ಕೆರೆಗಳ ಪುನಃಶ್ಚೇತನ – ಧರ್ಮಸ್ಥಳದ ಕೊಡುಗೆ

ಕೆರೆಗಳ ಪುನಃಶ್ಚೇತನ – ಧರ್ಮಸ್ಥಳದ ಕೊಡುಗೆ

DA   ¦    Jul 27, 2020 05:20:38 PM (IST)
ಕೆರೆಗಳ ಪುನಃಶ್ಚೇತನ – ಧರ್ಮಸ್ಥಳದ ಕೊಡುಗೆ

ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ದಿನೇ ದಿನೇ ಕುಸಿದು ಬರಗಾಲದ ಸಮಸ್ಯೆ ಕಾಣುತ್ತಿದ್ದೇವೆ. ಕೃಷಿ ಬೆಳೆಯುತ್ತಿಲ್ಲ. ಮನುಷ್ಯರಿಗೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಈ ಸಮಸ್ಯೆಯನ್ನು ಮನಗಂಡ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ. ಹೆಗ್ಗಡೆಯವರು ನೀರಿನ ಶಾಶ್ವತ ಪರಿಹಾರಕ್ಕಾಗಿ ಕೆರೆಗಳನ್ನು ದುರಸ್ತಿಗೊಳಿಸಿ ಮಳೆ ನೀರನ್ನು ಹಾಗೂ ಬೇರೆ ಬೇರೆ ಡ್ಯಾಂನ ಮೂಲಕ ನೀರನ್ನು ಕೆರೆಗೆ ತುಂಬಿಸಿ ಸಂಗ್ರಹಿಸುವ ನಿಟ್ಟಿನಲ್ಲಿ 2016 ರಲ್ಲಿ ‘ನಮ್ಮೂರು ನಮ್ಮ ಕೆರೆ’ ಯೋಜನೆಯನ್ನು ಪ್ರಾರಂಭಗೊಳಿಸಿದರು.

ಕರ್ನಾಟಕ ರಾಜ್ಯದಲ್ಲಿ ಸರಕಾರದ ಅಂಕಿ ಅಂಶ ಪ್ರಕಾರ 36 ಸಾವಿರ ಕೆರೆಗಳಿವೆ. ರಾಜ್ಯದ ಬಯಲು ಸೀಮೆಗಳಲ್ಲಿ ದುರಸ್ತಿ ಮಾಡಲು ಕೆರೆಗಳು ಅತೀ ಹೆಚ್ಚು ಇರುತ್ತದೆ. ಹಾಗೂ ನೀರಿನ ಸಮಸ್ಯೆ ಮಲೆನಾಡು, ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಉತ್ತರ ಕರ್ನಾಟಕದ ಧಾರವಾಡ, ಕೊಪ್ಪಳ, ಕಲ್ಬುರ್ಗಿ, ಯಾದಗಿರಿ, ಬೀದರ್, ಬಳ್ಳಾರಿ, ಚಿತ್ರದುರ್ಗ, ಗದಗ, ರಾಯಚೂರು ಮತ್ತು ದಕ್ಷಿಣ ಕರ್ನಾಟಕ ಭಾಗವಾದ ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಚಾಮರಾಜನಗರ ಇತ್ಯಾದಿ ಜಿಲ್ಲೆಗಳಲ್ಲಿ ಜಾಸ್ತಿ ಇರುತ್ತದೆ.

ಅನುಷ್ಠಾನದ ಜವಾಬ್ದಾರಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಳೆದ 38 ವರ್ಷದಿಂದ ಕುಟುಂಬಗಳ ಆರ್ಥಿಕ ಅಭಿವೃದ್ಧಿ ಮತ್ತು ಸ್ವಾವಲಂಬನೆಗಾಗಿ ಕರ್ನಾಟಕ ರಾಜ್ಯದಾದ್ಯಂತ ಕೆಲಸ ನಿರ್ವಹಿಸುತ್ತಿದೆ. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಇವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಕೆರೆ ಪುನಃಶ್ಚೇತನ ಕಾರ್ಯಕ್ರಮವು ಉತ್ತಮವಾದ ತಾಂತ್ರಿಕತೆಯ ಮೂಲಕ ಅತೀ ಕಡಿಮೆ ವೆಚ್ಚದಲ್ಲಿ ಪಾರದರ್ಶಕವಾಗಿ ನಡೆಯುತ್ತಿದೆ.

ಕೆರೆಗಳ ದುರಸ್ತಿಯ ಉದ್ದೇಶ

  • ಕರ್ನಾಟಕ ರಾಜ್ಯದಲ್ಲಿರುವ ನಾದುರಸ್ತಿಯಲ್ಲಿರುವ ಪಾರಂಪರಿಕ ಕೆರೆಗಳ ಪುನಃಶ್ಚೇತನ.
  • ನೀರಿನ ಲಭ್ಯತೆ ಮತ್ತು ಬಳಕೆ ಮಧ್ಯೆ ಇರುವ ಅಂತರವನ್ನು ತಗ್ಗಿಸುವುದು.
  • ಮನುಷ್ಯ, ಪ್ರಾಣ , ಪಕ್ಷಿ ಇತ್ಯಾದಿ ಜೀವ ಸಂಕುಲಗಳ ದೈನಂದಿನ ಬಳಕೆಗೆ ಬೇಕಾಗುವ ಜಲ ಸಂಪತ್ತನ್ನು ಅಭಿವೃದ್ಧಿ ಪಡಿಸುವುದು.
  • ದಿನೇ ದಿನೇ ಕುಸಿಯುತ್ತಿರುವ ಅಂತರ್ ಜಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು.
  • ದೇಶದ ಬೆನ್ನೆಲುಬಾದ ಅನ್ನ ನೀಡುವ ರೈತರಿಗೆ ಶಕ್ತಿ ತುಂಬುವುದು.
  • ಜನ ಸಮುದಾಯದಲ್ಲಿ ಜಲ ಜಾಗೃತಿಯನ್ನು ಉಂಟು ಮಾಡುವುದು.
  • ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಗಿಡಮರಗಳನ್ನು ಬೆಳೆಸಿ ಉತ್ತಮ ಪರಿಸರವನ್ನು ನಿರ್ಮಿಸುವುದು.

ಸಹಭಾಗಿತ್ವ

ಕೆರೆ ದುರಸ್ತಿಗೊಳಿಸುವ ಮಹತ್ತರ ಚಿಂತನೆಯು ಸಾಕಾರಗೊಳ್ಳಬೇಕಾದರೆ ಜನರ ಸಹಭಾಗಿತ್ವ ಅತೀ ಮುಖ್ಯವಾದುದು. ಈ ದಿಸೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಹಾಗೂ ಬಳಕೆದಾರರ ಸಹಕಾರವನ್ನು ಪಡೆಯಲಾಗುತ್ತಿದೆ. ಎಲ್ಲಾ ಕೆರೆಗಳ ದುರಸ್ತಿ ಕಾರ್ಯದಲ್ಲಿ ಇವರೆಲ್ಲರ ಪರಿಶ್ರಮ ಖಂಡಿತಾ ಇದೆ. ವಿಶೇಷವಾಗಿ ಕೃಷಿ ಯೋಗ್ಯ ಹೂಳನ್ನು ರೈತರು ತಮ್ಮ ಜಮೀನಿಗೆ ಸ್ವತಃ ಸಾಗಾಟ ಮಾಡಿಕೊಳ್ಳುತ್ತಿದ್ದಾರೆ. ಜೊತೆಯಲ್ಲಿ ಕೆರೆಯ ಅಭಿವೃದ್ಧಿ ವಿಚಾರ ಹಾಗೂ ನಿರ್ವಹಣೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ. ಕೆರೆ ದುರಸ್ತಿಯಲ್ಲಿ ಇವರೆಲ್ಲರ ಕೊಡುಗೆ ಅಪಾರವಾದದ್ದು.

ನಮ್ಮೂರು ನಮ್ಮ ಕೆರೆಯ ಸಾಧನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದಾದ್ಯಂತ ಕೆರೆ ಪುನಃಶ್ಚೇತನ ಕಾರ್ಯಕ್ರಮದ ಸಾಧನೆಯನ್ನು ಗಮನಿಸಿದ ಕರ್ನಾಟಕ ಸರಕಾರವು ಡಾ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕರ್ನಾಟಕ ಸರಕಾರ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇದರ “ಕೆರೆ ಸಂಜೀವಿನಿ ಯೋಜನೆ”ಯ ಆರ್ಥಿಕ ನೆರವು ಪಡೆದು ಎಸ್.ಕೆ.ಡಿ.ಆರ್.ಡಿ.ಪಿ. ಮೂಲಕ ರಾಜ್ಯದಾದ್ಯಂತ ಕೆರೆ ಪುನಃಶ್ಚೇತನ ಕಾರ್ಯಕ್ರಮ ನಡೆಯುತ್ತಿದೆ.

ಕೆರೆ ಸಂಜೀವಿನಿ ಯೋಜನೆಯ ಸಾಧನೆ

ಸುಜಲಾಂ ಸುಫಲಾಂ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಭಾರತೀಯ ಜೈನ್ ಸಂಘಟನೆ ಜೊತೆಗೂಡಿಕೊಂಡು ಕಳೆದ ವರ್ಷದಿಂದ ಯಾದಗಿರಿ, ರಾಯಚೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿರುವ ಪೂರ್ತಿ ಕೆರೆಯನ್ನು ಪುನಃಶ್ಚೇತನಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಒಟ್ಟು 31 ಕೆರೆಗಳ ಹೂಳೆತ್ತಲಾಗಿದೆ. ಮತ್ತು 8 ಕೆರೆಗೆ ನೀರು ಬರುವ ನಾಲೆಗಳ ಕಾಮಗಾರಿ ಮಾಡಲಾಗಿದೆ. 2020-21ನೇ ಸಾಲಿನಲ್ಲಿ 30 ಕೆರೆಗಳ ಹೂಳೆತ್ತುವ ಗುರಿ ನಿಗದಿಪಡಿಸಲಾಗಿದೆ.

ಕಳೆದ 4 ವರ್ಷಗಳಿಂದ ಒಟ್ಟು 274 ಕೆರೆಗಳ ಪುನಃಶ್ಚೇತನ ಕಾರ್ಯಕ್ರಮ ನಡೆದಿದ್ದು, ಈ ಮಳೆಗಾಲದಲ್ಲಿ ಎಲ್ಲಾ ಕೆರೆಗಳಲ್ಲಿ ನೀರು ತುಂಬಿರುತ್ತದೆ. ಇದರಿಂದ ಹಲವು ತಾಲೂಕಿನಲ್ಲಿ ಕೆರೆ ನೀರನ್ನು ಕುಡಿಯಲು ಬಳಸುತ್ತಿದ್ದಾರೆ. ಅಂತರ್ಜಲ ಮಟ್ಟ ಹೆಚ್ಚಿ ಬತ್ತಿ ಹೋದ ಅನೇಕ ಕೊಳವೆ ಬಾವಿಗಳು ಮರುಜೀವ ಪಡೆದುಕೊಂಡಿದೆ. ಕೆರೆಯ ಅಸುಪಾಸಿನ ರೈತರು ಕೃಷಿ ಕಾರ್ಯಗಳನ್ನು ಪ್ರಾರಂಭಿಸಿರುತ್ತಾರೆ. ಜಾನುವಾರು, ಪ್ರಾಣ , ಪಕ್ಷಿಗಳ ನೀರಿನ ಸಮಸ್ಯೆ ನಿವಾರಿಸಿದಂತಾಗಿದೆ.