ಕಾಡ ನಡುವಿನ ಕೆಂಗುಲಾಬಿ ಸುಂದರಿ…

ಕಾಡ ನಡುವಿನ ಕೆಂಗುಲಾಬಿ ಸುಂದರಿ…

Jul 11, 2020 11:03:43 AM (IST)
ಕಾಡ ನಡುವಿನ ಕೆಂಗುಲಾಬಿ ಸುಂದರಿ…

ಕೊಡಗಿನಲ್ಲಿ ನಿಧಾನವಾಗಿ ಮಳೆಗಾಲ ಆರಂಭವಾಗುತ್ತಿದೆ. ಹೀಗಾಗಿ ಪ್ರಕೃತಿ ಹಸಿರಿನಿಂದ ಕಂಗೊಳಿಸುತ್ತಿದೆ..  ಇದರ ನಡುವೆ ಕಾನನದ ಹಲವು ಕುಸುಮಗಳು ಗಮನಸೆಳೆಯುತ್ತವೆ. ಇವುಗಳ ನಡುವೆ ಸೀತೆಹೂ ಕೂಡ ಒಂದಾಗಿದೆ.

ಆರ್ಕೆಡ್ ಜಾತಿಗೆ ಸೇರಿದ ಈ ಹೂವನ್ನು ಕೊಡಗಿನಲ್ಲಿ ಸೀತೆ ಹೂ, ಸೀತಾಳೆ ದಂಡೆ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ಕಾನನದ ಹೆಮ್ಮರ, ಬಂಡೆಗಳ ಮೇಲೆ ಗೊಂಚಲು ಗೊಂಚಲಾಗಿ ಹೂ ಬಿಟ್ಟು ಕಂಗೊಳಿಸುವ ಸೀತೆಹೂ ತನ್ನದೇ ಸೌಂದರ್ಯದಿಂದ ಕಂಗೊಳಿಸುತ್ತದೆ. ಮತ್ತೊಂದು ಗಿಡವನ್ನು ಅವಲಂಬಿಸಿ ಬೆಳೆಯುವ ಸೀತೆ ಹೂವಿನ ವಿಶೇಷತೆಯಾಗಿದೆ.

ಮೊದಲೆಲ್ಲ ಕಾಡಿನಲ್ಲಿ ಬೆಳೆಯುತ್ತಿದ್ದ ಸೀತೆ ಹೂವನ್ನು ಇದೀಗ ಅಭಿವೃದ್ಧಿಪಡಿಸಿ ಉದ್ಯಾನವನ, ಮನೆ ಮುಂದೆ ಬೆಳೆಯಲಾಗುತ್ತಿದೆ. ಗಿಡದಲ್ಲಿ ಸುಮಾರು ನಾಲ್ಕೈದು ಹೂವುಗಳು ಗುಂಪು ಗುಂಪಾಗಿ ಅರಳಿ ಸುಮಾರು ಹತ್ತರಿಂದ ಹನ್ನೆರಡು ದಿನಗಳ ಕಾಲ ತನ್ನ ತಾಜಾತನವನ್ನು ಕಾಪಾಡಿಕೊಂಡು ಸೌಂದರ್ಯವನ್ನು ಸೂಸುತ್ತದೆ. ತಿಳಿ ನೀಲಿ, ನೇರಳೆ, ಬಿಳಿ ಬಣ್ಣಗಳಿಂದ ಕೂಡಿದ್ದು ಗಮನಸೆಳೆಯುತ್ತವೆ.

ತೆತ್ರಾಯುಗದಲ್ಲಿ ರಾಮನೊಂದಿಗೆ  ವನವಾಸಕ್ಕೆ  ತೆರಳಿದ್ದ ಸೀತೆ ಈ ಹೂವನ್ನು ಇಷ್ಟಪಟ್ಟು ತನ್ನ ಮುಡಿಗೇರಿಸಿಕೊಂಡಿದ್ದಳು ಹೀಗಾಗಿ ಸೀತೆ ಹೂ ಎಂಬ ಹೆಸರು ಬಂತು ಎನ್ನಲಾಗುತ್ತಿದೆ. ಈಗಿನ ಕಾಲದಲ್ಲಿ ಸೀತೆ ಹೂವನ್ನು ಯಾರು ಮುಡಿಯುವುದಿಲ್ಲವಾದರೂ ಮನೆಯ ಅಲಂಕಾರಕ್ಕೆ ಬಳಸುತ್ತಾರೆ. ಸೀತೆ ಹೂ ಮುಡಿದಿದ್ದರಿಂದ ಆಕೆಗೆ ಸಂಕಷ್ಟಗಳು ಹೆಚ್ಚಾಯಿತು ಎಂದು ಹೇಳುವ ಹಿರಿಯರು ಅದನ್ನು ಮುಡಿಯದಂತೆಯೂ ಹೆಣ್ಣು ಮಕ್ಕಳಿಗೆ ಹೇಳುವುದನ್ನು ಕೇಳಬಹುದಾಗಿದೆ.

ಕೊಡಗಿನ ಕಾಡುಗಳಲ್ಲಿ ಅಡ್ಡಾಡಿದರೆ ವಿವಿಧ ನಮೂನೆಯ ಹಲವಾರು ರೀತಿಯ ಹೂಗಳು ಕಾಣಸಿಗುತ್ತವೆ. ಇವುಗಳನ್ನು ಅಭಿವೃದ್ಧಿಪಡಿಸಿದ್ದೇ ಉದ್ಯಾವನಕ್ಕೆ ಹಾಗೂ ಮನೆಗೆ ರಂಗು ತರಬಹುದಾಗಿದೆ.