ಪ್ರಕೃತಿಯ ಮಡಿಲಲ್ಲಿ ಮೂಡಿಬಂದ ಚಿತ್ತಾರ

ಪ್ರಕೃತಿಯ ಮಡಿಲಲ್ಲಿ ಮೂಡಿಬಂದ ಚಿತ್ತಾರ

Megha R Sanadi   ¦    Oct 12, 2020 08:06:47 PM (IST)
ಪ್ರಕೃತಿಯ ಮಡಿಲಲ್ಲಿ ಮೂಡಿಬಂದ ಚಿತ್ತಾರ

ಆಗಸದಿಂದ ಗಂಗೆಯೆ ಭೂಮಿಗೆ ಚಿಮ್ಮುತ್ತಿದೆ ಎನ್ನುವಂತೆ ಭಾಸವಾಗುವ ಜಲಪಾತಗಳು ನಮ್ಮ ದೇಶದಲ್ಲಿ ಹಲವಾರಿವೆ. ಆ ರಮಣೀಯ ದೃಶ್ಯವನ್ನು ನೋಡಲೆಂದು ಜನರು ಎಲ್ಲಿಂದ ಎಲ್ಲಿಯವರೆಗೆ ಬೇಕಾದರೂ ಹೋಗಲು ಸಿದ್ಧರಿರುತ್ತಾರೆ. ಇಂತಹದೇ ಒಂದು ಸುಂದರ ದೃಶ್ಯವನ್ನು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಉಂಚಳ್ಳಿ ಜಲಪಾತದಲ್ಲಿ ಕಾಣಬಹುದು.

ಶಿರಸಿಯಂದ ಸುಮಾರು 34 ಕಿ.ಮಿ ದೂರ ಇರುವ ಈ ಜಲಪಾತ ಕಾಡಿನ ಮಧ್ಯದಲ್ಲಿ ನೋಡುಗರ ಮನವನ್ನು ಸೆಳೆಯುತ್ತದೆ. 381 ಅಡಿ ಎತ್ತರದಿಂದ ಬೀಳುವ ನೀರಿನ ಹನಿಗಳು ಭೂಮಿಯನ್ನು ಚುಂಬಿಸಿ ಪುಟಿದೇಳುವುದು ನೋಡಲು ಬಹು ಸುಂದರವಾಗಿ ಕಾಣುತ್ತದೆ. ನೀರು ಬೀಳುವ ರಭಸದಲ್ಲಿ ಸುತ್ತಲಿನ ಜಗವನ್ನೆಲ್ಲಾ ಹನಿಗಳಿಂದ ಸ್ಪರ್ಶಿಸಿ ಎಲ್ಲವನ್ನು ಹಸನಾಗಿರುತ್ತದೆ.

ಅಘನಾಶಿನಿ ನದಿಯು ಈ ಜಲಪಾತವನ್ನು ಸೃಷ್ಟಿಸಿದ್ದು ದಟ್ಟವಾದ ಹಸುರಿನ ನಡುವೆ ಹಾಲಿನ ಹೊಳೆ ಹಾರಿದಂತೆ ಭಾಸವಾಗುವ ಈ ಜಾಗವು ನೋಡುಗರನ್ನು ಮನಸೂರೆಗೊಳಿಸುತ್ತದೆ. ಕೊಂಚ ಬಿಸಿಲು ಬಿದ್ದರೆ ರಂಗುರಂಗಾದ ಕಾಮನಬಿಲ್ಲನ್ನು ಸೃಷ್ಟಿಸುವ ಇದರ ಮಾಯೆ ಬಣ್ಣಿಸಲಸಾಧ್ಯ. ಸುತ್ತಲೂ ತಂಪಾದ ಗಾಳಿ ಹಾಗೂ ಪನ್ನೀರಿನಂತೆ ಚಿಮ್ಮುವ ಜಲಪಾತದ ನೀರು ಎಂಥವರನ್ನು ಒಮ್ಮೆ ಮಂತ್ರಮುಗ್ಧರನ್ನಾಗಿಸುತ್ತದೆ.

ಈ ಜಲಪಾತಕ್ಕೆ ಹೋಗುವ ದಾರಿಯುದ್ದಕ್ಕೂ ಮರಗಳು ಆಗಮಿಸುವ ಪ್ರೇಕ್ಷಕರನ್ನು ತನ್ನ ತಂಪದ ಗಾಳಿಯಿಂದ ಸ್ವಾಗತಿಸಿದರೆ, ಜಲಪಾತದ ಸಮೀಪಕ್ಕೆ ತಲುಪಲು ಇರುವ ಸುಮಾರು ಒಂದು ಕಿಲೋಮೀಟರ್ ಕಾಲ್ದಾರಿಯುದ್ದಕ್ಕೂ ನೆರಳಿನಿಂದ ಬರಮಾಡಿಕೊಳ್ಳುತ್ತದೆ. ಜಲಪಾತದ ಸಮೀಪ ತಲುಪುತ್ತಿದ್ದಂತೆ ಅಲ್ಲಿ ಕಾಣುವ ಪ್ರಕೃತಿ ಬಿಡಿಸಿರುವ ಚಿತ್ರದ ಅದ್ಭುತ ದೃಶ್ಯವನ್ನು ನೆನೆದಾಗಲೆಲ್ಲ ಮನ ಮತ್ತೆ ಅಲ್ಲಿಗೆ ಹೋಗಬಹುದು.