ಮಧುವನ ಸ್ಮಶಾನವಲ್ಲ.. ಮೈಸೂರು ರಾಜವೈಭವದ ಕನ್ನಡಿ

ಮಧುವನ ಸ್ಮಶಾನವಲ್ಲ.. ಮೈಸೂರು ರಾಜವೈಭವದ ಕನ್ನಡಿ

LK   ¦    Oct 08, 2019 11:30:32 AM (IST)
ಮಧುವನ ಸ್ಮಶಾನವಲ್ಲ.. ಮೈಸೂರು ರಾಜವೈಭವದ ಕನ್ನಡಿ

ಮೈಸೂರಿಗೊಂದು ಸುತ್ತು ಹೊಡೆದರೆ ಇಲ್ಲಿ ಕಾಣಸಿಗುವ ನೂರಾರು ವಿಶೇಷತೆಗಳು ರಾಜವೈಭವವನ್ನು ಮೆಲುಕು ಹಾಕುವಂತೆ ಮಾಡುತ್ತದೆ. ಅರಮನೆಗಳು, ಪಾರಂಪರಿಕ ಕಟ್ಟಡಗಳು ಹೀಗೆ ಹಲವು ವಿಶೇಷತೆಗಳು ಗಮನಸೆಳೆಯುತ್ತವೆ. ಇವುಗಳೆಲ್ಲದರ ನಡುವೆ ನಮ್ಮನ್ನೊಮ್ಮೆ ಚಿಂತನೆಗೆ ಹಚ್ಚುವುದು ಆಳರಸರು ಕುರುಹುವಾಗಿರುವ ಮಧುವನ.

ಇದು ಮೈಸೂರು ರಾಜರ ಚಿರನಿದ್ದೆಯ ತಾಣವಾಗಿದ್ದರೂ ಇಲ್ಲಿ ನಿರ್ಮಾಣವಾಗಿರುವ ಸಮಾಧಿಗಳು ಮಾತ್ರ ಕಲಾವೈಭವತೆಗೆ ಸಾಕ್ಷಿಯಾಗಿವೆ. ಅದ್ಯಾಕೋ ಗೊತ್ತಿಲ್ಲ. ಎಲ್ಲವೂ ಅಭಿವೃದ್ಧಿಯಾಗಿವೆ. ಆದರೆ ರಾಜರ ಬದುಕಿನ ಇತಿಹಾಸದ ಕಥೆಗಳನ್ನು ಹೇಳಬೇಕಾಗಿದ್ದ ಅವರ ಸಮಾಧಿಗಳು ಮಾತ್ರ ಮೌನವಾಗಿಯೇ ಇವೆ. ಇದೊಂದು ಸುಂದರ ಉದ್ಯಾವನದೊಂದಿಗೆ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಬೇಕಾಗಿತ್ತು. ಆದರೆ ಅದ್ಯಾವುದೂ ಆಗದೆ ಜನರಿಂದ ದೂರವೇ ಉಳಿದು ಹೋಗಿದೆ. ಜತೆಗೆ ಪಾಳುಕೊಂಪೆಯಾಗಿದೆ ಎನ್ನುವುದೇ ವಿಷಾದದ ಸಂಗತಿ.

ಇಷ್ಟಕ್ಕೂ ಮಧುವನ ಎಂದರೆ ಮೇಲ್ನೋಟಕ್ಕೆ ಅದೊಂದು ಮೈಸೂರು ಒಡೆಯರ ಸ್ಮಶಾನವಾದರೂ ಅದು ಬರೀ ಸ್ಮಶಾನವಾಗದೆ, ಮೈಸೂರನ್ನಾಳಿದ ರಾಜರ ವೈಭವದ ಕಥೆ ಹೇಳುತ್ತದೆ. ಅಷ್ಟೇ ಅಲ್ಲ ಇಲ್ಲಿ ನಿರ್ಮಾಣವಾದ ರಾಜರ ಸಮಾಧಿಗಳು ಕಲಾವೈಭವತೆಗೆ ಸಾಕ್ಷಿಯಾಗಿವೆ.

ಇಲ್ಲೊಮ್ಮೆ ನಿಂತು ಕಣ್ಣು ಹಾಯಿಸಿ ನೋಡಿದರೆ ಮೈಸೂರನ್ನು ಆಳಿದ ಮಹಾರಾಜರು ಮತ್ತು ಅವರ ಪತ್ನಿಯರು, ಮಕ್ಕಳು, ಬಂಧುಗಳು ಹೀಗೆ ಎಲ್ಲರ ಸಮಾಧಿಗಳು ನೆನಪುಗಳನ್ನು ಹೊತ್ತು ತರುತ್ತವೆ. ಜತೆಗೆ ಮೈಸೂರನ್ನು ಕಟ್ಟಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಮುದ್ರೆಯೊತ್ತಿದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್, ಶ್ರೀ ಚಾಮರಾಜ ಒಡೆಯರ್, ಸಾಮಾಜಿಕ ಹರಿಕಾರರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಕೀರ್ತಿವಂತ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸೇರಿದಂತೆ ಹತ್ತು ಹಲವು ರಾಜರು ಇಲ್ಲಿ ಯಶೋಗಾಥೆಯಾಗಿ ನಮ್ಮ ಕಣ್ಣಮುಂದೆ ಹಾದು ಹೋಗುತ್ತಾರೆ.

ಇಲ್ಲಿ ಬೃಂದಾವನಗಳು, ಮುಖ್ಯಗೋಪುರ, ಈಶ್ವರ ದೇವಸ್ಥಾನಗಳು, ಕಲ್ಯಾಣಿಗಳು, ಮಹಿಷಾಸುರನ ವಿಗ್ರಹಗಳು ಒಳ ಆವರಣಗಳಲ್ಲಿ ಬೃಹದಾಕಾರದ ಗೋಡೆಗಳು, ಇವುಗಳಿಗೆಲ್ಲ ಮೆರಗು ನೀಡುವಂತೆ ಭವ್ಯ ಕಲಾಕೃತಿಯ ಅಲಂಕಾರಗಳು ಮೈಸೂರು ರಾಜರ ಕಲಾವೈಭವತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.

ಮೈಸೂರಿಗೆ ಬರುವ ಬಹಳಷ್ಟು ಪ್ರವಾಸಿಗರಿಗೆ ಜಗದ್ವಿಖ್ಯಾತ ಮೈಸೂರು ಅರಮನೆಗೆ ದಕ್ಷಿಣ ದಿಕ್ಕಿನಲ್ಲಿರುವ ಹಾಗೂ ನಂಜನಗೂಡು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಈ ಮಧುವನದ ಬಗ್ಗೆ ಗೊತ್ತೇ ಇಲ್ಲ. ಹೀಗಾಗಿಯೇ ಹೆಚ್ಚಿನವರು ಇತ್ತ ಹೆಜ್ಜೆ ಹಾಕದೆ ತಮ್ಮ ಪಾಡಿಗೆ ತಾವು ಹೋಗಿ ಬಿಡುತ್ತಾರೆ. ಆದರೆ ಒಮ್ಮೆ ಅತ್ತ ಹೋಗಿ ಅಲ್ಲೊಮ್ಮೆ ದಿಟ್ಟಿ ಹಾಯಿಸಿ ಬಿಟ್ಟರೆ ಒಂದು ಸುಂದರ ಲೋಕ ನಮ್ಮ ಮುಂದೆ ತೆರೆದುಕೊಳ್ಳುತ್ತಾ ಹೋಗುವುದಂತು ಸತ್ಯ.

ಇವತ್ತು ಮಧುವನ ಜನರಿಂದ ದೂರವಾಗಿ ಪಾಳು ಬಿದ್ದಂತಿದೆ. ಆದರೆ ಹಿಂದೆ ಹೀಗಿರಲಿಲ್ಲ. ಅವತ್ತಿನ ಮಧುವನದ ಬಗ್ಗೆ ನೆನಪಿಸಿಕೊಳ್ಳುವುದಾದರೆ ಮಧುವನ ನೂರಾರು ಇತಿಹಾಸದ ಕಥೆಗಳನ್ನು ಕಟ್ಟಿಕೊಂಡಿತ್ತು. ಅದೊಂದು ರಾಜರ ಸ್ಮಶಾನ ಮಾತ್ರವಾಗಿರಲಿಲ್ಲ. ಅಲ್ಲಿ ನೂರಾರು ಕಥೆಗಳು ಹುಟ್ಟಿಕೊಂಡರೆ, ಸಾವಿರಾರು. ವಿಸ್ಮಯಗಳು ರೋಮಾಂಚನಗೊಳಿಸುತ್ತವೆ.

ಇದು ಅವತ್ತಿನ ದಿನಗಳಲ್ಲಿ ಮೈಸೂರು ಅರಮನೆಯ ಖಾಸಾ ತೋಟವಾಗಿತ್ತು. ಇಲ್ಲಿ ಹತ್ತಾರು ಎಕರೆ ಜಾಗದಲ್ಲಿ ಮಧು ತುಂಬಿದ ಹಣ್ಣುಗಳನ್ನು ಬೆಳೆಯಲಾಗುತ್ತಿತ್ತು. ಅರಮನೆ, ಒಳಗಿನ ದೇವಸ್ಥಾನಗಳಿಗೆ ಬೇಕಾದ ಹೂ, ಹಣ್ಣುಗಳು ಈ ತೋಟಗಳಿಂದಲೇ ಸರಬರಾಜಾಗುತ್ತಿತ್ತು. ಎಲೆ ತೋಟಗಳಿಗೆ ಹೊಂದಿಕೊಂಡಂತೆ ಇದ್ದ ತೋಟ ಅರಮನೆಯ ರಾಜರು, ಕುಟುಂಬದವರು, ಮಕ್ಕಳಿಗೆ ಮನೋರಂಜನೆಯ ತಾಣವೂ ಆಗಿತ್ತು.

ಹೀಗಾಗಿ ಈ ಮಧುವನ ರಾಜಭಟರ ಸರ್ಪಗಾವಲಿನಲ್ಲಿತ್ತು. ಹಿರಿಯರು "ಸುಮ್ಮಾನ" ನಿದ್ರೆಯಲ್ಲಿರುವ ಅರಮನೆಯ ಈ ಜಾಗದಲ್ಲಿ ಸ್ವಯಂರಾಜರು, ಕುಟುಂಬದವರು ಬಂದು ಹೋಗುತ್ತಿದ್ದರು. ರಾಜಾಧಿರಾಜರಾದಿಯಾಗಿ ಎಲ್ಲರೂ ಮಂಡಿಯೂರಿ ಕಂಬನಿ ಮಿಡಿದು ಹೃದಯ ವೇದನೆ ನಿವೇದಿಸಿಕೊಳ್ಳುತ್ತಿದ್ದರು. ದಿನಕ್ಕೆರಡು ಬಾರಿ ಇಲ್ಲಿ ಪೂಜಾ ಕೈಂಕರ್ಯಗಳು ರಾಜ ವೈಭೋಗದಲ್ಲಿ ನಡೆಯುತ್ತಿದ್ದವು. ಇಲ್ಲಿ ಪ್ರವೇಶವೂ ಅಷ್ಟು ಸುಲಭವಾಗಿರಲಿಲ್ಲ. ಕಾವಲುಗಾರರು ಅಷ್ಟು ಭಯ ಭಕ್ತಿಯಿಂದ ಇಲ್ಲಿ ಕಾವಲು ಕಾಯುತ್ತಿದ್ದರು. ಇಲ್ಲಿನ ಬೃಂದಾವನಗಳಲ್ಲಿ ಸದಾ ದೀಪಗಳು ಉರಿಯುತ್ತಿದ್ದವು. ಘಂಟನಾದ ಸದಾ ಮೊಳಗುತ್ತಿತ್ತು.

ಯಾರೇ ಆಗಲಿ ಮಧುವನ ಪ್ರವೇಶಿಸಿದರೆ ಒಂದು ಕ್ಷಣ ಮೈಮರೆಯುತ್ತಾರೆ. ಇಲ್ಲಿನ ಕಾಮಧೇನು ಹೆಬ್ಬಾಗಿಲು ಅಚ್ಚರಿ ಮೂಡಿಸುತ್ತದೆ. ಈ ಕಾಮಧೇನು ಹೆಬ್ಬಾಗಿಲು ಹೇಗಿದೆ ಎಂದರೆ ಹೆಣ್ಣಿನ ಮುಖ, ಹಸುವಿನ ದೇಹ, ಹಂಸದ ಜೋಡಿರೆಕ್ಕೆ, ನವಿಲಿನ ಪುಚ್ಛ ಹೊಂದಿದೆ. ಇದಕ್ಕೆ ಹೊಂದಿಕೊಂಡಂತೆ ಪೂರ್ವಾಭಿಮುಖವಾಗಿ ವೀರಭದ್ರೇಶ್ವರ ದೇಗುಲವಿದೆ. ಆಳೆತ್ತರದ ಈ ವಿಗ್ರಹ ಅತ್ಯಂತ ಸುಂದರವಾಗಿದೆ. ಬೇರಲ್ಲೂ ಇಂತಹ ವಿಗ್ರಹ ಕಾಣಬರುವುದಿಲ್ಲ ಎಂಬುದೇ ಈ ದೇಗುಲದ ವಿಶೇಷ. ಇದರ ಹಿಂಭಾಗದಲ್ಲಿಯೂ ಆಂಜನೇಯನ ಗುಡಿಯಿದೆ. ಆದರೆ ಗರ್ಭಗುಡಿಯಲ್ಲಿ ವಿಗ್ರಹವಿಲ್ಲ. ಅದರ ಮುಂಭಾಗದಲ್ಲಿ ಏಕ ಶಿಲೆಯ ಬೃಹತ್ ಕಂಬವೂ ಇಲ್ಲಿದೆ. ಅದರ ಒತ್ತಾಸೆಯಾಗಿ ಮಂಟಪಗಳಿವೆ. ಮಹಿಷಾಸುರನನ್ನು ಹೋಲುವ ಬೃಹತ್ ವಿಗ್ರಹವನ್ನು ಇಲ್ಲಿ ನಿಲ್ಲಿಸಲಾಗಿದೆ

ಇನ್ನು ಸಾಂಪ್ರದಾಯಿಕ ಶೈಲಿಯ ಮಧುವನದ ಬೃಂದಾವನಗಳು ಆಕರ್ಷಣೀಯವಾಗಿವೆ. ವಿಶೇಷವೆಂದರೆ ಇಲ್ಲಿನ ಎಲ್ಲಾ ಬೃಂದಾವನಗಳು ಆಮೆಯ ಪದತಳದ ಮೇಲೆ ನಿರ್ಮಾಣವಾಗಿದೆ. ಕರಿಕಲ್ಲುಗಳಿಂದ ಕೆತ್ತನೆಯ ರಂಜನೆ ಪಡೆದಿರುವ ಸಾಲು ಸಾಲು ಚಿತ್ರಗಳು ಕಣ್ಮನ ಸೆಳೆಯುತ್ತವೆ.

ಇಲ್ಲಿ ಕಲೆ ಮೈದಳೆದು ನಿಂತಿದ್ದು ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಎಂದು ಹೇಳಲಾಗಿದೆ. ಅವರ ಕಾಲದ ದಿವಾನ್ ಪೂರ್ಣಯ್ಯರವರ ಮಾರ್ಗದರ್ಶನದಲ್ಲಿ ಏಲಕ್ಕಪ್ಪಾಚಾರಿ ಎಂಬ ಶಿಲ್ಪಕರ್ಮಿಯು ಕಲಾವೈಭವವನ್ನು ಸೃಷ್ಠಿಸಿದ್ದಾಗಿ ಹೇಳಲಾಗಿದೆ.

ಪೂರ್ವಾಭಿಮುಖವಾಗಿರು ಮಧುವನದ ಬೃಂದಾವನಗಳು ವಿಶೇಷವಾಗಿದ್ದು, ಇಲ್ಲಿರುವ ಕೃಷ್ಣರಾಜ ಒಡೆಯರ ಭವ್ಯ ಬೃಂದಾವನ ಭವ್ಯ ದೇಗುಲ ಮಾದರಿಯಲ್ಲಿದ್ದು, ಈ ಶಿಲ್ಪದ ಗರ್ಭಗುಡಿಯಲ್ಲಿ ಬೃಂದಾವನವಿದೆ. ಕರಿಕಲ್ಲುಗಳನ್ನು ಹಾಸಲಾಗಿದೆ. ಮೇಲ್ಛಾವಣಿ ಮೇಲೆ ಸುಂದರ ಗೋಪುರ ನಿರ್ಮಿಸಲಾಗಿದೆ. ಗರ್ಭಗುಡಿಯ ಸುತ್ತಲೂ ಕಲ್ಲುಗಳಿಂದಲೇ ಸುಂದರ ಗೋಡೆ ನಿರ್ಮಿಸಲಾಗಿದೆ. ಈ ಗೋಡೆಗಳಲ್ಲಿ ಕಿಟಿಕಿಗಳನ್ನು ಸ್ವಯಂ ಕಲ್ಲುಗಳನ್ನು ಕೆತ್ತಿ ಬಿಡಿಸಲಾಗಿದೆ.

ಎಡಭಾಗಕ್ಕೆ ಶ್ರೀ ಚಾಮರಾಜೇಂದ್ರ ಒಡೆಯರ ಬೃಂದಾವನ ಆಕರ್ಷಿಸುತ್ತದೆ. ಮುಂದೆ ಸಾಗಿದರೆ ಶ್ರೀ ರಣಧೀರ ಕಂಠೀರವ, ಶ್ರೀ ಚಾಮರಾಜ ಒಡೆಯರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ ತ್ರಿವಳಿ ಬೃಂದಾವನಗಳು ಕಾಣಸಿಗುತ್ತವೆ. ಶ್ರೀ ಚಾಮರಾಜ ಒಡೆಯರ್‍ರವರ ಧರ್ಮಪತ್ನಿ ಮಹಾರಾಣಿ ವಾಣಿವಿಲಾಸರ ಬೃಂದಾವನ, ರಾಜಕುಮಾರಿ ಚೆಲುವಾಜಮ್ಮಣ್ಣಿಯರ ಬೃಂದಾವನಗಳು ಗಮನಸೆಳೆಯುತ್ತವೆ. ಇನ್ನು ಇಲ್ಲಿ ಇತ್ತೀಚೆಗೆ ನಿಧರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಮಾಧಿಯೂ ಇದೆ.

ಇನ್ನು ಇಲ್ಲಿರುವ ಪ್ರತಿ ಬೃಂದಾವನಗಳು ಜಾಲಾಂಧ್ರ್ರಗಳ ಕಿಟಿಕಿ ಹೊಂದಿದ್ದು, ಹವಾನಿಯಂತ್ರಿತ ಕೊಠಡಿಗಳಂತೆ ತಣ್ಣಗೆ ತಂಪು ನೀಡುತ್ತವೆ. ಮುಮ್ಮಡಿ ಕೃಷ್ಣರಾಜ ಒಡೆಯರ ಬೃಂದಾವನದ ಶಿಲ್ಪವೈಭವ ಹೇಳತೀರದು. ಅದ್ಭುತ ವಾಸ್ತು ಶಿಲ್ಪ, ಅದರೊಟ್ಟಿಗೆ ಅಪರೂಪದ ಜಲದೇವತೆಗಳು ಸಾಕಾರಗೊಂಡಿವೆ. ಒಟ್ಟಾರೆ ಇತಿಹಾಸದ ಕಥೆ ಹೇಳುತ್ತಿರುವ ಮಧುವನ ರಾಜವಂಶಸ್ಥರ ಸಮಾಧಿಯಾದರೂ ಮೈಸೂರಿನ ಹೆಮ್ಮೆ ಮಾತ್ರವಲ್ಲ, ನೆನಪಿನ ಪುಸ್ತಕ ಎಂದರೂ ತಪ್ಪಾಗಲಾರದು.