮವಾಗಿದ್ದು ಮೊಲದ ಕೇಜ್ ಗಳಲ್ಲಿ ಸಾಕುವುದಕ್ಕಿಂತಲೂ ಕ್ಯೂಬ್ಸ್ ಮತ್ತು ಕೋರೋಪ್ಲಾಸ್ಟ್ ಕೇಜ್ ಅಥವಾ ಸಿ ಕೇಜ್ ಗಳನ್ನು ಬಳಸುವುದು ಉತ್ತಮ. ಏಕೆಂದರೆ ಸಹಜವಾದ ಕೇಜ್ ಗಳನ್ನು ಬಳಸುವುದರಿಂದ ಅವುಗಳ ಕಾಲಿಗೆ ಗಾಯವಾಗಬಹುದು ಹಾಗೆ ಇದರಿಂದ ಬಂಬಲ್ ಫೂಟ್ ಎಂಬ ಸೋಂಕು ಉಂಟಾಗಬಹುದು. ಇದರಿಂದ  ಕ್ಯೂಬ್ಸ್ ಮತ್ತು ಕ್ಲೋರೋಪ್ಲಾಸ್ಟ್ ಗೂಡು ಅಥವಾ ಸಿ ಗೂಡುಗಳನ್ನು ಬಳಸುವುದು ಉತ್ತಮ. ಕೇಜ್ ಗಳನ್ನು ಸ್ವಚ್ಛವಾಗಿ ಇಡಬೇಕು. ಇವುಗಳಿಗೆ ಬಿಲದ ವ್ಯವಸ್ಥೆ ಮಾಡುವುದು ಇನ್ನೂ ಉತ್ತಮ.   ಇವುಗಳಿಗೆ ತಿನ್ನಲು ಸೊಪ್ಪು,ಹಸಿ ತರಕಾರಿ,ಯನ್ನು ಇವುಗಳಿಗೆ ನೀಡಬಹುದು. ಇವುಗಳ ಸಾಕಾಣಿಕೆಯು ಕಡಿಮೆ ಖರ್ಚಿನಲ್ಲಿ ಆಗುವುದು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಲಾಭ ಪಡೆಯಬಹುದು.

ಗಿನಿ ಪಿಗ್ ಸಂತಾನೋತ್ಪತ್ತಿ

ಗಿನಿ ಪಿಗ್ ಸುಮಾರು ನಾಲ್ಕರಿಂದ ಐದು ವರ್ಷಗಳ ವರೆಗೂ ಜೀವಿಸುತ್ತವೆ. ಗಿನಿ ಪಿಗ್ ಗಳು ಕಡಿಮೆ ಸಮಯದಲ್ಲಿ ಪ್ರಸವದ ವ್ಯವಸ್ಥೆ ಗೆ ಬರುತ್ತವೆ. ಇದರ ಗರ್ಭಾವಸ್ಥೆಯು 59 ರಿಂದ 68 ದಿನಗಳ ವರೆಗೂ ಇದ್ದು ತನ್ನ ಗರ್ಭಾವಸ್ಥೆಯಲ್ಲಿ ಬದನೆಕಾಯಿಯ ಹಾಗೆ ದಪ್ಪವಾದ ಆಕಾರದಲ್ಲಿ ಇರುತ್ತದೆ. ಗಂಡು ಗಿನಿ ಪಿಗ್ ಮೂರು ವಾರಕ್ಕೆ ಪ್ರಾಯಕ್ಕೆ ಬಂದರೆ ಹೆಣ್ಣು ಗಿನಿ ಪಿಗ್ ಗಳು ನಾಲ್ಕು ವಾರಕ್ಕೆ ಪ್ರಾಯಕ್ಕೆ ಬರುತ್ತವೆ. ಒಂದು ವರ್ಷಕ್ಕೆ ಗಿನಿ ಪಿಗ್ ಗರಿಷ್ಠ ಏಳು ಬಾರಿ ಮರಿಯನ್ನು ಹಾಕಬಹುದು. ಆದರೆ ಹೆಚ್ಚಿನ ಸಲ ಗರ್ಭ ಧರಿಸಿದರೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ಇವುಗಳ ಮರಿಗಳು ಹುಟ್ಟುವಾಗಲೇ ಕೂದಲು, ಹಲ್ಲು, ಉಗುರುಗಳು, ಹಾಗೂ ಆಂಶಿಕ ದೃಷ್ಟಿಯನ್ನು ಹೊಂದಿರುತ್ತವೆ. ಅದೇ ರೀತಿಯಾಗಿ ಕೂಡಲೇ ಸಂಚರಿಸುವ ಕ್ಷಮತೆಯನ್ನು ಹೊಂದಿರುತ್ತವೆ. ಹೀಗಾಗಿ ಮರಿಗಳ ಆರೈಕೆ ಸುಲಭವಾಗಿರುತ್ತದೆ.

ಗಿನಿ ಪಿಗ್ ಉಪಯೋಗ

ಈ ಗಿನಿ ಪಿಗ್ ಗಳನ್ನು ಕಾಯಿಲೆಗಳನ್ನು ಗುಣ ಪಡಿಸುವ ಕ್ರಿಯೆಗಳಲ್ಲಿ ಬಳಸಲಾಗುತ್ತಿದ್ದು ಅರಿಶಿಣ ಕಾಮಾಲೆ, ಸಂಧಿವಾತ, ಕೀಲು ನೋವು, ಹಾಗೂ ರಕ್ತ ಸಂಬಂಧಿ ಕಾಯಿಲೆಗಳನ್ನು ಗುಣ ಪಡಿಸಲು ಔಷಧಿಯಾಗಿ ಬಳಕೆಯಾಗುತ್ತದೆ. ಇದರ ಮಾಂಸದಲ್ಲಿ ಕೊಬ್ಬು ಕೊಲೆಸ್ಟ್ರಾಲ್ ಅಂಶ ಕಡಿಮೆಯಿದ್ದು ಪ್ರೊಟೀನ್ ಅಂಶ ಹೆಚ್ಚಾಗಿರುತ್ತದೆ. ಅದೇ ರೀತಿಯಾಗಿ ಕ್ಷಯ, ಚರ್ಮರೋಗ, ಕಾಲರಾ, ಹಾಗೂ ವೈರಸ್ ನಿರೋಧಕಗಳ ಸಂಶೋಧನೆಗೆ ಇವುಗಳನ್ನು ಹೆಚ್ಚು ಬಳಸಲಾಗುತ್ತದೆ.

ಗಿನಿ ಪಿಗ್  ಮಾಂಸ ಕಡು ಬಣ್ಣದಿಂದ ಕೂಡಿರುತ್ತದೆ. 150ಗ್ರಾಂಗೆ 400 ರೂಪಾಯಿ ಬೆಲೆಯನ್ನು ಹೊಂದಿರುತ್ತದೆ.  ಅದೇ ರೀತಿಯಾಗಿ ಇವುಗಳನ್ನು 800 ರಿಂದ 1000 ರೂಗಳಿಗೆ ಮಾರಲ್ಪಡುತ್ತವೆ. ಇವುಗಳನ್ನು ಬ್ಯಾಚ್ ಗಳಲ್ಲಿಯೂ ಮಾರಾಟ ಮಾಡಬಹುದು. ಆರ್ಥಿಕವಾಗಿ ದುಃಸ್ಥಿತಿಯಲ್ಲಿರುವ ಗ್ರಾಮೀಣ ಜನರಿಗೊಂದು ಪರ್ಯಾಯ ಆದಾಯ ಮೂಲವೂ ಆಗುವ ಸಾಧ್ಯತೆ ಇದೆ.

ಪ್ರೇಮ ಹೆಚ್. ಕೆ

ಪತ್ರಿಕೋದ್ಯಮ ವಿಭಾಗ

ಮಂಗಳೂರು ವಿಶ್ವವಿದ್ಯಾನಿಲಯ