ಈಗೆಲ್ಲಿದೆ ಕೊಡಗಿನ ಮಳೆಯ ವೈಭವ.. ಭತ್ತದ ಕೃಷಿಯ ಸಂಭ್ರಮ...

ಈಗೆಲ್ಲಿದೆ ಕೊಡಗಿನ ಮಳೆಯ ವೈಭವ.. ಭತ್ತದ ಕೃಷಿಯ ಸಂಭ್ರಮ...

LK   ¦    May 31, 2020 01:55:24 PM (IST)
ಈಗೆಲ್ಲಿದೆ ಕೊಡಗಿನ ಮಳೆಯ ವೈಭವ.. ಭತ್ತದ ಕೃಷಿಯ ಸಂಭ್ರಮ...

ಈಗ ಕೊಡಗಿನಲ್ಲಿ ಗದ್ದೆ ಕೆಲಸವೆಂದರೆ ಅಷ್ಟಕಷ್ಟೆ. ಮೊದಲಿದ್ದ ಯಾವ ಸಂತೋಷವೂ ಕಾಣುತ್ತಿಲ್ಲ. ಇದಕ್ಕೆ ಕಾರಣಗಳು ನೂರಾರು ಇರಬಹುದು. ಆದರೆ ಒಂದೆರಡು ದಶಕಗಳ ಹಿಂದಕ್ಕೆ ಹೋಗಿ ನೋಡಿದರೆ ಅವತ್ತಿನ ಗದ್ದೆ ಕೆಲಸದ ಆ ಸಂಭ್ರಮ ಇವತ್ತಿಗೂ ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತದೆ.

 

ಭತ್ತದ ಕೃಷಿಯೇ ಜೀವಾಳವಾಗಿದ್ದ ಕೊಡಗಿನಲ್ಲಿ ಹಬ್ಬ ಹರಿದಿನಗಳೆಲ್ಲವೂ ಅದರ ಸುತ್ತಲೇ ಆಚರಣೆಯಾಗುತ್ತಿದೆ. ಇನ್ನು ಮಳೆಗಾಲವೂ ಕೂಡ ಗದ್ದೆ ಕೆಲಸದೊಂದಿಗೆ ಆರಂಭವಾಗುತ್ತಿತ್ತು. ಮಳೆ ಬಿದ್ದು ಮಣ್ಣು ತೇವವಾಗುತ್ತಿದ್ದಂತೆಯೇ ರೈತರು ಉಳುಮೆ ಆರಂಭಿಸುತ್ತಿದ್ದರು. ಅಲ್ಲಿಂದ ಶುರುವಾದ ಗದ್ದೆಯಲ್ಲಿನ ಭತ್ತದ ಕೃಷಿ ಚಟುವಟಿಕೆ ಮುಗಿಯುತ್ತಿದ್ದದ್ದು ಆಗಸ್ಟ್ ತಿಂಗಳಲ್ಲಿ.. ಮುಂಗಾರು ಆರಂಭಗೊಳ್ಳುತ್ತಿದೆ ಎನ್ನುವಾಗಲೇ ಜನ ಮಳೆಗಾಲವನ್ನು ಎದುರಿಸಲು ಸರ್ವ ರೀತಿಯಲ್ಲಿಯೂ ಸಜ್ಜಾಗುತ್ತಿದ್ದರು. ಮಳೆಗಾಲಕ್ಕೆ ಬೇಕಾದ ಕೊಡೆ, ರೈನ್ ಕೋಟ್, ಗಂಬೂಟು, ಪ್ಲಾಸ್ಟಿಕ್, ಕೊರಂಬು ಹೀಗೆ ಎಲ್ಲವನ್ನೂ ಖರೀದಿಸುತ್ತಿದ್ದರು. ಜೊತೆಗೆ ಮಳೆಗಾಲಕ್ಕಿರಲೆಂದು ಸೌತೆಕಾಯಿ, ಗೆಣಸು, ಕಾಳುಕಡ್ಡಿ ಸೇರಿದಂತೆ ಹಾಳಾಗದ ಒಂದಷ್ಟು ಪದಾರ್ಥಗಳು, ಸೌದೆ, ದಿನಸಿ ಸಾಮಾನುಗಳನ್ನು ಸಂಗ್ರಹಿಸಿಡುತ್ತಿದ್ದರು. ಏಕೆಂದರೆ ಗದ್ದೆ ಕೆಲಸ ಆರಂಭವಾದ ಬಳಿಕ ಹೊರ ಪ್ರಪಂಚದ ಸಂಪರ್ಕವೇ ಇರುತ್ತಿರಲಿಲ್ಲ. ಜತೆಗೆ ಸಮಯವೂ ಸಿಗುತ್ತಿರಲಿಲ್ಲ.

 

ಇನ್ನು ಮಳೆಗಾಲ ಆರಂಭವಾಯಿತೆಂದರೆ ಜನರ ಭತ್ತದ ಕೃಷಿಗೆ ಸಂಬಂಧಿಸಿದ ಕೆಲಸಗಳಲ್ಲಿ ನಿರತರಾಗಿಬಿಡುತ್ತಿದ್ದರು. ಗದ್ದೆ ಉಳುಮೆ ಮಾಡುವುದು, ಗೊಬ್ಬರ ಹರಡುವುದು, ಗದ್ದೆ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸುವುದು ಹೀಗೆ ಬಿಡುವಿಲ್ಲದ ದುಡಿಮೆಯಲ್ಲಿ ತೊಡಗಿರುವ ದೃಶ್ಯಗಳು ಗೋಚರಿಸುತ್ತಿದ್ದವು. ಜೂನ್ ಆರಂಭದಿಂದ ಆಗಸ್ಟ್ ತಿಂಗಳ ತನಕವೂ ವಿಶಾಲ ಗದ್ದೆ ಬಯಲುಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದ ರೈತರು ಕಂಡು ಬರುತ್ತಿದ್ದರು. ಮಳೆಯಿರಲಿ ಇಲ್ಲದಿರಲಿ ಮಾತ್ರ ತಮ್ಮ ಕೆಲಸವನ್ನು ನಿಲ್ಲಿಸುತ್ತಿರಲಿಲ್ಲ.

 

ಇದರ ಜೊತೆಗೆ ಮನೆಯಲ್ಲಿ ಹೆಚ್ಚಿನ ಜನ ಇರುತ್ತಿದ್ದರಿಂದ ಕೂಲಿ ಕಾರ್ಮಿಕರನ್ನು ಆಶ್ರಯಿಸದೆ ತಾವೇ ಬಹಳಷ್ಟು ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದರು. ಹೆಚ್ಚಿನ ಗದ್ದೆ ಹೊಂದಿದ್ದವರು ಇತರೆ ಕುಟುಂಬಗಳ ಜೊತೆ ಕೂಡು ಆಳುಗಳಾಗಿ ಕೆಲಸ ನಿರ್ವಹಿಸುತ್ತಿದ್ದರು. ಹೆಂಗಸರು ಪೈರು ಕೀಳುವ ಕೆಲಸ ಮಾಡಿದರೆ ಗಂಡಸರು ನಾಟಿ ಮಾಡುತ್ತಿದ್ದರು. ಗದ್ದೆಗಳಲ್ಲಿ ನಾಟಿ ಮಾಡುವುದೆಂದರೆ ಆನಂದವೋ ಆನಂದ. ಗದ್ದೆ ಬಯಲಲ್ಲಿ ಹಾದು ಹೋಗುವ ವ್ಯಕ್ತಿಗಳು ಯಾರೂ ಕೂಡ ಸುಮ್ಮನೆ ಹಾದು ಹೋಗುತ್ತಿರಲಿಲ್ಲ. ಗದ್ದೆಗಿಳಿದು ನಾಟಿ ನೆಟ್ಟು ಹೋಗುತ್ತಿದ್ದ ದಿನಗಳಿದ್ದವು.

 

ಹೆಚ್ಚಿನ ಜನರು ಗದ್ದೆಯನ್ನು ಎತ್ತುಗಳನ್ನು ಬಳಸಿ ಉಳುಮೆ ಮಾಡುತ್ತಿದ್ದರು. ಮುಂಜಾನೆ ಐದು ಗಂಟೆಗೆಲ್ಲ ಉಳುಮೆಗೆ ಗದ್ದೆಗಿಳಿದು ಬಿಡುತ್ತಿದ್ದರು. ಆಗೆಲ್ಲ ವಾರಾನುಗಟ್ಟಲೆ ಮಳೆ ಬಿಡುವು ನೀಡದೆ ಒಂದೇ ಸಮನೆ ಸುರಿಯುತ್ತಿರುತ್ತಿತ್ತು. ಆದರೆ ಅದನ್ನು ಲೆಕ್ಕಿಸದೆ ಸುರಿಯುವ ಮಳೆಯಲ್ಲೇ ಮುಂಜಾನೆ ಐದಕ್ಕೆ ಉಳುಮೆ ಶುರು ಮಾಡಿ ಹತ್ತು, ಹನ್ನೊಂದು ಗಂಟೆಗೆ ಉಳುಮೆ ನಿಲ್ಲಿಸುತ್ತಿದ್ದರು. ದೊಡ್ಡ ಗದ್ದೆಗಳಲ್ಲಿ ಹತ್ತಾರು ಜನ ಹರಟೆ ಹೊಡೆಯುತ್ತಾ ಹಳೆಯ ಕಥೆಗಳನ್ನು ಹೇಳುತ್ತಾ ಖುಷಿ ಖುಷಿಯಾಗಿ ನಾಟಿ ಮಾಡುತ್ತಿದ್ದರು.

 

ಪೊಲೀಸ್, ಸೇನೆ, ಇನ್ನಿತರ ಕೆಲಸಗಳ ಮೇಲೆ ಊರಿಂದ ಹೊರಗೆ ಹೋದವರು ನಾಟಿ ಸಮಯದಲ್ಲಿ ಊರಿಗೆ ಬರುವ ಪ್ರಯತ್ನ ಮಾಡುತ್ತಿದ್ದರು. ಅಷ್ಟೇ ಅಲ್ಲ ಮದುವೆ ಮಾಡಿ ಕಳುಹಿಸಿದ ಹೆಣ್ಣು ಮಗಳು ಕೂಡ ಆ ಸಮಯದಲ್ಲಿ ತವರಿಗೆ ಬಂದು ಸಹಾಯ ಮಾಡುತ್ತಿದ್ದಳು. ಸಾಮಾನ್ಯವಾಗಿ ಎಷ್ಟೇ ಓದಿದ್ದರೂ ಹೆಣ್ಣು ಮಕ್ಕಳು ಪೈರು ಕೀಳುವುದನ್ನು, ಗಂಡು ಮಕ್ಕಳು ನಾಟಿ ನೆಡುವುದನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿತು ಬಿಡುತ್ತಿದ್ದರು. ಅವತ್ತಿಗೆ ಎಷ್ಟು ಎಕರೆ ಗದ್ದೆಯಿದೆ ಎಂಬುದರ ಮೇಲೆ ಆತನ ಶ್ರೀಮಂತಿಕೆಯನ್ನು ಅಳೆಯಲಾಗುತ್ತಿತ್ತು. ಅದರಲ್ಲೂ ನೀರಾವರಿ ಭೂಮಿಯಿದ್ದರಂತೂ ಆತನ ಬಗ್ಗೆ ಮಾತನಾಡುವಂತಿರಲಿಲ್ಲ.

 

ನಾಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು. ಅದರಲ್ಲೂ ದೊಡ್ಡ ನಾಟಿಯಂದು ಭೂರಿ ಬೋಜನ ನಡೆಯುತ್ತಿತ್ತು. ಗದ್ದೆಯಲ್ಲಿ ಕೊಡಿನಾಟಿ ನೆಡುವ ಪರಿಣಿತರಿದ್ದರು. ಅದು ಗದ್ದೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಗದ್ದೆಯನ್ನು ವಿಭಜಿಸಿ ಎದ್ದು ಕಾಣುತ್ತಿತ್ತು. ಆ ನಂತರ ದೊಡ್ಡಗದ್ದೆಯಲ್ಲಿ ನಾಟಿಯ ಬಳಿಕ ಓಟ ನಡೆಯುತ್ತಿತ್ತು. ಗೆದ್ದವರಿಗೆ ಹಣ, ಬಾಳೆಗೊನೆ, ತೆಂಗಿನ ಕಾಯಿ ನೀಡಿ ಗೌರವಿಸಲಾಗುತ್ತಿತ್ತು. ಅದೊಂದು ಮನರಂಜನೆ ಜೊತೆಗೆ ಊರಿಗೊಬ್ಬ ಓಟಗಾರ ಹುಟ್ಟು ಹಾಕುತ್ತಿತ್ತು.

 

ಗದ್ದೆಯಲ್ಲಿ ನಾಟಿ ಕೆಲಸ ಮುಗಿಸಿ ಏಲಕ್ಕಿ ತೋಟದ ಕೆಲಸ ಮಾಡುತ್ತಿದ್ದರು. ಆಗಸ್ಟ್ ಸೆಪ್ಟಂಬರ್ ವೇಳೆಗೆ ಏಲಕ್ಕಿ ಫಸಲಿಗೆ ಬರುತ್ತಿತ್ತು ಜತೆಗೆ ಒಂದಷ್ಟು ಆದಾಯವನ್ನು ತಂದುಕೊಡುತ್ತಿತ್ತು. ಏಲಕ್ಕಿ ಬೆಳೆಗಾರ ಶ್ರೀಮಂತನಾಗಿಯೇ ಇದ್ದ. ಆಧುನಿಕತೆ ಅಷ್ಟೊಂದು ಬೆಳೆಯದ ಕಾರಣದಿಂದಾಗಿ ಅದಕ್ಕೆ ರೋಗಗಳು ಅಷ್ಟೊಂದಾಗಿ ತಗುಲಿರಲಿಲ್ಲ. ಆದರೆ 90ರ ದಶಕದ ನಂತರ ಕೊಡಗಿನಲ್ಲಿ ಒಂದಷ್ಟು ಬದಲಾವಣೆಗಳಾದವು. ಅದು ಏನೆಂದರೆ ಬ್ರೆಜಿಲ್‍ನಲ್ಲಿ ಶೀತ ಹವೆಯಿಂದ ಕಾಫಿ ನೆಲಕಚ್ಚಿತ್ತು. ಇದೇ ವೇಳೆಗೆ ಭಾರತದಲ್ಲಿಯೂ ಕಾಫಿ ಮಂಡಳಿಯ ಮುಷ್ಠಿಯಲ್ಲಿದ್ದ ಕಾಫಿಯನ್ನು ಮುಕ್ತ ಮಾರುಕಟ್ಟೆಗೆ ತರುವಂತೆ ಹೋರಾಟಗಳು ಆರಂಭವಾಗಿದ್ದವು. ಅದು ಫಲಕೊಟ್ಟು ಕಾಫಿ ಮುಕ್ತ ಮಾರುಕಟ್ಟೆಗೆ ಬಂದಿತ್ತು. ಜತೆಗೆ ಕಾಫಿಗೂ ಮೊದಲಿದ್ದ ದರ ದುಪ್ಪಟ್ಟಾಯಿತು.

 

ಇದ್ದಕ್ಕಿದ್ದಂತೆ ಜನರಿಗೆ ಕಾಫಿ ತೋಟದತ್ತ ವ್ಯಾಮೋಹ ಜಾಸ್ತಿಯಾಯಿತು. ಅದೇ ವೇಳೆಗೆ ಏಲಕ್ಕಿಗೂ ಕಟ್ಟೆರೋಗ ಆರಂಭವಾಗಿ ಅದನ್ನು ಬೆಳೆಯುವುದು ಕಷ್ಟವಾಗಿ ಕಾಣತೊಡಗಿತು. ಮಳೆಯ ಅನಿಶ್ಚಿತತೆಯೂ ಇದೇ ವೇಳೆಗೆ ಆರಂಭವಾಗಿತ್ತು. ಮಳೆಯ ನೀರನ್ನೇ ನಂಬಿ ಭತ್ತ ಬೆಳೆಯುತ್ತಿದ್ದ ರೈತನಿಗೂ ಸಮಸ್ಯೆಗಳು ಆರಂಭವಾಗಿದ್ದವು. ಒಂದಡೆ ಏಲಕ್ಕಿ ತೋಟವನ್ನು ಕಾಫಿ ತೋಟವನ್ನಾಗಿ ಪರಿವರ್ತಿಸಿದರೆ ಮತ್ತೊಂದೆಡೆ ಭತ್ತದ ಗದ್ದೆಯನ್ನು ಕೂಡ ಕಾಫಿ ತೋಟವನ್ನಾಗಿ ಮಾಡಲು ರೈತರು ಮುಂದಾದರು. ಇದೆಲ್ಲವೂ ಸಮಾರೋಪಾದಿಯಲ್ಲಿ ಸಾಗುತ್ತಿರುವಾಗಲೇ ಕೇರಳದಿಂದ ಶುಂಠಿ ಬೆಳೆಯಲು ಬೆಳೆಗಾರರು ಕೊಡಗಿನತ್ತ ಬಂದರು. ಅವರಿಗೆ ತಮ್ಮ ಗದ್ದೆಯನ್ನು ಗುತ್ತಿಗೆಗೆ ನೀಡಿದ ಕೆಲವು ರೈತರು ಕ್ರಮೇಣ ತೋಟ ಮಾಡಿದರು.

 

ಲಾಭ ನಷ್ಟಗಳ ಲೆಕ್ಕಾಚಾರ ಮಾಡಿದ ಬಹಳಷ್ಟು ರೈತರು ಭತ್ತ ಬೆಳೆಯುವುದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗುತ್ತಿರುವುದನ್ನು ಮನಗಂಡು ಪಾಳು ಬಿಟ್ಟರು. ಇನ್ನು ಕೆಲವರು ನಿವೇಶನಗಳನ್ನಾಗಿ ಪರಿವರ್ತಿಸಿದರು. ಈಗ ಮೊದಲಿಗೆ ಹೋಲಿಸಿದರೆ ಗದ್ದೆಗಳ ವ್ಯಾಪ್ತಿ ಕಡಿಮೆಯಾಗಿದೆ. ದನ ಸಾಕೋರು ಇಲ್ಲ ಹೀಗಾಗಿ ಸಗಣಿ ಗೊಬ್ಬರವಿಲ್ಲ. ಯಂತ್ರಗಳ ಮೂಲಕವೇ ಕೆಲಸ ಕಾರ್ಯಗಳು ನಡೆಯುತ್ತವೆ. ಮೊದಲಿನ ಸಂತೋಷವಿಲ್ಲ ಏಕೆಂದರೆ ಮಳೆಯನ್ನು ನಂಬಿ ಭತ್ತ ಬೆಳೆಯುತ್ತಿರುವ ರೈತ ಈಗ ಸಂಕಷ್ಟವನ್ನೇ ಅನುಭವಿಸುತ್ತಿದ್ದಾನೆ.

 

ಪ್ರತಿ ವರ್ಷ ಗದ್ದೆ ನೆಡುವುದು ಕೂಡ ಕಷ್ಟವಾಗುತ್ತಿದೆ. ಕೊಡಗಿನ ಮಟ್ಟಿಗೆ ಹೇಳುವುದಾದರೆ ಭತ್ತ ದೊಡ್ಡ ಮಟ್ಟದ ಆದಾಯ ತರುವ ಕೃಷಿಯಾಗಿ ಉಳಿದಿಲ್ಲ ಹೀಗಾಗಿ ಅದರ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಾ ಹೋಗುತ್ತಿದೆ. ಜತೆಗೆ ಅದರ ವೈಭವೂ ಮಸುಕಾಗುತ್ತಿದೆ...