ಫ್ಯಾಶನ್ ಲೋಕದೊಳಗೊಂದು ಮಿಂಚು ಹೊಸಮುಖಗಳ ಫಿಟ್ನೆಸ್ ಕ್ಯಾಲೆಂಡರ್

ಫ್ಯಾಶನ್ ಲೋಕದೊಳಗೊಂದು ಮಿಂಚು ಹೊಸಮುಖಗಳ ಫಿಟ್ನೆಸ್ ಕ್ಯಾಲೆಂಡರ್

HEMANATH PERMUDE   ¦    Jan 20, 2020 03:32:00 PM (IST)

ಫ್ಯಾಶನ್ ಲೋಕವೇ ಹಾಗೆ…ಅದು ಒಂದು ರೀತಿಯ ಮಾಯಾಲೋಕ, ಅದರ ಆಕರ್ಷಣೆಗೆ ಒಳಗಾಗದವರು ಕಡಿಮೆ ಎನ್ನಬಹುದು. ಇಂತಹ ಫ್ಯಾಶನ್ ಲೋಕದಲ್ಲಿ ಇರುವವರೆಲ್ಲರೂ ತುಂಬಾ ಶ್ರೀಮಂತರು, ಅದು ಕೈಗೆಟಕದ ಹುಳಿದ್ರಾಕ್ಷಿ ಎನ್ನುವ ಭಾವನೆ ಹೆಚ್ಚಿನವರಲ್ಲಿದೆ. ಆದರೆ ಈ ಬಗ್ಗೆ ಫ್ಯಾಶನ್ ಲೋಕದಲ್ಲಿ ಒಬ್ಬರಾಗಿರುವ ಫ್ಯಾಶನ್ ಫೋಟೊಗ್ರಾಫರ್ ಮತ್ತು ಬಾಡಿ ಸ್ಕಲ್ಪ್ಟ್ ಫಿಟ್ನೆಸ್ ಕ್ಯಾಲೆಂಡರ್ ನ ನಿರ್ಮಾಪಕ ನಿಕೋಸ್ ನಾರ್ಕಿಸೋಸ್ ಅವರು ಹೇಳುವ ಕಥೆಯೇ ಬೇರೆ.

ಇವರು 2020ರಲ್ಲಿ ಬಿಡುಗಡೆ ಮಾಡಿದ ಫಿಟ್ನೆಸ್ ಕ್ಯಾಲೆಂಡರ್ ಗೆ ಫೋಸ್ ಕೊಟ್ಟ ರೂಪದರ್ಶಿಗಳು ಮಧ್ಯಮ ವರ್ಗ ಹಾಗೂ ಗ್ರಾಮೀಣ ಭಾಗದವರಾಗಿರುವುದು ಇದಕ್ಕೆ ಸಾಕ್ಷಿ. ಫಿಟ್ನೆಸ್ ಕ್ಯಾಲೆಂಡರ್ ತಯಾರಿ ಮಾಡಿರುವ ನಿಕೋಸ್ ಅವರು ಭಾರತ ಮತ್ತು ಶ್ರೀಲಂಕಾದಿಂದ ಸುಮಾರು 22 ಮಂದಿ ರೂಪದರ್ಶಿಗಳನ್ನು ಆಯ್ಕೆ ಮಾಡಿದ್ದರು.ಇವರೆಲ್ಲರೂ ಮಧ್ಯಮವರ್ಗ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದಂತಹ ರೂಪದರ್ಶಿಗಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನಿಕೋಸ್, ಇವರೆಲ್ಲರೂ ಸಣ್ಣ ನಗರದಿಂದ ಬಂದು ಇದೀಗ ಫ್ಯಾಶನ್ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ತಮ್ಮ ಕೆಲಸದ ಮೇಲೆ ಶ್ರದ್ಧೆ, ಪ್ರೀತಿ ಹಾಗೂ ಛಲ ಇದ್ದರೆ ಫ್ಯಾಶನ್ ಲೋಕದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹೆಮ್ಮೆ ವ್ಯಕ್ತಪಡಿಸಿದರು.

‘ಮಾಸ್ ವಿದ್ ಕ್ಲಾಸ್’ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದ ಕ್ಯಾಲೆಂಡರ್ ನಲ್ಲಿ ಈಶಾನ್ಯ, ಮಧ್ಯಭಾರತ, ಆಫ್ರಿಕಾ ಮತ್ತು ಶ್ರೀಲಂಕಾದಿಂದ ರೂಪದರ್ಶಿಗಳನ್ನು ಆಯ್ಕೆ ಮಾಡಲಾಗಿದೆ. ಕ್ಯಾಲೆಂಡರ್ ನ ಮುಖಪುಟದಲ್ಲಿ ಅರ್ಜುನ್ ಸಿಂಗ್ ಮತ್ತು ನಿಖಿಲ್ ವಾಟ್ಸ್ ಅವರು ಕಾಣಿಸಿಕೊಂಡಿದ್ದಾರೆ.

ರೂಪದರ್ಶಿಗಳಾಗಿ ಮಿಂಚಿರುವ ಈ ಪ್ರತಿಭೆಗಳು ಟಿವಿ ಹಾಗೂ ಯೂಟ್ಯೂಬ್ ನಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವರು. ಕೆಲವರಿಗೆ ಮಾಡೆಲಿಂಗ್ ಒಂದು ಹವ್ಯಾಸವಾಗಿದೆ. ಏನೇ ಆದರೂ ಇವರೆಲ್ಲರೂ ಜೀವನದಲ್ಲಿ ತಮ್ಮ ಗುರಿ ಸಾಧನೆ ಮಾಡಿರುವುದಂತೂ ದಿಟ.

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವಂತಹ ರೂಪದರ್ಶಿಗಳ ಬಗ್ಗೆ ಒಂದು ಕಿರುಪರಿಚಯ…

ಅರ್ಜುನ್ ಸಿಂಗ್
ಉತ್ತರಾಖಂಡದ ಗರ್ವಾಲ್ ಎನ್ನುವ ಸಣ್ಣ ಊರಿನವರಾಗಿರುವ 22 ಹರೆಯದ ಅರ್ಜುನ್ ಸಿಂಗ್ ಅವರು ಇಂಟರ್ ನ್ಯಾಶನಲ್ ಫೆಡರೇಶನ್ ಆಫ್ ಬಾಡಿಬಿಲ್ಡಿಂಗ್ ಆ್ಯಂಡ್ ಫಿಟ್ನೆಸ್(ಐಎಫ್ ಬಿಬಿ) ಇಲೈಟ್ ಪ್ರೋ ಕಾರ್ಡ್ ವಿಜೇತ. ದೇಹದಾರ್ಢ್ಯದಲ್ಲಿ ಇವರು ಡೈಮಂಡ್ ಕಾರ್ಡ್ ವಿಜೇತರು ಮತ್ತು ಇತರ ಹಲವಾರು ಪ್ರಶಸ್ತಿಯು ಇವರು ತನ್ನದಾಗಿಸಿಕೊಂಡಿದ್ದಾರೆ.

 ನಿಖಿಲ್ ವಾಟ್ಸ್
ಇವರು ವೃತ್ತಿಪರ ದೇಹದಾರ್ಢ್ಯಪಟು ಮತ್ತು ಪಂಜಾಬ್ ಅಬೊಹಾರ್ ನ ತರಬೇತುದಾರ.

ಹಸ್ಸೆ ತುಕುಜು
ಆಫ್ರಿಕಾದ ಕಾಂಗೋ ಕಿನ್ಶಾಸಾದ ಹಸ್ಸೆ ಅವರು ಕಳೆದ ಒಂದು ದಶಕದಿಂದ ಬೆಂಗಳೂರಿನಲ್ಲಿ ನೆಲೆಸಿ, ಇಲ್ಲೇ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ. ಹಸ್ಸೆ ಅವರು ``ಮಿಸ್ ಡೆಮೊಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ ಟೂರಿಸಂ ಆ್ಯಂಡ್ ಕಲ್ಚರ್ ಯೂನಿವರ್ಸ್ 2019’’ ವಿಜೇತರು.


 ಎಜಾಜುಲ್ ಹಕ್
ಅಸ್ಸಾಂನ ಗೋಲಾಘಾಟ್ ನಿವಾಸಿ ಎಜಾಜುಲ್ ಅವರು ನ್ಯಾಶನಲ್ ಅಮೆಚೂರ್ ಬಾಡಿಬಿಲ್ಡರ್ಸ್ ಅಸೋಸಿಯೇಶನ್(ಎನ್ ಎಬಿಬಿಎ), ವರ್ಲ್ಡ್ ಫಿಟ್ನೆಸ್ ಫೆಡರೇಶನ್(ಡಬ್ಲ್ಯೂ ಎಫ್ ಎಫ್), ಏಶ್ಯಾ ಚಾಂಪಿಯನ್ ಶಿಪ್ ನ ರನ್ನರ್ ಅಪ್ ಆಗಿರುವರು. ಫಿಟ್ನೆಸ್ ಕ್ಯಾಲೆಂಡರ್ ನಲ್ಲಿ ಕಾಣಿಸಿಕೊಂಡ ಈಶ್ಯಾನ ಭಾರತ ಮತ್ತು ಅಸ್ಸಾಂನ ಮೊದಲ ರೂಪರ್ಶಿ ಎಜಾಜುಲ್ ಎನ್ನುತ್ತಾರೆ ನಿಕೋಸ್.

ಡಾ.ಇಶಾನ್ ಶರ್ಮಾ

ವೃತ್ತಿಯಲ್ಲಿ ದಂತ ವೈದ್ಯರಾಗಿರುವ ಇಶಾನ್ ಶರ್ಮಾ ಅವರು ಒಬ್ಬ ದೇಹದಾರ್ಢ್ಯ ಪಟು ಮತ್ತು ತರಬೇತುದಾರ. ಇವರು ವೃತ್ತಿಯೊಂದಿಗೆ ತನ್ನ ಹವ್ಯಾಸಕ್ಕೆ ಒಂದು ರೂಪ ನೀಡಿರುವುದು ಬೇರೆಯವರಿಗೆ ಮಾದರಿ.

ಲೋಕೇಶ್ ಕುಮಾರಿ
ಹಿಂದಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಷೋ ಬಿಗ್ ಬಾಸ್ ನ ಹತ್ತನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಲೋಕೇಶ್ ಅವರು ದೆಹಲಿ ನಿವಾಸಿ. ಲೋಕೇಶ್ ಕುಮಾರಿ ಅವರು ಈ ಕ್ಯಾಲೆಂಡರ್ ನಲ್ಲಿ ಸೀರೆಯಲ್ಲಿ ಕಾಣಿಸಿಕೊಂಡು ಕ್ಯಾಲೆಂಡರ್ ಗೆ ಹೊಸ ಆಯಾಮ ನೀಡಿರುವರು. ಯಾಕೆಂದರೆ ಹೆಚ್ಚಾಗಿ ಫಿಟ್ನೆಸ್ ಕ್ಯಾಲೆಂಡರ್ ನಲ್ಲಿ ಮಹಿಳಾ ರೂಪದರ್ಶಿಗಳು ಬಿಕಿನಿಯಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು.


ಶಿವಾಶಿಶ್ ಮಿಶ್ರಾ
ವೃತ್ತಿಯಲ್ಲಿ ಉದ್ಯಮಿಯಾಗಿರುವ ಶಿವಾಶಿಶ್ ಅವರು ಹಿಂದಿಯ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು.ಫಿಟ್ನೆಸ್ ಕ್ಯಾಲೆಂಡರ್ ನಲ್ಲಿ ಕಾಣಿಸಿಕೊಂಡ ಮಧ್ಯ ಭಾರತದ ಮೊದಲ ರೂಪದರ್ಶಿ ಇವರು ಎನ್ನುತ್ತಾರೆ ನಿಕೋಸ್.

ಸುರೇಂದ್ರ ಮಾಣಿಕಂ
ತಮಿಳುನಾಡಿನ ಈರೋಡ್ ಜಿಲ್ಲೆಯ ಭವಾನಿ ಎನ್ನುವ ಗ್ರಾಮದಿಂದ ಬಂದಿರುವ ಸುರೇಂದ್ರ ಅವರು ಬಾಲ್ಯದಲ್ಲೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಜೀವನದಲ್ಲಿ ತುಂಬಾ ನೋವು ಹಾಗೂ ಶ್ರಮಪಟ್ಟು ಮೇಲಕ್ಕೆ ಬಂದಿರುವ ಇವರು ವರ್ಲ್ಡ್ ಫಿಟ್ನೆಸ್ ಫೆಡರೇಶನ್(ಡಬ್ಲ್ಯೂಎಫ್ ಎಫ್) ಆಯೋಜಿಸಿದ್ದ ``ಮಿಸ್ಟರ್ ಇಂಡಿಯಾ’’ ರನ್ನರ್ ಅಪ್ ಆಗಿದ್ದರು. ಇವರು ತನ್ನದೇ ಆಗಿರುವ ಯೂಟೂಬ್ ಚಾನೆಲ್ ಕೂಡ ಹೊಂದಿದ್ದಾರೆ.

ರೋನಿ ಠಾಕೂರ್
ಹಿಮಾಚಲ ಪ್ರದೇಶದ ಹಮಿರ್ಪುರದ ರೋನಿ ಠಾಕೂರ್ ಅವರು ``ಮಿಸ್ಟರ್ ಟೂರಿಸಂ ಆ್ಯಂಡ್ ಕಲ್ಚರ್ ಇಂಡಿಯಾ 2019’’ ವಿಜೇತರು. ವೃತ್ತಿಯಲ್ಲಿ ಇವರು ಇಂಜಿನಿಯರ್ ಆಗಿರುವ ಇವರು ಮ್ಯಾನ್ಮಾರ್ ನಲ್ಲಿ ನಡೆದ ``ಮಿಸ್ಟರ್ ಇಂಡಿಯಾ’’ ಸ್ಪರ್ಧೆ ಗೆದ್ದಿರುವರು.

ಚಮಿಡು ಉದಾನ
ಶ್ರೀಲಂಕಾದ ಕೊಲಂಬೊದವರಾಗಿರುವ ಉದಾನ ಅವರು ``ಮಿಸ್ಟರ್ ಶ್ರೀಲಂಕಾ ಮ್ಯಾನ್ ಹಂಟ್ 2018’’ಪ್ರಶಸ್ತಿ ಗೆದ್ದಿರುವರು. ಇವರು ಶ್ರೀಲಂಕಾದ ಅಡ್ವೆಂಚರ್ ರಿಯಾಲಿಟಿ ಶೋ ಟಿವಿ ಡೆರಾನಾ ಥಥ್ವಿಕಾ ಸೀಸನ್ 2 ವಿಜೇತರು. ಇವರಿಗೆ ಈಗ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಕೂಡ ಬರುತ್ತಿದೆ.

ಅಂಕಿತಾ ಸಿಂಗ್
ಲಕ್ನೋ ನಿವಾಸಿಯಾಗಿರುವ ಅಂಕಿತಾ ಸಿಂಗ್ ಅವರು ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ವೃತ್ತಿ ಜೀವನ ನಡೆಸುತ್ತಿರುವರು. ಇವರು ಪೋಷಕಾಂಶಗಳ ರಾಯಭಾರಿಯಾದ ಬಳಿಕ ಹೆಚ್ಚು ಜನಪ್ರಿಯತೆ ಪಡೆದಿರುವರು. ಇವರು ಡಿವೈನ್ ನ್ಯೂಟ್ರಿಷನ್ ನ ದಕ್ಷಿಣ ವಲಯದ ಮುಖ್ಯಸ್ಥೆ. ಇವರಲ್ಲಿರುವ ಮತ್ತೊಂದು ವಿಶೇಷತೆಯೆಂದರೆ ತನ್ನ ಬಿಕಿನಿಗಳನ್ನು ಇವರೇ ವಿನ್ಯಾಸಗೊಳಿಸುವುದು. ಬಿಕಿನಿ ಖರೀದಿಸಲೆಂದೇ ಹಲವಾರು ರೂಪದರ್ಶಿಗಳು ಇವರ ಬಳಿಗೆ ಬರುತ್ತಾರೆ ಎಂದು ನಿಕೋಸ್ ಹೇಳುತ್ತಾರೆ. ಅಂಕಿತಾ ಅವರು ಹಲವಾರು ರಾಷ್ಟ್ರಗಳಲ್ಲಿ ದೇಶವನ್ನು ಪ್ರತಿನಿಧಿಸಿರುವರು.

ಕಪಿಲ್ ಕಶ್ಯಪ್
ದೆಹಲಿಯ ನಿವಾಸಿ ಹಾಗೂ ಒಂದು ಮಗುವಿನ ತಂದೆಯಾಗಿರುವ ಕಪಿಲ್ ಅವರು ವೃತ್ತಿಯಲ್ಲಿ ಫಿಟ್ನೆಸ್ ಟ್ರೈನರ್ ಮತ್ತು ಇದಕ್ಕೆ ಮೊದಲು ಫಿಟ್ನೆಸ್ ಕ್ಯಾಲೆಂಡರ್ ನಲ್ಲಿ ಕಾಣಿಸಿಕೊಂಡಿದ್ದರು. ಇವರು ಫಿಟ್ನೆಸ್ ರೂಪದರ್ಶಿ.


ಅಭಿಷೇಕ್ ಗೌಡ
ಕರ್ನಾಟಕದ ಕೊಡಗಿನವರಾಗಿರುವ ಅಭಿಷೇಕ್ ಗೌಡ ಅವರು ಫಿಟ್ನೆಸ್ ಕ್ಯಾಲೆಂಡರ್ ನಲ್ಲಿ ಮೊದಲ ಸಲ ಕಾಣಿಸಿಕೊಂಡಿದ್ದಾರೆ. ಇವರು ಪ್ರೋ ಕಾರ್ಡ್ ಗೆದ್ದುಕೊಂಡಿರುವರು ಮತ್ತು ಥಾಯ್ಲೆಂಡ್ ನಲ್ಲಿ ಭಾರತವನ್ನು ಪ್ರತಿನಿಧಿಸಿರುವರು. ಮಸ್ಕಲ್ಮೇನಿಯಾ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಅಭಿಷೇಕ್ ಅವರು ರನ್ನರ್ ಅಪ್ ಆಗಿದ್ದರು. ಇವರು ಡೈಮಂಡ್ ಕಾರ್ಡ್ ಕೂಡ ಗೆದ್ದುಕೊಂಡಿರುವರು.


ಪಿಯುಮಾಲ್ ಪಟ್ಟುವೇರಾಚಿ
ಶ್ರೀಲಂಕಾದ ಕೊಲಂಬೊ ನಿವಾಸಿ ಆಗಿರುರುವ ಪಿಯುಮಾಲ್ ಅವರು ಸೂಪರ್ ಮಾಡೆಲ್ ಕೂಡ.


ಶಾರೋನ್ ರೋಸ್
ವಿಶಾಖಪಟ್ಟಣಂ ನಿವಾಸಿಯಾಗಿರುವ ಶಾರೋನ್ ಸೂಪರ್ ಮಾಡೆಲ್. ಪ್ರಸ್ತುತ ಯುರೋಪ್ ನಲ್ಲಿ ನೆಲೆಸಿರುವರು.ಪ್ರತೀಕ್ ಕಂಬಾರ್
ಮಹಾರಾಷ್ಟ್ರದ ನವಿಮುಂಬಯಿಯ ಘನ್ಸೋಲಿ ನಿವಾಸಿ.

ಜಾವೇದ್ ಸೈಯದ್
ಜಾವೇದ್ ಅವರು ಕೂಡ ಮುಂಬಯಿಯ ಫಿಟ್ನೆಸ್ ಮಾಡೆಲ್.

ಅಂಕಿತ್ ಸಿಂಗ್
ಬೆಂಗಳೂರಿನವರಾಗಿರುವ ಅಂಕಿತ್ ಅವರು ಫಿಟ್ನೆಸ್ ಮಾಡೆಲ್ ಹಾಗೂ ರಾಷ್ಟ್ರೀಯ ಮಟ್ಟದ ಬಾಕ್ಸರ್ ಕೂಡ.

ಅಭಿಜಿತ್ ನಾಯ್ಕ್
ಗೋವಾದ ಮಡ್ಗಾಂವ್ ನವರಾಗಿರುವ ಅಭಿಜಿತ್ ನಾಯ್ಕ್ ಅವರು ಮಿಸ್ಟರ್ ಗೋವಾ ಮೆನ್ಸ್ ಫಿಸಿಕ್ ಚಾಂಪಿಯನ್ ಶಿಪ್ ನ್ನು ಏಳು ಸಲ ಗೆದ್ದಿರುವರು.